ವಯನಾಡಿನಲ್ಲಿ ಭೂಕುಸಿತ, ಚಾಮರಾಜನಗರದ ಎರೆಡು ಕುಟುಂಬಗಳು ನಾಪತ್ತೆ

| Updated By: ರಮೇಶ್ ಬಿ. ಜವಳಗೇರಾ

Updated on: Jul 30, 2024 | 5:50 PM

ಕೇರಳದ ವಯನಾಡು ಜಿಲ್ಲೆಯಲ್ಲಿ ಸರಣಿ ಭೂಕುಸಿತ ಉಂಟಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ವಯನಾಡು ಜಿಲ್ಲೆ ಚೂರಲ್​ಮಲನಲ್ಲಿ ಗುಡ್ಡ ಕುಸಿದಿದ್ದು, ದೊಡ್ಡ ದುರಂತ ಸಂವಿಸಿದೆ. ಈಗಾಗಲೇ ಸಾವಿನ ಸಂಖ್ಯೆ 84ಕ್ಕೇರಿದೆ. ಇನ್ನು ಈ ದುರಂತದಲ್ಲಿ ಚಾಮರಾಜನಗರ ಮೂಲದ ಎರೆಡು ಕುಟುಂಬಗಳು ನಾಪತ್ತೆಯಾಗಿವೆ.

ವಯನಾಡಿನಲ್ಲಿ ಭೂಕುಸಿತ, ಚಾಮರಾಜನಗರದ ಎರೆಡು ಕುಟುಂಬಗಳು ನಾಪತ್ತೆ
ಚೂರಲ್​ಮಲನಲ್ಲಿ ಗುಡ್ಡ ಕುಸಿತ
Follow us on

ಚಾಮರಾಜನಗರ, (ಜುಲೈ 30): ಕೇರಳದ ವಯನಾಡು ಜಿಲ್ಲೆಯ ಚೂರಲ್​ಮಲನಲ್ಲಿ ಗುಡ್ಡ ಕುಸಿದಿದ್ದು, ಬಾರೀ ಸಾವು-ನೋವು ಸಂಭವಿಸಿದೆ. ಇನ್ನು ಈ ದುರಂತದಲ್ಲಿ ಚಾಮರಾಜನಗರದ ದಂಪತಿ ನಾಪತ್ತೆಯಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಚೂರಲ್​ಮಲನಲ್ಲಿ ಕೆಲಸ ಮಾಡಿಕೊಂಡಿದ್ದ ಚಾಮರಾಜನಗರದ ಸೋಮವಾರಪೇಟೆಯ ದಂಪತಿ ರತ್ನಮ್ಮ ಹಾಗೂ ರಾಜೇಂದ್ರ ನಾಪತ್ತೆಯಾಗಿದ್ದಾರೆ. ಮಧ್ಯರಾತ್ರಿ ದುರಂತ ಸಂಭವಿಸಿದ ಬಳಿಕ ಚಾಮರಾಜನಗರದಲ್ಲಿರುವ ಕುಟುಂಬಸ್ಥರು, ರತ್ನಮ್ಮ ಹಾಗೂ ರಾಜೇಂದ್ರ ದಂಪತಿಗೆ ಕರೆ ಮಾಡಿದ್ದಾರೆ. ಆದ್ರೆ, ದಂಪತಿ ಸಂಪರ್ಕಕ್ಕೆ ಸಿಕ್ಕಿಲ್ಲ. ಇದರಿಂದ ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಈ ಬಗ್ಗೆ ಕುಟುಂಬಸ್ಥರು ಟಿವಿ9ಗೆ ಕರೆ ಮಾಡಿ ಅಳಲು ತೋಡಿಕೊಂಡಿದ್ದಾರೆ.

ಚಾಮರಾಜನಗರದ ಮತ್ತೊಂದು ಕುಟುಂಬ ನಾಪತ್ತೆ

ಮುಂಡಕೈನಲ್ಲಿ ಚಾಮರಾಜನಗರದ ಮತ್ತೊಂದು ಕುಟುಂಬ ನಾಪತ್ತೆಯಾಗಿದೆ. ಝಾನ್ಸಿರಾಣಿ, ಎರಡೂವರೆ ವರ್ಷದ ಪುತ್ರ ನಿಹಾಲ್ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ನಿವಾಸಿಯಾಗಿರುವ ಝಾನ್ಸಿರಾಣಿ ಅವರು ವಯನಾಡು ಜಿಲ್ಲೆಯ ಮುಂಡಕೈ ಟೀ ಎಸ್ಟೇಟ್​ನಲ್ಲಿ ಕೆಲಸ ಮಾಡುತ್ತಿದ್ದರು. ಆದ್ರೆ, ಇದೀಗ ಅದೇ ಸ್ಥಳದಲ್ಲೇ ಗುಡ್ಡ ಕುಸಿದ್ದಿದ್ದು, ಝಾನ್ಸಿರಾಣಿ ಮತ್ತು ಎರಡುವರೆ ವರ್ಷದ ಮಗು ನಿಹಾಲ್ ಕಾಣೆಯಾಗಿದ್ದಾರೆ.

