Wayanad landslides: ವಯನಾಡಿನಲ್ಲಿ ಗುಡ್ಡ ಕುಸಿತ; ಕೊಚ್ಚಿ ಹೋಯ್ತು ಮುಂಡಕೈ, ಚೂರಲ್​​​ಮಲ ಪ್ರದೇಶ

ರಾತ್ರಿ ಸುಮಾರು 1.30 ಗಂಟೆಯ ಹೊತ್ತಿಗೆ ವಯನಾಡಿನ ಮುಂಡಕೈ, ಚೂರಲ್​​​ಮಲ ಪ್ರದೇಶದಲ್ಲಿ ಗುಡ್ಡ ಕುಸಿದಿದ್ದು, ಹಲವು ಮನೆಗಳು ನೆಲಸಮವಾಗಿದೆ. ಎಲ್ಲೆಡೆ ಮಳೆ ನೀರುನುಗ್ಗಿದ್ದು ಹಲವಾರು ಮೃತದೇಹಗಳು ಚಾಲಿಯಾರ್ ನದಿಯಲ್ಲಿ ಹರಿದು ಪಕ್ಕದ ಜಿಲ್ಲೆ ಮಲಪ್ಪುರಂನಲ್ಲಿ ತಂಗಿ ನಿಂತಿದೆ. ಮುಂಡಕೈ ಪ್ರದೇಶಕ್ಕೆ ಹೋಗುವ ದಾರಿ ದುರ್ಗಮವಾಗಿದ್ದು, ರಕ್ಷಣಾ ಕಾರ್ಯಗಳು ನಡೆಯುತ್ತಿವೆ. ಈಗಾಗಲೇ 56 ಮಂದಿ ಸಾವಿಗೀಡಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ.

Wayanad landslides: ವಯನಾಡಿನಲ್ಲಿ ಗುಡ್ಡ ಕುಸಿತ; ಕೊಚ್ಚಿ ಹೋಯ್ತು ಮುಂಡಕೈ, ಚೂರಲ್​​​ಮಲ ಪ್ರದೇಶ
ವಯನಾಡಿನಲ್ಲಿ ಗುಡ್ಡ ಕುಸಿತ
Follow us
ರಶ್ಮಿ ಕಲ್ಲಕಟ್ಟ
|

Updated on:Jul 30, 2024 | 3:00 PM

ಕಲ್ಪಟ್ಟಾ ಜುಲೈ 30: ಕೇರಳದ ವಯನಾಡಿನ (Wayanad)ಮುಂಡಕೈ(mundakai) ಮತ್ತು ಚೂರಲ್​​​ಮಲ(chooralmala) ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಗುಡ್ಡ ಕುಸಿತದಲ್ಲಿ 56 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ನಿಲಂಬೂರ್ ಪೋತುಕಲ್ ಪ್ರದೇಶದ ನದಿಯಲ್ಲಿನ ವಿವಿಧ ಸ್ಥಳಗಳಲ್ಲಿ ಮೃತದೇಹಗಳು ಪತ್ತೆಯಾಗಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಮುಂಡಕೈ ಮತ್ತು ಚೂರಲ್‌ಮಲ ಪ್ರದೇಶದಲ್ಲಿ ಮುಂಜಾನೆ 1:30 ಮತ್ತು 4 ಗಂಟೆಗೆ ಎರಡು ಬಾರಿ ಗುಡ್ಡ ಕುಸಿತ ಸಂಭವಿಸಿದೆ. ಬೆಳಗ್ಗೆ ಮತ್ತೆ ಭೂಕುಸಿತ ಸಂಭವಿಸಿದ ವರದಿಗಳೂ ಇವೆ. ಹಲವು ಮನೆಗಳು ಕೊಚ್ಚಿ ಹೋಗಿದ್ದು,  ಹಲವು ಮನೆಗಳು ಕುಸಿದಿವೆ.  2019 ರ ಪ್ರವಾಹದ ಸಮಯದಲ್ಲಿ ಅನೇಕ ಜನರು ಸಾವಿಗೀಡಾಗಿದ್ದ ಪುತ್ತುಮಲ ದುರಂತದ ಸ್ಥಳದಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿದೆ ಈ ಪ್ರದೇಶ. ಇಲ್ಲಿನ ವೆಳ್ಳಾರ್ಮಲ ಶಾಲೆ ನೆಲಸಮವಾಗಿದೆ.

