ಕೊಪ್ಪಳ: ಅಸ್ಪೃಶ್ಯತೆ ನಿವಾರಣೆಗೆ ಹೊಸ ಆಂದೋಲನ; ದೇವಸ್ಥಾನ ಪ್ರವೇಶಿಸಿದ ದಲಿತ ಬಾಲಕನ ಹೆಸರಿನಲ್ಲೇ ನೂತನ ಯೋಜನೆ ಆರಂಭ
ಮಗು ಆಕಸ್ಮಿಕವಾಗಿ ಮಗು ದೇವಸ್ಥಾನವನ್ನು ಪ್ರವೇಶಿಸಿತ್ತು. ಮಗು ದೇವಸ್ಥಾನ ಪ್ರವೇಶಿಸಿದ್ದಕ್ಕೆ ದೇವಸ್ಥಾನ ಮೈಲಿಗೆಯಾಗಿದ್ದು, ಅಶುದ್ಧಗೊಂಡಿದೆ ಎಂದು ವಿನಯ್‌ನ ಪಾಲಕರಿಗೆ ಗ್ರಾಮಸ್ಥರು 25 ಸಾವಿರ ರೂ. ದಂಡ ನೀಡುವಂತೆ ಒತ್ತಾಯಿಸಿದ್ದರು. ಈ ಅಸ್ಪೃಶ್ಯತೆ ಆಚರಣೆಯೂ ತಡವಾಗಿ ಬೆಳಕಿಗೆ ಬಂದಿದ್ದರಿಂದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ವಯಂ ಪ್ರೇರಿತ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಭಂದಿಸಿದಂತೆ ಮೀಯಾಪುರ ಗ್ರಾಮದ ಐವರನ್ನು ಬಂಧಿಸಲಾಗಿತ್ತು.
ಕೊಪ್ಪಳ: ಆ ಘಟನೆ ಇಡೀ ಮನುಕುಲ ತಲೆ ತಗ್ಗಿಸುವಂತೆ ಮಾಡಿತ್ತು. ಇಂದಿನ ಆಧುನಿಕ ಕಾಲದಲ್ಲೂ ಅನಿಷ್ಟ ಪದ್ಧತಿ ಅಲ್ಲಿ ಜೀವಂತವಿತ್ತು. ದಲಿತ ಬಾಲಕ (Dalit Boy) ದೇವಸ್ಥಾನ ಪ್ರವೇಶ ಮಾಡಿದಾ ಅನ್ನೋ ಕಾರಣಕ್ಕೆ ಗ್ರಾಮದ ಜನ ಬಾಲಕನ ಕುಟುಂಬಕ್ಕೆ ದಂಡ ಹಾಕಿದ್ರು. ಇದೀಗ ಆ ಘಟನೆಯೊಂದು ಒಂದು ಹೊಸ ಯೋಜನೆ ರೂಪಿಸಲು ಕಾರಣ ಆಗುತ್ತದೆ ಎಂಬುದು ಸುಳ್ಳಲ್ಲ. ಇದಕ್ಕೆ ಸರ್ಕಾರ (State Government) ಘೋಷಿಸಿರುವ ವಿನಯ ಸಾಮರಸ್ಯ ಯೋಜನೆಯೇ ಸಾಕ್ಷಿಯಾಗಿದೆ. ಅದರಲ್ಲೂ ಘಟನೆಗೆ ಕಾರಣವಾದ ಮಗುವಿನ ಹೆಸರಿನಲ್ಲಿಯೇ (Name) ಯೋಜನೆ ರೂಪಿಸುವುದು ವಿಶೇಷವಾಗಿದೆ.
