ಚಾಮರಾಜನಗರ: ಖಾಸಗಿ ಶಾಲೆಗಳನ್ನೂ ಮೀರಿಸಿದೆ ಸುಸಜ್ಜಿತ ಸರ್ಕಾರಿ ಶಾಲೆ! ಹಳೆ ವಿದ್ಯಾರ್ಥಿಗಳೇ ಕಟ್ಟಿದ್ರು ಹೈಟೆಕ್ ಸ್ಕೂಲ್

ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಸರ್ಕಾರಿ ಶಾಲೆಯ ಹಳೆ ವಿದ್ಯಾರ್ಥಿಗಳು ಮಾದರಿಯ ಕಾರ್ಯವೊಂದನ್ನು ಮಾಡಿದ್ದಾರೆ. ಈ ಶಾಲೆಯ ಹಳೆ ವಿದ್ಯಾರ್ಥಿಯೂ ಆಗಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಮರಿಸ್ವಾಮಿ ನೇತೃತ್ವದಲ್ಲಿ ಸರ್ಕಾರಿ ಶಾಲೆಗೆ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಬರೋಬ್ಬರಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಹೈಟೆಕ್ ಸರ್ಕಾರಿ ಶಾಲೆ ಲೋಕಾರ್ಪಣೆಗೆ ಸಿದ್ಧವಾಗಿದೆ.

ಚಾಮರಾಜನಗರ: ಖಾಸಗಿ ಶಾಲೆಗಳನ್ನೂ ಮೀರಿಸಿದೆ ಸುಸಜ್ಜಿತ ಸರ್ಕಾರಿ ಶಾಲೆ! ಹಳೆ ವಿದ್ಯಾರ್ಥಿಗಳೇ ಕಟ್ಟಿದ್ರು ಹೈಟೆಕ್ ಸ್ಕೂಲ್
ಸತ್ತೇಗಾಲ ಸರ್ಕಾರಿ ಶಾಲೆ
Edited By:

Updated on: Dec 05, 2024 | 9:47 AM

ಚಾಮರಾಜನಗರ, ಡಿಸೆಂಬರ್ 5: ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲದಲ್ಲಿರುವ ಆ ಸರ್ಕಾರಿ ಶಾಲೆಯಲ್ಲಿ ಕಲಿತ ಎಷ್ಟೋ ವಿದ್ಯಾರ್ಥಿಗಳ ಬದುಕು ಹಸನಾಗಿದೆ. ಕೆಲವರು ಉನ್ನತ ಅಧಿಕಾರಿಗಳಾಗಿದ್ದರೆ ಮತ್ತೆ ಕೆಲವರು ಉನ್ನತ ಸ್ಥಾನಗಳಲ್ಲಿದ್ದಾರೆ. ಆದರೆ, ಶಾಲೆಯ ಸ್ಥಿತಿ ಮಾತ್ರ ಶೋಚನೀಯವಾಗಿತ್ತು. ಇದನ್ನು ಕಂಡ ಹಳೇ ವಿದ್ಯಾರ್ಥಿಗಳು ಚಂದಾ ಎತ್ತಿ ಸಾವಿರ ಅಲ್ಲ, ಲಕ್ಷ ಅಲ್ಲ, ಬರೋಬ್ಬರಿ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಖಾಸಗಿ ಶಾಲೆಗಳನ್ನೂ ಮೀರಿಸುವಂತಹ ಸುಸಜ್ಜಿತ ಶಾಲೆಯನ್ನು ನಿರ್ಮಿಸಿಕೊಟ್ಟು ಮಾದರಿಯಾಗಿದ್ದಾರೆ.

ಸತ್ತೇಗಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಖಾಸಗಿ ಶಾಲೆಗಳನ್ನೂ ಮೀರಿಸುವಂತಿದ್ದು, ಗಮನ ಸೆಳೆಯುತ್ತಿದೆ. 79 ವರ್ಷಗಳಷ್ಟು ಹಳೆಯದಾದ ಈ ಸರ್ಕಾರಿ ಶಾಲೆ ಬಹಳಷ್ಟು ಶಿಥಿಲಗೊಂಡಿತ್ತು. ಈವರೆಗೆ ಸಹಸ್ರಾರು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡಿ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಕೆಲವರು ಅಧಿಕಾರಿಗಳಾಗಿದ್ದರೆ ಮತ್ತೆ ಕೆಲವರು ವ್ಯಾಪಾರ, ವ್ಯವಹಾರ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಅವರ ಜೀವನ ಹಸನಾಗಿದೆ. ಆದರೆ ತಾವು ಓದಿದ ಶಾಲೆಯ ದುಸ್ಥಿತಿ ಕಂಡ ಹಳೆಯ ವಿದ್ಯಾರ್ಥಿಗಳು ತಮ್ಮೂರಿನ ಸರ್ಕಾರಿ ಶಾಲೆಗೆ ಕಾಯಕಲ್ಪ ನೀಡಬೇಕೆಂದು ಯೋಜಿಸಿ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಿಸಿದ್ದಾರೆ. ಹಳೆಯ ವಿದ್ಯಾರ್ಥಿಗಳ ಜೊತೆಗೆ ಗ್ರಾಮಸ್ಥರು, ಕುಟುಂಬದವರು ಕೈಲಾದ ನೆರವನ್ನು ನೀಡಿದ್ದಾರೆ.

ಈ ಸರ್ಕಾರಿ ಶಾಲೆಯಲ್ಲಿ 70 ವರ್ಷಗಳ ಹಿಂದೆ ವ್ಯಾಸಂಗ ಮಾಡಿ ಐಪಿಎಸ್ ಅಧಿಕಾರಿಯಾಗಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಮರಿಸ್ವಾಮಿ ತಮ್ಮೂರಿನ ಶಾಲೆಗೆ ಕಾಯಕಲ್ಪ ನೀಡುವ ಯೋಜನೆಯ ಪ್ರಮುಖ ರೂವಾರಿಯಾಗಿದ್ದಾರೆ. ವಿಶಾಲವಾದ ಕೊಠಡಿಗಳು, ಪೀಠೋಪಕರಣ, ಕಂಪ್ಯೂಟರ್‌ಗಳನ್ನು ಒಳಗೊಂಡ ಸುಸಜ್ಜಿತ ಪ್ರಯೋಗಾಲಯ, ಶೌಚಾಲಯ, ಕಚೇರಿ, ಅಡುಗೆ ಕೋಣೆ, ಹೀಗೆ ಹಲವು ರೀತಿಯಲ್ಲಿ ಶಾಲೆಯನ್ನು ಅತ್ಯುತ್ತಮ ರೀತಿಯಲ್ಲಿ ನಿರ್ಮಾಣ ಮಾಡಿ ಸರ್ಕಾರಕ್ಕೆ ಹಸ್ತಾಂತರಿಸುತ್ತಿದ್ದಾರೆ.

ಇದನ್ನೂ ಓದಿ: ಫೆಂಗಲ್ ಚಂಡಮಾರುತ ಎಫೆಕ್ಟ್: ವರ್ಷದಲ್ಲೇ ಎರಡೆರಡು ಬಾರಿ ತುಂಬಿದ ಸುವರ್ಣಾವತಿ ಡ್ಯಾಂ

ಡಿಸೆಂಬರ್ 7 ರಂದು ಚಾಮರಾಜನಗರ ಜಿಲ್ಲೆಯ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೂತನ ಶಾಲಾ ಕಟ್ಟಡವನ್ನು ಲೋಕಾರ್ಪಣೆ ಮಾಡುತ್ತಿದ್ದಾರೆ.

ಒಟ್ಟಾರೆಯಾಗಿ, ತಮಗೆ ಬದುಕು ಕಟ್ಟಿಕೊಟ್ಟ ಶಾಲೆಗೆ ಕಾಯಕಲ್ಪ ನೀಡುವ ಮೂಲಕ ಋಣ ತೀರಿಸುತ್ತಿರುವ ಹಳೆ ವಿದ್ಯಾರ್ಥಿಗಳ ನಡೆ ನಿಜಕ್ಕೂ ಮಾದರಿಯಾಗಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಸೂರಜ್ ಪ್ರಸಾದ್ ಎಸ್.ಎನ್

ಸೂರಜ್ ಪ್ರಸಾದ್ ಎಸ್.ಎನ್ ಆದ ನಾನು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದು 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದು ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದೇನೆ. ಗೌರಿ ಲಂಕೇಶ್ ಕೊಲೆ ಕೇಸನ್ನ ರಾಜ್ಯದಲ್ಲೇ ಮೊದಲು ಬ್ರೇಕ್ ಮಾಡಿ ಈ ಹಿಂದಿನ ಸಂಸ್ಥೆಯಿಂದ ಪ್ರಶಂಸೆ ಪಡೆದಿರುತ್ನೇನೆ2019 ರಲ್ಲಿ ಪಿಎಸ್ಐ ಅಕ್ರಮದ ಸ್ಟಿಂಗ್ ಆಪರೇಷನ್ ಹಾಗೂ ಬೆಂಗಳೂರು ಸಿಂಥಟಿಕ್ ಡ್ರಗ್ ಮಾಫಿಯಾದ ಸ್ಟಿಂಗ್ ಆಪರೇಷನ್ ಮಾಡಿದ್ದು. ಕಳೆದ 10 ವರ್ಷಗಳಿಂದ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಹವ್ಯಾಸ ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು.

Read More
Loading...
Unable to load recommendations.
Follow Us