ಬೆಂಗಳೂರು ಅ.09: ಆಗಸ್ಟ್, ಸೆಪ್ಟೆಂಬರ್ ತಿಂಗಳಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆ (Rain) ಆಗಿದೆ. ಜೂನ್ ತಿಂಗಳಿನಲ್ಲಿ ಶೇಕಡಾ 56ರಷ್ಟು ಮಳೆಯಾಗಿದೆ. ಈ ವಿಚಾರವವನ್ನು ಕೇಂದ್ರ ಸರ್ಕಾರ (Central Government) ಗಂಭೀರವಾಗಿ ಪರಿಗಣಿಸಬೇಕು. 195 ತಾಲೂಕುಗಳನ್ನು ಬರಪೀಡಿತ (Drought) ಎಂದು ಘೋಷಣೆ ಮಾಡಲಾಗಿದೆ. ಇನ್ನೂ 41 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಆಗಿಲ್ಲ. 21 ತಾಲೂಕುಗಳಲ್ಲಿ ಸಮೀಕ್ಷೆ ಮಾಡಲು ತೀರ್ಮಾನ ಮಾಡಲಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಉದ್ಯೋಗಕ್ಕೆ ಬರುವವರ ಕೂಲಿ ಬಾಕಿ ಇದೆ. ಹೀಗಾಗಿ ಕೇಂದ್ರ ಸರ್ಕಾರ 475 ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಕಂದಾಯ ಇಲಾಖೆ ಸಚಿವ ಕೃಷ್ಣಭೈರೇಗೌಡ (Krishna Byregowda) ಆಗ್ರಹಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಬರ ಅಧ್ಯಯನಕ್ಕೆ ಬಂದಿದ್ದ ಕೇಂದ್ರ ಸರ್ಕಾರದ ತಂಡ ರಾಜ್ಯದ್ಯಂತ ಪ್ರವಾಸ ಮಾಡಿದ್ದಾರೆ. ಬರಗಾಲ, ನರೇಗಾ ಕಾಮಗಾರಿ ಕುರಿತಂತೆ ಎಲ್ಲವನ್ನೂ ಗಮನಿಸಿದ್ದಾರೆ. ಕೆಂದ್ರದ ಗೃಹ ಸಚಿವರು ಮತ್ತು ಕೃಷಿ ಸಚಿವರನ್ನು ಭೇಟಿ ಮಾಡಿ ವರದಿ ಸಲ್ಲಿಸಲು ಸಮಯ ಕೇಳಿದ್ದೇವೆ. ನಮ್ಮ ಅಧಿಕಾರಿಗಳು ಕೇಂದ್ರದ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಗದಗ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಹೇಳೋರಿಲ್ಲ, ಕೇಳೋರಿಲ್ಲ! ಮತ್ತೊಂದೆಡೆ ಭೀಕರ ಬರಗಾಲದಿಂದ ಅನ್ನದಾತರು ವಿಲವಿಲ!
ಇನ್ನು ಅಧ್ಯಯನ ತಂಡಕ್ಕೆ ನಾವು ನೀಡಿದ ವರದಿ ಬರದ ಪರಿಸ್ಥಿತಿ ವಸ್ತುಸ್ಥಿತಿಯಿಂದ ಕೂಡಿದೆ. ಬರುವ ದಿನಗಳಲ್ಲಿ ಹಿಂಗಾರು ಪರಿಸ್ಥಿತಿಗೂ ತೊಂದರೆ ಆಗಬಹುದು. ಕುಡಿಯುವ ನೀರಿಗೂ ತೊಂದರೆ ಆಗಬಹುದು ಅಂತ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಕೇಂದ್ರ ಅಧ್ಯಯನ ತಂಡದ ಅಧಿಕಾರಿಗಳು ಸಹ ನಮ್ಮ ವರದಿ ವಸ್ಥು ಸ್ಥಿತಿಯಿಂದ ಕೂಡಿದೆ ಅಂತ ಹೇಳಿದ್ದಾರೆ. ನಮ್ಮಿಂದ ಕೆಲವು ಅಂಕಿ ಅಂಶಗಳನ್ನು ಕೇಳಿದ್ದಾರೆ. ಅವುಗಳನ್ನು ಒದಗಿಸಿ ಕೊಡಲಾಗುತ್ತೆ. ಅಧ್ಯಯನ ತಂಡ ಮುಂದಿನ ಒಂದು ವಾರದ ಒಳಗೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತದೆ ಎಂದು ತಿಳಿಸಿದ್ದಾರೆ.
ಕೇಂದ್ರದ ಅಧಿಕಾರಿಗಳ ತಂಡ 13 ಜಿಲ್ಲೆಗಳಲ್ಲಿನ ಬರ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿದೆ. ದೆಹಲಿಗೆ ವಾಪಸ್ ತೆರಳುವ ಮುನ್ನ ಕೇಂದ್ರದ ಅಧಿಕಾರಿಗಳು ರಾಜ್ಯ ಸರ್ಕಾರದ ಜೊತೆಗೆ ಸಭೆ ನಡೆಸಿದರು. ಸಭೆಯಲ್ಲಿ ನಾನು (ಕೃಷ್ಣಾ ಬೈರೆಗೌಡ), ಕೃಷಿ ಸಚಿವ ಚಲುವರಾಯಸ್ವಾಮಿ, ಸಹಕಾರ ಸಚಿವ ರಾಜಣ್ಣ ಸೇರಿದಂತೆ ಸರ್ಕಾರದ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು ಎಂದು ತಿಳಿಸಿದರು.
ರಾಜ್ಯದಲ್ಲಿ ತೀರ್ವ ಬರಗಾಲ ಆವರಿಸಿದ ಹಿನ್ನೆಲೆಯಲ್ಲಿ ನರೇಗಾ ಯೋಜನೆಯಡಿ ಈಗ ನಿಗದಿ ಪಡಿಸಿರುವ 100 ದಿನಗಳ ಉದ್ಯೋಗ ಅವಧಿಯನ್ನು 150 ದಿನಗಳಿಗೆ ಏರಿಸಬೇಕು. 1300 ಲಕ್ಷ ಮಾನವ ದಿನಗಳನ್ನು 1800 ಲಕ್ಷ ಮಾನವ ದಿನಗಳಿಗೆ ಏರಿಕೆ ಮಾಡಬೇಕೆಂದು ಕೋರಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:01 pm, Mon, 9 October 23