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಮೀಯಾಪುರ ಗ್ರಾಮದಲ್ಲಿ ಕಳೆದ ವರ್ಷ ನಡೆದ ಅಸ್ಪೃಸ್ಯತೆ ಆಚರಣೆ ರಾಜ್ಯಾದ್ಯಂತ ಭಾರಿ ಸದ್ದು ಮಾಡಿತ್ತು. ಈ ಘಟನೆಗೆ ವಿನಯ್ ಎಂಬ ಐದು ವರ್ಷದ ಮಗು ಕಾರಣವಾಗಿತ್ತು. ಈಗ ಇತನ ಹೆಸರಲ್ಲಿ ವಿನಯ್ ಸಾಮರಸ್ಯ ಎಂಬ ಯೋಜನೆಯೊಂದನ್ನು ಸರ್ಕಾರ ಜಾರಿಗೊಳಿಸುವ ಮೂಲಕ ಅಸ್ಪೃಶ್ಯತೆ ನಿವಾರಣೆಗೆ ಆಂದೋಲನವನ್ನು ಸರ್ಕಾರ ಆರಂಭಿಸಿದೆ.
ಅಸ್ಪೃಶ್ಯತಾ ಆಚರಣೆ ನಿಷೇಧ ಕಾಯ್ದೆ ಜಾರಿಗೊಳಿಸಿ ಶತಮಾನ ವರ್ಷಗಳು ಕಳೆದರೂ ಕೂಡಾ ಈಗಲೂ ಸಹ ಗ್ರಾಮೀಣ ಭಾಗಗಳಲ್ಲಿ ಅಸ್ಪೃಶ್ಯತೆ ಎಂಬ ಅನಿಷ್ಠ ಪದ್ಧತಿ ಆಚರಣೆಯಲ್ಲಿರುವುದು ನೋವಿನ ಸಂಗತಿಯಾಗಿದೆ. ಅಸ್ಪೃಶ್ಯತೆ ನಿವಾರಣೆಗಾಗಿಯೇ ಸರ್ಕಾರ ಹಾಗೂ ಸಂವಿಧಾನವೂ ವಿಶೇಷ ಕಾನೂನುಗಳನ್ನು ರೂಪಿಸಿದೆ. ಅಲ್ಲದೇ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿ ಬೀದಿ ನಾಟಕ, ಗೀಗಿ ಪದ ಸೇರಿದಂತೆ ವಿವಿಧ ರೀತಿಯ ಕಲೆ, ಕಲಾವಿದರು ಹಾಗೂ ಮಾಧ್ಯಮಗಳಿಂದ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಆದರೆ ಅನಿಷ್ಠ ಪದ್ಧತಿ ಮಾತ್ರ ಸಂಪೂರ್ಣವಾಗಿ ಕಣ್ಮರೆಯಾಗುತ್ತಿಲ್ಲ.
ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ಪ್ರತಿ ಜಿಲ್ಲೆಗಳಲ್ಲಿ ದೌರ್ಜನ್ಯ ಪ್ರತಿಬಂಧಕ ಕಾಯ್ದೆ ಅನ್ವಯ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ, ದೌರ್ಜನ್ಯ ತಡೆ ಸಮಿತಿಯನ್ನೂ ರಚಿಸಲಾಗಿದೆ. ಅಸ್ಪೃಶ್ಯತಾ ಆಚರಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಬಗ್ಗೆ ಮೂರು ತಿಂಗಳಿಗೊಮ್ಮೆ ಸಭೆ ನಡೆಸಲಾಗುತ್ತದೆ. ಸಭೆಯಲ್ಲಿ ಅಸ್ಪೃಶ್ಯತಾ ಆಚರಣೆಯ ಕುರಿತು ಜನಜಾಗೃತಿ ಕಾರ್ಯಕ್ರಮದ ಬಗ್ಗೆ ಸಮಾಜ ಕಲ್ಯಾಣ ಅಧಿಕಾರಿಗಳಿಂದ ಮಾಹಿತಿ ಪಡೆಯುವುದು. ಅಸ್ಪಶ್ಯತೆ ಆಚರಣೆ ಮತ್ತು ದೌರ್ಜನ್ಯ, ಜಾತಿ ನಿಂದನೆ ಪ್ರಕರಣಗಳ ಪ್ರಗತಿ ಕುರಿತು ಪೊಲೀಸ್ ಇಲಾಖೆಯಿಂದ ವಿವರ ಪಡೆಯಲಾಗುತ್ತದೆ.
