ಬಿಳಿ ನೊರೆಯ ಹಾಲಿನಂತೆ ಧುಮ್ಮಿಕ್ಕುತ್ತಿದ್ದಾಳೆ ಕಾವೇರಿ, ಪ್ರವಾಸಿಗರನ್ನು ಮೋಡಿ ಮಾಡುತ್ತಿದೆ ಭರಚುಕ್ಕಿ
ಸುತ್ತಲು ಹಸಿರಸಿರಿ... ಭೂಮಾತೆಗೆ ಮುಕಟವಿಟ್ಟಂತೆ ಕಾಣೋ ಗಿರಿಶಿಖರಗಳ ಸಾಲು.. ತಂಪಾಗಿ ಬೀಸೋ ಗಾಳಿ.. ಭೂರಮೆಯನ್ನ ಮುತ್ತಿಕ್ಕೋ ಜಲರಾಶಿ... ಬಿಳಿ ನೊರೆಯ ಹಾಲಿನಂತೆ ಚಿತ್ತಾರ... ಪ್ರಕೃತಿಯ ಸೊಬಗು ಹೆಚ್ಚಿಸೋ ನೀರಿನ ವೈಯ್ಯಾರ... ಇದು ಜಲಲ ಜಲಲ ಜಲಧಾರೆ.. ಭರಚುಕ್ಕಿಯ ಸೌಂದರ್ಯಧಾರೆ.
ಚಾಮರಾಜನಗರ: ಕನ್ನಡ ನಾಡಿನ ಜೀವ ನದಿ ಕಾವೇರಿ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನಲ್ಲಿ ಮೈದುಂಬಿ ಹರಿಯುತ್ತಿದ್ದಾಳೆ. ಹಸಿರು ಸೀರೆಯುಟ್ಟ ನವಸಿರಿ ನಡುವೆ ಭರಚುಕ್ಕಿಯಲ್ಲಿ ಧುಮ್ಮಿಕ್ಕುತ್ತಿದ್ದಾಳೆ. ಸುಮಾರು 80 ಅಡಿ ಎತ್ತರದಿಂದ ಧುಮ್ಮಿಕ್ಕುವ ಕಾವೇರಿ ನೀರು ಹಾಲ್ನೋರೆಯಂತೆ ಕಾಣುತ್ತಿದೆ. ಪ್ರಕೃತಿ ಸೊಬಗಿನ ಮಧ್ಯೆ ಹರಿಯುವ ಕಾವೇರಿ ವಯ್ಯಾರಕ್ಕೆ ಎಲ್ಲರೂ ಮನಸೋಲುವಂತೆ ಮಾಡಿದ್ದಾಳೆ. ಇಷ್ಟು ದಿನ ಕೊರೊನಾ ಕಾಟದಿಂದ ಮನೆಯಲ್ಲಿ ಕುಳಿತಿದ್ದ ಪ್ರವಾಸಿಗರು ಈಗ ಭರಚುಕ್ಕಿಯ ಅಂದವನ್ನ ಸವಿಯುತ್ತಿದ್ದಾರೆ.
ಮುಂಗಾರು ಮಳೆ ಚುರುಕಾಗಿರುವುದರಿಂದ ಭರಚುಕ್ಕಿ ಜಲಪಾತಕ್ಕೆ ಜೀವ ಕಳೆ ಬಂದಿದೆ. ಬೆಂಗಳೂರಿನಿಂದ 100 ಕಿಲೋಮೀಟರ್, ಮೈಸೂರಿನಿಂದ 80 ಕಿಲೋಮೀಟರ್ ದೂರದಲ್ಲಿ ಇರುವ ಭರಚುಕ್ಕಿ ಪ್ರವಾಸಿಗರ ಅಚ್ಚುಮೆಚ್ಚಿನ ಕೇಂದ್ರವಾಗಿದೆ. ಪ್ರವಾಸಿಗರು ಭರಚುಕ್ಕಿಯ ಅಂದ ಸವಿಯುತ್ತಾ, ಸೆಲ್ಫಿ ತೆಗೆದುಕೊಳ್ಳುತ್ತಾ ಮಸ್ತ್ ಮಜಾ ಮಾಡುತ್ತಿದ್ದಾರೆ. ಆದ್ರೆ ದೈಹಿಕ ಅಂತರ.. ಮಾಸ್ಕ್ ಕಾಣೆಯಾಗಿದೆ.
ಒಟ್ನಲ್ಲಿ, ಕಾನನದ ನಡುವೆ ಬೀಳ್ತಿರೋ ಕಾವೇರಿಯ ಅಂದ ಕಣ್ತುಂಬಿಕೊಳ್ಳಲು, ದಿನ ನಿತ್ಯ ಸಾವಿರಾರು ಪ್ರವಾಸಿಗರು ಜನ ಬರುತ್ತಿದ್ದಾರೆ. ಜಾಲಿ ರೈಡ್ ಮುಗಿಸಿ, ಜಲಪಾತದ ಸೊಬಗು ಕಂಡು ಎಲ್ರೂ ಖುಷ್ ಆಗ್ತಿದ್ದಾರೆ.
ಇದನ್ನೂ ಓದಿ: Weight Loss Tips: ರಾತ್ರಿ ಮಲಗುವ ಮೊದಲು ಮಾಡುವ ಈ ತಪ್ಪುಗಳು ದೇಹದ ತೂಕ ಹೆಚ್ಚಾಗುವಂತೆ ಮಾಡುತ್ತವೆ