ಚೂರಲ್‌ಮಲದಿಂದ ಮುಂಡಕೈಗೆ ತೆರಳುವ ಸೇತುವೆ ಕೊಚ್ಚಿ ಹೋಗಿರುವುದರಿಂದ ಅಲ್ಲಿಗೆ ಜನರು ತೆರಳಲು ಕಷ್ಟವಾಗಿದೆ. ರಕ್ಷಣಾ ಕಾರ್ಯಾಚರಣೆಗಾಗಿ ಸೇನೆಯ ಇಂಜಿನಿಯರಿಂಗ್ ಗುಂಪು ವಯನಾಡ್ ತಲುಪಲಿದೆ. ಭೂಕುಸಿತ ಸಂಭವಿಸಿದರೆ ಸೇನೆಯ ಎಂಜಿನಿಯರಿಂಗ್ ವಿಭಾಗ ಪರ್ಯಾಯ ವ್ಯವಸ್ಥೆ ಜಾರಿಗೊಳಿಸಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.  ಪೊಲೀಸ್ ಡ್ರೋನ್‌ಗಳನ್ನು ನಿಯೋಜಿಸಿ ಹಿಂತಿರುಗುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ರಕ್ಷಣಾ ಕಾರ್ಯಾಚರಣೆಗಾಗಿ ಶ್ವಾನ ದಳವೂ ಸ್ಥಳದಲ್ಲಿರಲಿದೆ.

ಮೃತದೇಹಗಳಿಗಾಗಿ ಶೋಧ ಕಾರ್ಯ

ವಯನಾಡಿನಲ್ಲಿ ಮಧ್ಯರಾತ್ರಿ ಸಂಭವಿಸಿದ ಭೂಕುಸಿತದಲ್ಲಿ ಮಣ್ಣಿನಡಿಯಲ್ಲಿ ಸಿಲುಕಿರುವವರಿಗೆ ಶೋಧ ಕಾರ್ಯ ನಡೆಯುತ್ತಿದೆ ಚುರಲ್‌ಮಲ ಮತ್ತು ಮುಂಡಕೈ ನಿವಾಸಿಗಳು ಮಲಗಿದ್ದಾಗ ರಭಸವಾಗಿ ನೀರು ನುಗ್ಗಿತ್ತು. ಕೆಸರಿನಲ್ಲಿ ಹಲವಾರು ಮೃತದೇಹಗಳು ಹೂತು ಹೋಗಿವೆ. ಮಂಗಳವಾರ ಮಧ್ಯಾಹ್ನ 12 ಗಂಟೆಯವರೆಗೆ ಸುಮಾರು 44 ಮೃತದೇಹಗಳು ಮಣ್ಣಿನಲ್ಲಿ ಹೂತು ಹೋದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೆಲವು ಮೃತದೇಹಗಳು ಚಾಲಿಯಾರ್ ನದಿಯಲ್ಲಿ ತೇಲಿ ಬಂದಿದ್ದು, ಎಷ್ಟು ಜನ ನಾಪತ್ತೆ ಆಗಿದ್ದಾರೆ ಎಂಬುದರ ಬಗ್ಗೆ ಸದ್ಯ ಲೆಕ್ಕ ಸಿಕ್ಕಿಲ್ಲ. ಪ್ರವಾಹದಲ್ಲಿ ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆಗಳಿಗೂ ಅಡಚಣೆ ಆಗಿದ್ದು ರಕ್ಷಣಾ ಸಿಬ್ಬಂದಿಗೆ ಪ್ರತ್ಯೇಕವಾದ ವಿಪತ್ತು ಪ್ರದೇಶವನ್ನು ತಲುಪುವುದು ಕಷ್ಟಕರವಾಗಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ನಾಲ್ಕು ತಂಡಗಳನ್ನು ವಿಪತ್ತು ಸ್ಥಳಕ್ಕೆ ನಿಯೋಜಿಸಲಾಗಿದೆ. ಈಗಾಗಲೇ ಮುಂಡಕೈಗೆ ತಂಡವೊಂದು ಆಗಮಿಸಿದ್ದು, ಸೇತುವೆ ಕುಸಿದು ಪ್ರತ್ಯೇಕಗೊಂಡಿದೆ ಎಂದು ಕಂದಾಯ ಸಚಿವ ಕೆ.ರಾಜನ್ ತಿಳಿಸಿದ್ದಾರೆ. ಎರಡನೇ ಗುಂಪು ಕೊಲ್ಲಂನಿಂದ, ಅರಕೋಣಂ ಮತ್ತು ಬೆಂಗಳೂರಿನ ತಲಾ ಒಂದು ತಂಡವನ್ನು ವಯನಾಡಿಗೆ ಕಳುಹಿಸಲಾಗಿದೆ.

