ಚಾಮರಾಜನಗರ: ಅನ್ಯಕೋಮಿನ ಯುವಕನೊಂದಿಗೆ ಮದ್ವೆ, ಮನೆಕಟ್ಟಿದ ಕುಟುಂಬಕ್ಕೆ ಬಹಿಷ್ಕಾರ
ಚಾಮರಾಜನಗರ ಜಿಲ್ಲೆಯ ಲಿಂಗರಾಜಪುರ ಗ್ರಾಮದಲ್ಲಿ ಎರಡು ಉಪ್ಪಾರ ಶೆಟ್ಟಿ ಕುಟುಂಬಗಳನ್ನು ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಒಂದು ಕುಟುಂಬ ಮನೆ ಕಟ್ಟಿದ್ದಕ್ಕೆ, ಇನ್ನೊಂದು ಅನ್ಯಕೋಮಿನ ಯುವಕನೊಂದಿಗಿನ ಮದುವೆಯಿಂದಾಗಿ ಬಹಿಷ್ಕಾರಕ್ಕೆ ಒಳಗಾಗಿದೆ. ಇನ್ನು ಪೊಲೀಸ್ ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ನಡೆಗೆ ಕುಟುಂಬಗಳು ಆಕ್ರೋಶ ವ್ಯಕ್ತಪಡಿಸಿವೆ.
ಚಾಮರಾಜನಗರ, ಡಿಸೆಂಬರ್ 12: ದೇಶಕ್ಕೆ ಸ್ವಾತಂತ್ಯ ಬಂದು ಅನೇಕ ದಶಕಗಳು ಕಳೆದರು ಕೂಡ ಇನ್ನು ಹಲವೆಡೆ ಅಸ್ಪ್ರಶ್ಯತೆ ಜೀವಂತವಾಗಿದೆ. ಇತ್ತೀಚೆಗೆ ದಲಿತರಿಗೆ ದೇಗುಲ ಪ್ರವೇಶ ನಿರಾಕರಿಸಲಾಗಿತ್ತು. ಆ ಮೂಲಕ ಬೆಂಗಳೂರಿನಿಂದ ಕೂಗಳತೆ ದೂರದಲ್ಲೇ ಅಸ್ಪೃಶ್ಯತೆ ಕಂಡುಬಂದಿತ್ತು. ಇದೀಗ ಗಡಿನಾಡು ಚಾಮರಾಜನಗರದಲ್ಲೂ (Chamarajanagar) ಇಂತದೊಂದು ಅನಿಷ್ಠ ಪದ್ದತಿ ಜೀವಂತವಾಗಿದೆ. ಗ್ರಾಮದ ಯಜಮಾನರು ಎರಡು ಕುಟುಂಬಗಳಿಗೆ ಬಹಿಷ್ಕಾರ ಹಾಕಿರುವ ಘಟನೆ ನಡೆದಿದೆ.
ಜಿಲ್ಲೆಯ ಚಾಮರಾಜನಗರ ತಾಲೂಕಿನ ಲಿಂಗರಾಜಪುರ ಗ್ರಾಮದಲ್ಲಿ ಈ ಘಟನೆ ಕಂಡುಬಂದಿದೆ. ಗೋವಿಂದ ಶೆಟ್ಟಿ ಹಾಗೂ ಸಿದ್ದರಾಜು ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಗೋವಿಂದ ಶೆಟ್ಟಿ ಗ್ರಾಮದಲ್ಲಿ ಮನೆ ಕಟ್ಟಿದ್ದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದರೆ, ಅನ್ಯಕೋಮಿನ ಯುವಕನನ್ನ ಪ್ರೀತಿಸಿ ಮದುವೆಯಾಗಿದ್ದಕ್ಕೆ ಸಿದ್ದರಾಜು ಕುಟುಂಬವನ್ನು ಬಹಿಷ್ಕಾರ ಹಾಕಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಿಂದ ಕೂಗಳತೆ ದೂರದಲ್ಲೇ ಅಸ್ಪೃಶ್ಯತೆ: ದಲಿತರಿಗೆ ದೇಗುಲ ಪ್ರವೇಶ ನಿರಾಕರಣೆ