ಪ್ರತಿ ತಿಂಗಳಿಗೊಮ್ಮೆ ಎಲ್ಲ ಜಿಲ್ಲೆಗಳಲ್ಲಿ ಪ್ರತಿ ತಿಂಗಳಿಗೊಮ್ಮೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುತ್ತದೆ. ಆದರೂ ಕೂಡಾ ಅಸ್ಪೃಶ್ಯತೆ ಆಚರಣೆ ತಡೆಗಟ್ಟುವಲ್ಲಿ ಯಾವುದೇ ಪ್ರಯೋಜನ ಆಗಿಲ್ಲ. ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಪ್ರಸ್ತುತ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಅಸ್ಪೃಶ್ಯತಾ ನಿವಾರಣೆಗಾಗಿ ವಿನಯ ಸಾಮರಸ್ಯ ಯೋಜನೆಯನ್ನು ಜಾರಿಗೊಳಿಸುತ್ತಿದ್ದೇವೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಮೀಯಾಪುರ ಗ್ರಾಮ ಅಸ್ಪೃಶ್ಯತೆ ಆಚರಣೆಗೆ ಒಳಗಾದ ಮಗು ವಿನಯ್ ಹೆಸರಿನಲ್ಲಿಯೇ ಅಸ್ಪೃಶ್ಯತೆ ನಿವಾರಣೆ ಆಂದೋಲನವನ್ನು ಆರಂಭಿಸಿದ್ದೇವೆ ಎಂದು ಹೇಳಿದ್ದು, ಈ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡು, ಸಮಾಜದಲ್ಲಿರುವ ಅಸ್ಪೃಶ್ಯತೆ ಎಂಬ ಅನಿಷ್ಠ ಪಿಡುಗು ನಿರ್ಮೂಲನೆ ಆಗಬೇಕಿದೆ.
ಏನಿದು ಘಟನೆ?
ಕಳೆದ ವರ್ಷ ಜಿಲ್ಲೆಯ ಕುಷ್ಟಗಿ ಮೀಯಾಪುರ ಗ್ರಾಮದ ಪರಿಶಿಷ್ಟ ಜಾತಿಗಳಲ್ಲೊಂದಾದ ಚನ್ನದಾಸರ ಸಮುದಾಯದ ಚಂದ್ರಶೇಖರ್ ಹಾಗೂ ಲಲಿತಾ ದಾಸರ್ ದಂಪತಿಗಳ ಪುತ್ರ ವಿನಯ್‌ನನ್ನು ಜನ್ಮದಿನದ ಹಿನ್ನಲೆ ಆಂಜನೇಯನ ದೇವಸ್ಥಾನದ ಬಳಿ ಕರೆದೊಯ್ದಿದ್ದರು. ಆದರೆ ಮಗು ಆಕಸ್ಮಿಕವಾಗಿ ಮಗು ದೇವಸ್ಥಾನವನ್ನು ಪ್ರವೇಶಿಸಿತ್ತು. ಮಗು ದೇವಸ್ಥಾನ ಪ್ರವೇಶಿಸಿದ್ದಕ್ಕೆ ದೇವಸ್ಥಾನ ಮೈಲಿಗೆಯಾಗಿದ್ದು, ಅಶುದ್ಧಗೊಂಡಿದೆ ಎಂದು ವಿನಯ್‌ನ ಪಾಲಕರಿಗೆ ಗ್ರಾಮಸ್ಥರು 25 ಸಾವಿರ ರೂ. ದಂಡ ನೀಡುವಂತೆ ಒತ್ತಾಯಿಸಿದ್ದರು. ಈ ಅಸ್ಪೃಶ್ಯತೆ ಆಚರಣೆಯೂ ತಡವಾಗಿ ಬೆಳಕಿಗೆ ಬಂದಿದ್ದರಿಂದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ವಯಂ ಪ್ರೇರಿತ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಭಂದಿಸಿದಂತೆ ಮೀಯಾಪುರ ಗ್ರಾಮದ ಐವರನ್ನು ಬಂಧಿಸಲಾಗಿತ್ತು.