ಮುಖ್ಯಮಂತ್ರಿಗಳ ಬೇಡಿಕೆಯಂತೆ ಸೇನಾ ಇಂಜಿನಿಯರಿಂಗ್ ಗ್ರೂಪ್ ಮತ್ತು ಏಳಿಮಲದಿಂದ ನೌಕಾಪಡೆ ತಂಡ ರಕ್ಷಣಾ ಕಾರ್ಯಾಚರಣೆಗೆ ಆಗಮಿಸಲಿದೆ. ಅಲ್ಲದೆ, ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸ್ ಡ್ರೋನ್‌ಗಳು ಮತ್ತು ಶ್ವಾನಗಳನ್ನು ನಿಯೋಜಿಸುವಂತೆಯೂ ಮುಖ್ಯಮಂತ್ರಿ ಆದೇಶಿಸಿದ್ದಾರೆ. ಸುಲ್ತಾನ್ ಬತ್ತೇರಿ ಸೇಂಟ್ ಮೇರಿಸ್ ಕಾಲೇಜು ಮತ್ತು ಕಲ್ಪಟ್ಟ ಎಸ್‌ಕೆಜೆಎಂ ಶಾಲೆಯಲ್ಲಿ ಶಿಬಿರಗಳನ್ನು ಏರ್ಪಡಿಸಲಾಗಿದೆ. ಶಿಬಿರದಲ್ಲಿ ವೈದ್ಯಕೀಯ ತಂಡ, ಆಹಾರ, ಬಟ್ಟೆ ಮುಂತಾದ ಎಲ್ಲ ವಸ್ತುಗಳ ವ್ಯವಸ್ಥೆ ಮಾಡಲಾಗಿದೆ.

ರಕ್ಷಣಾ ಕಾರ್ಯಾಚರಣೆಯ ಭಾಗವಾಗಿ ದೊಡ್ಡ ಲಾರಿಗಳು ಮತ್ತು ಅರ್ಥ್ ಮೂವರ್ಸ್ ತರಲಾಗುವುದು. ಮೊಬೈಲ್ ಫ್ರೀಜರ್‌ಗಳು, ದೊಡ್ಡ ದೀಪಗಳು ಮತ್ತು ಇತರ ವ್ಯವಸ್ಥೆಗಳು, ದೋಣಿಗಳಂತಹ ಉಪಕರಣಗಳನ್ನು ಸಿದ್ಧಪಡಿಸಲು ರೆವೆನ್ಯೂ ಇಲಾಖೆ ಸೂಚನೆ ನೀಡಿದೆ.