ಉಪ್ಪಾರ ಶೆಟ್ಟಿ ಸಮುದಾಯಕ್ಕೆ ಸೇರಿದ ಎರಡು ಕುಟುಂಬಕ್ಕೂ ಉಪ್ಪಾರಶೆಟ್ಟಿ ಸಮುದಾಯದ ಮುಖಂಡರಿಂದ ಬಹಿಷ್ಕಾರ ಹಾಕಲಾಗಿದೆ. ಎಸ್.ಪಿ ಹಾಗೂ ಜಿಲ್ಲಾಧಿಕಾರಿಗಳಿಗೆ ವಿಷಯ ಗೊತ್ತಿದ್ದರು ಜಿಲ್ಲಾಡಳಿತ ಮೌನಕ್ಕೆ ಜಾರಿದೆ. ನೆಪ ಮಾತ್ರಕ್ಕೆ ಎಸ್ಪಿ ಬಿ.ಟಿ ಕವಿತಾ ಅವರು ತಮ್ಮ ಸಿಬ್ಬಂದಿಯನ್ನು ಕಳುಹಿಸಿ ಕೊಟ್ಟಿದ್ದಾರೆ. ಎಸ್ಪಿ ಕವಿತಾ ನಡೆಗೆ ನೊಂದ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
ದೇವಸ್ಥಾನ ಬಳಿ ಬಂದ ದಲಿತ ವ್ಯಕ್ತಿ ಹಾಗೂ ಸವರ್ಣಿಯನ ನಡುವೆ ಗಲಾಟೆ
ಇನ್ನು ಇತ್ತೀಚೆಗೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಉಗಲವಾಟ ಗ್ರಾಮದಲ್ಲಿ ಇಬ್ಬರು ಯುವಕರ ನಡುವಿನ ವೈಮನಸ್ಸು ಜಾತಿ ಸಂಘರ್ಷಕ್ಕೆ ಕಾರಣವಾಗಿತ್ತು. ಸೆಪ್ಟೆಂಬರ್ 10ರಂದು ಗ್ರಾಮದ ದ್ಯಾಮವ್ವದೇವಿ ದೇವಸ್ಥಾನದ ಬಳಿ ದಲಿತ ಸಮುದಾಯದ ಅರ್ಜುನ್ ಮಾದರ ಹಾಗೂ ನಿಂಗರೆಡ್ಡಿ ತಿಮ್ಮಾಪುರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿತ್ತು. ದೇವಸ್ಥಾನ ಪ್ರವೇಶ ಮಾಡಿದ ಹಿನ್ನೆಲೆ ಗಲಾಟೆ ಮಾಡಿದ್ದಾರೆಂದು ಕೋಪಗೊಂಡ ದಲಿತ ವ್ಯಕ್ತಿ ಅರ್ಜುನ್ ಮನೆಯಿಂದ ಕುಡಗೋಲು ತಂದು ನಿಂಗರೆಡ್ಡಿ ಕಾಲಿಗೆ ಹಲ್ಲೆ ಮಾಡಿದ್ದ.
ಇದನ್ನೂ ಓದಿ: ಕೊಪ್ಪಳ: ಅಸ್ಪೃಶ್ಯತೆ ನಿವಾರಣೆಗೆ ಹೊಸ ಆಂದೋಲನ; ದೇವಸ್ಥಾನ ಪ್ರವೇಶಿಸಿದ ದಲಿತ ಬಾಲಕನ ಹೆಸರಿನಲ್ಲೇ ನೂತನ ಯೋಜನೆ ಆರಂಭ
ಇದರಿಂದ ರೊಚ್ಚಿಗೆದ್ದ ಗುಂಪು ಅರ್ಜುನ್ ಮಾದರನನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ್ದರು. ಬಳಿಕ ಇನ್ನು ಮುಂದೆ ಊರಿನಲ್ಲಿ ಕೇರಿಯ ಜನ ಬರುವಂತಿಲ್ಲ, ಊರಿನ ಜನ ಕೇರಿಯಲ್ಲಿ ಹೋಗುವಂತಿಲ್ಲ ಎಂದು ಗ್ರಾಮಸ್ಥರು ಡಂಗುರ ಸಾರಿಸಿದ್ದರು. ವಿಷಯ ತಿಳಿದ ಗ್ರಾಮಕ್ಕೆ ಭೇಟಿ ನೀಡಿದ ದಲಿತ ಸಂಘಟನೆಗಳ ಮುಖಂಡರು, ದಲಿತ ಯುವಕ ದೇವಸ್ಥಾನ ಪ್ರವೇಶ ಮಾಡಿದಕ್ಕೆ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಲಾಗಿದೆ. ಗ್ರಾಮದಲ್ಲಿ ದಲಿತರಿಗೆ ಬಹಿಷ್ಕಾರ ಹಾಕಿದ್ದಾರೆ ಎಂದು ಆರೋಪಿಸಿ ಸೆಪ್ಟೆಂಬರ್ 14 ರಂದು ಕೆರೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:03 pm, Thu, 12 December 24