ಇದನ್ನೂ ಓದಿ: Wayanad landslides: ವಯನಾಡಿನಲ್ಲಿ ಗುಡ್ಡ ಕುಸಿತ; ಕೊಚ್ಚಿ ಹೋಯ್ತು ಮುಂಡಕೈ, ಚೂರಲ್​​​ಮಲ ಪ್ರದೇಶ

ಇನ್ನು ಈ ಬಗ್ಗೆ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ವಯನಾಡಿನ ಜಿಲ್ಲಾಧಿಕಾರಿ ಹಾಗೂ ಎಸ್.ಪಿ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ. ಕರ್ನಾಟಕದವರು ಯಾರಾದರೂ ದುರಂತದಲ್ಲಿ ಸಿಲುಕಿದ್ದಾರ ಎಂಬ ಮಾಹಿತಿ ಕೇಳಿದ್ದೇವೆ. ಈಗಾಗಲೇ ವಯನಾಡುಗೆ ಗುಂಡ್ಲುಪೇಟೆಯಿಂದ ಎರೆಡು ರೆಸ್ಕ್ಯೂ ತಂಡವನ್ನು ಕಳಿಸಲಾಗಿದೆ. ರೆಸ್ಕ್ಯೂ ತಂಡದ ಜತೆ ಗುಂಡ್ಲುಪೇಟೆ ಪೊಲೀಸರು ಸಹ ತೆರಳಿದ್ದಾರೆ. ಗುಂಡ್ಲುಪೇಟೆ ಹಾಗೂ ಚಾಮರಾಜನಗರದವರು ಯಾರಾದರೂ ವಯನಾಡಿನಲ್ಲಿ ಸಿಲುಕಿದ್ದಾರ ಎಂಬ ಮಾಹಿತಿ ಕಲೆ ಹಾಕುತ್ತಿದ್ದು, 08226223160 ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಮಾಹಿತಿ ನೀಡಿದ್ದಾರೆ.

ರಾತ್ರಿ ಸುಮಾರು 1.30 ಗಂಟೆಯ ಹೊತ್ತಿಗೆ ವಯನಾಡಿನ ಮುಂಡಕೈ, ಚೂರಲ್​​​ಮಲ ಪ್ರದೇಶದಲ್ಲಿ ಗುಡ್ಡ ಕುಸಿದಿದ್ದು, ಹಲವು ಮನೆಗಳು ನೆಲಸಮವಾಗಿದೆ. ಎಲ್ಲೆಡೆ ಮಳೆ ನೀರುನುಗ್ಗಿದ್ದು ಹಲವಾರು ಮೃತದೇಹಗಳು ಚಾಲಿಯಾರ್ ನದಿಯಲ್ಲಿ ಹರಿದು ಪಕ್ಕದ ಜಿಲ್ಲೆ ಮಲಪ್ಪುರಂನಲ್ಲಿ ತಂಗಿ ನಿಂತಿದೆ. ಮುಂಡಕೈ ಪ್ರದೇಶಕ್ಕೆ ಹೋಗುವ ದಾರಿ ದುರ್ಗಮವಾಗಿದ್ದು, ರಕ್ಷಣಾ ಕಾರ್ಯಗಳು ನಡೆಯುತ್ತಿವೆ. ಈಗಾಗಲೇ 84 ಮಂದಿ ಸಾವಿಗೀಡಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ.

ಇನ್ನು ಎನ್​ಡಿಆರ್​ಎಪ್​, ಎಸ್​ಡಿಆರ್​ಎಫ್​ ಹಾಗೂ ಸೇನಾಪಡೆಗಳಿಂದ ರಕ್ಷಣ ಕಾರ್ಯಚರಣೆ ಮುಂದುರಿದಿದ್ದು, ದೇವರ ನಾಡಿನ ಉಳಿಗಾಗಿ ಪ್ರಾರ್ಥಿಸುತ್ತಿದ್ದಾರೆ.

Published On - 5:13 pm, Tue, 30 July 24