ಇದನ್ನೂ ಓದಿ: Kerala Landslide: ಕೇರಳದಲ್ಲಿ ಭೂಕುಸಿತ, ಸಿಎಂ ಪಿಣರಾಯಿ ಜತೆ ಮಾತನಾಡಿ ಅಗತ್ಯ ನೆರವಿನ ಭರವಸೆ ನೀಡಿದ ಪ್ರಧಾನಿ ಮೋದಿ

ಚಾಲಿಯಾರ್ ನದಿಯಲ್ಲಿ ಮೊದಲು ತೇಲಿ ಬಂದಿದ್ದು ಮಗುವಿನ ಮೃತದೇಹ

ವಯನಾಡಿನ ಚೂರಲ್‌ಮಲ ಮತ್ತು ಮುಂಡಕೈ ಪ್ರದೇಶಗಳಲ್ಲಿ ಭೂಕುಸಿತದಲ್ಲಿ ಸಾವಿಗೀಡಾದವರ ಮೃತದೇಹ ಚಾಲಿಯಾರ್ ನದಿಯಲ್ಲಿ ತೇಲಿ ಬಂದು ನೆರೆಯ ಜಿಲ್ಲೆಯ ಮಲಪ್ಪುರಂ ಪೋತುಕಲ್ ಮುಂಡೇರಿಯಲ್ಲಿ ತಂಗಿ ನಿಂತಿದೆ. ಚಾಲಿಯಾರ್ ನದಿಯಿಂದ 13 ಮೃತ ದೇಹಗಳನ್ನು ಹೊರತೆಗೆಯಲಾಗಿದೆ. ಮೂರು ವರ್ಷದ ಮಗುವಿನ ದೇಹವು ಮೊದಲು ತೇಲಿ ದಡಕ್ಕೆ ಬಂದಿತ್ತು ಎಂದು ಅಲ್ಲಿನ ನಿವಾಸಿಗಳು ಹೇಳಿದ್ದಾರೆ. ವಯನಾಡಿನಲ್ಲಿ 27 ಮೃತದೇಹಗಳು ಪತ್ತೆಯಾಗಿವೆ.

Wayanad

ಮಳೆ ನೀರಿಗೆ ಕೊಚ್ಚಿಬಂದ ಮಗುವಿನ ಮೃತದೇಹ

ಚೂರಲ್​​​ಮಲ ನೆಲಸಮವಾದ ಸ್ಥಿತಿಯಲ್ಲಿದೆ. ಮಣ್ಣು ತೆರವುಗೊಳಿಸಿ ದಾರಿ ಮಾಡಿಕೊಡುವುದು ಇಲ್ಲಿನ ದೊಡ್ಡ ಸವಾಲು. ವೆಳ್ಳಾರ್ಮಲ ಶಾಲೆಯು ಚೂರಲ್​​​ಮಲ ಪಟ್ಟಣದ ಬಲಭಾಗದಲ್ಲಿದೆ. ಶಾಲೆಯ ಒಂದು ಕಟ್ಟಡ ಭಾಗಶಃ ಕೊಚ್ಚಿಕೊಂಡು ಹೋಗಿದ್ದು, ಇನ್ನೊಂದು ಕಟ್ಟಡದ ಅಡಿಪಾಯ ಸಂಪೂರ್ಣ ಕೊಚ್ಚಿ ಹೋಗಿದೆ. ಎಲ್ಲಾ ತರಗತಿ ಕೊಠಡಿಗಳು ನಾಶವಾಗಿವೆ. ವೆಳ್ಳಾರ್ಮಲ ಶಾಲೆಯ ಪಕ್ಕದಲ್ಲಿ ಹರಿಯುವ ಒಂದು ನದಿ  ಆಗಿತ್ತು  ಚೂರಲ್​​​ಮಲ ನದಿ. ಆದರೆ ಬಂಡೆ ಒಡೆದಿರುವುದರಿಂದ ನದಿ ಮೊದಲಿಗಿಂತ ನಾಲ್ಕು ಪಟ್ಟು ದೊಡ್ಡದಾಗಿದ್ದು, ಶಾಲಾ ಮೈದಾನದಲ್ಲಿ ಹರಿಯುತ್ತಿದೆ. ದೊಡ್ಡ ಬಂಡೆಗಳ ತುಂಡುಗಳು ಇಲ್ಲಿವೆ. ಶಾಲೆಯ ಪಕ್ಕದ ವಸತಿ ಪ್ರದೇಶದಲ್ಲಿದ್ದ 80 ಮನೆಗಳ ಪೈಕಿ ಶೇ.90ರಷ್ಟು ಮನೆಗಳು ಕೊಚ್ಚಿ ಹೋಗಿವೆ ಎಂದು ವರದಿಯಾಗಿದೆ..ಅನೇಕ ಜನರು ಕಾಣೆಯಾಗಿದ್ದಾರೆ. ಸದ್ಯ ಚೂರಲ್​​​ಮಲ ಪಕ್ಕದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈ ಪ್ರದೇಶದ ಪಕ್ಕದಲ್ಲಿ ಎರಡು ಬೆಟ್ಟಗಳಿವೆ. ಒಂದು ಪಡವೆಟ್ಟಿ ಬೆಟ್ಟ ಮತ್ತು ಪಪ್ಪೇಟನ್ ಬೆಟ್ಟ. ಈ ಎರಡು ಪ್ರದೇಶಗಳಲ್ಲಿ ಮನೆಗಳಲ್ಲಿ ಸಿಲುಕಿಕೊಂಡಿದ್ದವರನ್ನು ಶಿಬಿರಗಳಿಗೆ ಹಾಗೂ ಚಿಕಿತ್ಸೆ ಅಗತ್ಯವಿದ್ದವರನ್ನು ವಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಮೃತ ದೇಹಗಳು ಇರುಟ್ಟುಕುತ್ತಿ, ಪೋತುಕಲ್, ಪನಂಗಾಯಂ ಮತ್ತು ಭೂತಾನಂ ಮುಂತಾದ ಪ್ರದೇಶಗಳಲ್ಲಿ ಪತ್ತೆಯಾಗಿವೆ. ಅರಣ್ಯದೊಳಗಿನ ಕುಂಬಳಪಾರ ಕಾಲೋನಿ ಪ್ರದೇಶದಲ್ಲಿ ಐದು ಮೃತದೇಹಗಳು ದಡಕ್ಕೆ ಬಿದ್ದಿವೆ ಎಂದು ಆದಿವಾಸಿಗಳು ತಿಳಿಸಿದ್ದಾರೆ. ಆದರೆ ಅಗ್ನಿಶಾಮಕ ದಳಕ್ಕೆ ಆ ಭಾಗಕ್ಕೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಪತ್ತೆಯಾದ ಶವಗಳನ್ನು ಶವಾಗಾರದಲ್ಲಿ ಇರಿಸಲಾಗಿದೆ.  ಚಾಲಿಯಾರ್ ನದಿಯಲ್ಲಿ ಪತ್ತೆಯಾಗಿರುವ ಮೃತದೇಹಗಳು ವಯನಾಡ್‌ನಿಂದ ಕೊಚ್ಚಿಕೊಂಡು ಹೋಗಿರುವ ಶವಗಳು ಎಂದು ಐಸಿ ಬಾಲಕೃಷ್ಣನ್ ಶಾಸಕ ಹೇಳಿದ್ದಾರೆ. ಮುಂಡಕೈಗೆ ಯಾರೂ ಪ್ರವೇಶಿಸುವಂತಿಲ್ಲ. ಅನೇಕ ದೇಹಗಳು ವಿರೂಪಗೊಂಡಿವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕೇರಳದ ವಯನಾಡಿನಲ್ಲಿ ಗುಡ್ಡ ಕುಸಿತ, ಐವರು ಸಾವು, 100ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ

ರಾತ್ರಿ ಒಂದು ಗಂಟೆಗೆ ಭಾರೀ ಶಬ್ದ ಕೇಳಿಸಿತ್ತು

ರಾತ್ರಿ ಒಂದು ಗಂಟೆ ವೇಳೆಗೆ ಭಾರೀ ಸದ್ದು ