ಚಾಮರಾಜನಗರ: ಅಂಬೇಡ್ಕರ್ ಭಾವಚಿತ್ರ ಹರಿದುಹಾಕಿ ಬುದ್ಧನ ಪ್ರತಿಮೆ ಧ್ವಂಸ, ಪೆಂಡಾಲ್ ಮಂಜ ಅರೆಸ್ಟ್
ಚಾಮರಾಜನಗರ ತಾಲ್ಲೂಕಿನ ತಾಲೂಕಿನ ಜ್ಯೋತಿಗೌಡನಪುರ ಗ್ರಾಮದಲ್ಲಿ ಇತ್ತೀಚೆಗೆ ಅಂಬೇಡ್ಕರ್ ಭಾವಚಿತ್ರ ಹರಿದುಹಾಕಿ ಮತ್ತು ಬುದ್ಧನ ಪ್ರತಿಮೆ ಧ್ವಂಸ ಮಾಡಿದ್ದ ಪ್ರಕರಣ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಸದ್ಯ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಅಕ್ಟೋಬರ್ 23ರಂದು ಘಟನೆ ನಡೆದಿತ್ತು. ಸದ್ಯ ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸಿದ್ದಾರೆ.

ಚಾಮರಾಜನಗರ, ನವೆಂಬರ್ 04: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ (BR Ambedkar) ಭಾವಚಿತ್ರ ಹರಿದುಹಾಕಿ ಬುದ್ಧನ ಪ್ರತಿಮೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿ ಮಂಜುನಾಥ್ ಅಲಿಯಾಸ್ ಪೆಂಡಾಲ್ ಮಂಜ ಎಂಬಾತನನ್ನು ಚಾಮರಾಜನಗರ ಪೂರ್ವ ಠಾಣಾ ಪೊಲೀಸರು ಅರೆಸ್ಟ್ (Arrest) ಮಾಡಿದ್ದಾರೆ. ಅಕ್ಟೋಬರ್ 23ರಂದು ಜ್ಯೋತಿಗೌಡನಪುರದಲ್ಲಿ ಘಟನೆ ನಡೆದಿತ್ತು.
60 ಸಾವಿರ ರೂ ದಂಡ
ಆರೋಪಿ ಮಂಜುನಾಥ್ ಅಲಿಯಾಸ್ ಪೆಂಡಾಲ್ ಮಂಜ, ಎರಡು ತಿಂಗಳ ಹಿಂದೆ ದಲಿತ ಮಹಿಳೆಗೆ ಚಪ್ಪಲಿಯಿಂದ ಹೊಡೆದಿದ್ದ. ಆಗ ಊರಿನ ಯಜಮಾನರು ತಪ್ಪಿಗಾಗಿ 60 ಸಾವಿರ ರೂ ದಂಡ ವಿಧಿಸಿದ್ದರು. ದಂಡದ ಹಣ ಪಾವತಿಸಲು ಮಂಜುನಾಥ್ ತನ್ನ ಬೈಕ್ ಅಡವಿಟ್ಟಿದ್ದ. ಸದ್ಯ ಮಂಜುನಾಥ್ನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ: ದಲಿತರಿಗೆ ದೇವಾಲಯ ಪ್ರವೇಶಕ್ಕೆ ನಿರ್ಬಂಧ; 17 ಮಂದಿ ವಿರುದ್ಧ ಎಫ್ಐಆರ್ ದಾಖಲು
ಚಾಮರಾಜನಗರ ತಾಲ್ಲೂಕಿನ ತಾಲೂಕಿನ ಜ್ಯೋತಿಗೌಡನಪುರ ಗ್ರಾಮದಲ್ಲಿ ಅಕ್ಟೋಬರ್ 23ರಂದು ಗ್ರಾಮದ ಮೂರು ಕಡೆ ಯಾರು ಕಿಡಿಗೇಡಿಗಳು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಹರಿದು ಬುದ್ದನ ವಿಗ್ರಹ ಧ್ವಂಸಗೊಳಿಸಿದ್ದರು. ಈ ಘಟನೆ ಸಾರ್ವಜನಿಕ ವಲಯದಲ್ಲಿಆಕ್ರೋಶಕ್ಕೆ ಕಾರಣವಾಗಿತ್ತು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿತ್ತು.
ಇನ್ನು ಇತ್ತೀಚೆಗೆ ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹಾಗೂ ಸ್ಥಳೀಯ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ವಿವರ ಪಡೆದುಕೊಂಡಿದ್ದರು. ಬಳಿಕ ಪ್ರತಿಭಟನಾಕಾರರ ಮನವಿ ಆಲಿಸಿದ್ದರು.
ಇಂತಹ ಕೃತ್ಯ ಮರುಕಳಿಸಬಾರದು: ಸಚಿವ ಕೆ.ವೆಂಕಟೇಶ್
ಈ ವೇಳೆ ಮಾತನಾಡಿದ್ದ, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಸಮಾಜದ ಸ್ವಾಸ್ಥ್ಯ ಹಾಳುಮಾಡುವ ಉದ್ದೇಶದಿಂದ ಎಸಗಿರುವ ಕೃತ್ಯವನ್ನು ಯಾರೇ ಮಾಡಿದ್ದರು ಅವರನ್ನು ಪತ್ತೆ ಹಚ್ಚಿ ಶಿಕ್ಷಿಸಲಾಗುತ್ತದೆ. ಇಂತಹ ಕೃತ್ಯ ಮರುಕಳಿಸಬಾರದು. ಪೊಲೀಸ್ ಇಲಾಖೆ ಈಗಾಗಲೇ ತನಿಖೆ ನಡೆಸಿ ಎಲ್ಲಾ ಪ್ರಕ್ರಿಯೆ ಕೈಗೊಂಡಿದೆ. ಶೀಘ್ರವೇ ತಪ್ಪಿತಸ್ಥರನ್ನು ಪತ್ತೆ ಹಚ್ಚಲು ಸೂಚಿಸಲಾಗಿದೆ ಎಂದು ಭರವಸೆ ನೀಡಿದ್ದರು.
ಇದನ್ನೂ ಓದಿ: ಬಂಡೀಪುರ ಸಫಾರಿ ಪಾಯಿಂಟ್ ಆಯ್ತು ಕುಡುಕರ ಅಡ್ಡೆ: ಡಿಸಿಎಫ್ ಕಚೇರಿ ಆವರಣದಲ್ಲೇ ನೂರಾರು ಮದ್ಯದ ಬಾಟಲಿಗಳು!
ಎಲ್ಲಾ ಆಯಾಮಗಳಿಂದ ತನಿಖೆ ಚುರುಕುಗೊಳಿಸಿ ಶೀಘ್ರದಲ್ಲೇ ಕೃತ್ಯ ಎಸಗಿರುವವರನ್ನು ಬಂಧಿಸಬೇಕು. ಉನ್ನತ ಮಟ್ಟದಲ್ಲಿ ಯಾವುದೇ ಅಗತ್ಯ ನೆರವು ಬೇಕಿದ್ದರೆ ಒದಗಿಸಲಾಗುತ್ತದೆ. ವಿಳಂಬಕ್ಕೆ ಅವಕಾಶವಾಗದಂತೆ ತ್ವರಿತವಾಗಿ ತಪ್ಪು ಮಾಡಿದವರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಅಧಿಕಾರಿಗಳಿಗೆ ಸ್ಥಳದಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ನಿರ್ದೇಶನ ನೀಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