ಇವರ ವಿರುದ್ಧ ಅಸ್ಪೃಶ್ಯತೆ ಅಚರಣೆ, ಜಾತಿ ನಿಂದನೆ ಪ್ರಕರಣ ದಾಖಲಾಗಿತ್ತು. ಅಲ್ಲದೇ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗವೂ ಈ ಘಟನೆ ಕುರಿತು ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನೋಟಿಸ್ ಕೂಡಾ ನೀಡಿತ್ತು. ಆದ್ರೆ ಐದು ಜನ ಬಂಧಿತರು ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಜಾಮೀನಿನ ಮೇಲೆ ಹೊರ ಬಂದ ಬಳಿಕ ಬಾಲಕನ ತಂದೆ-ತಾಯಿ ಇದೀಗ ಗ್ರಾಮವನ್ನು ತೊರೆದು ಮತ್ತೊಂದು ಗ್ರಾಮದಲ್ಲಿ ವಾಸ ಮಾಡುತ್ತಿದ್ದಾರೆ. ಬಾಲಕನ ತಂದೆ ಚಂದ್ರಶೇಖರ್ ಸದ್ಯ ಯಲಬುರ್ಗಾ ತಾಲೂಕಿನ ಕುಡುಗುಂಟಿ ಗ್ರಾಮದಲ್ಲಿ ವಾಸ ಮಾಡ್ತಿದ್ದು, ಘಟನೆ ಇಂದ ನೊಂದು ಮತ್ತೊಂದು ಕಡೆ ವಾಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದೀಗ ಸರ್ಕಾರ ಹೊಸ ಯೋಜನೆಗೆ ಹೆಸರಿಟ್ಟಿದ್ದು ಒಂದು ಕಡೆ ಸಂತೋಷ ಆದ್ರೆ, ಮತ್ತೊಂದು ಕಡೆ ಬಾಲಕನ ತಂದೆಗೆ ಬೇಸರವಾಗಿದೆ.
ಇದೀಗ ಸರ್ಕಾರ ಹೊಸ ಯೋಜನೆಗೆ ನನ್ನ ಮಗನ ಹೆಸರಟ್ಟಿದ್ದು, ಸಂತೋಷವೆ. ನನ್ನ ಮಗ ದೇವಸ್ಥಾನ ಪ್ರವೇಶ ಮಾಡಿದ್ದೇ ತಪ್ಪು ಎಂದು ದಂಡ ಹಾಕಿದ್ರು, ಇಂತಹ ಅನಿಷ್ಟ ಪದ್ಧತಿ ವಿರುದ್ಧ ಹೋರಾಟ ಮಾಡಿದ್ದೆ. ಆ ಸಮಯದಲ್ಲಿ ಗ್ರಾಮಕ್ಕೆ ಜಿಲ್ಲಾಧಿಕಾರಿಗಳು, ಪೊಲೀಸರು ಭೇಟಿ ನೀಡಿದ್ರು, ದಂಡ ಹಾಕಿದ ಐವರು ಜೈಲು ಸೇರಿ ವಾಪಸ್ ಬಂದ ಬಳಿಕ ನಾನೇ ಗ್ರಾಮ ತೊರೆದು ಬೇರೆ ಕಡೆ ವಾಸ ಮಾಡುತ್ತಿದ್ದೇನೆ. ಇದೀಗ ಮಗನ ಹೆಸರಲ್ಲಿ ಯೋಜನೆ ಜಾರಿಯಾಗಿದ್ದು, ಸಮರ್ಪಕವಾಗಿ ಜಾರಿಯಾಗಬೇಕು. ಅನಿಷ್ಟ ಪದ್ಧತಿ ತೊಲಗಬೇಕು ಎಂದು ಬಾಲಕನ ತಂದೆ ಚಂದ್ರಶೇಖರ್ ಚನ್ನದಾಸರ್ ಬೇಸರ ವ್ಯಕ್ತಪಡಿಸಿದ್ದಾರೆ.
ವರದಿ: ಶಿವಕುಮಾರ್ ಪತ್ತಾರ್
ಇದನ್ನೂ ಓದಿ: R Ashok: ‘ಅಸ್ಪೃಶ್ಯತೆ ಹೇಗಿರುತ್ತದೆ ಎಂಬ ಅರಿವಾಗಿದೆ’; ಗ್ರಾಮ ವಾಸ್ತವ್ಯದ ನಂತರ ಸಚಿವ ಆರ್ ಅಶೋಕ್ ಹೇಳಿಕೆ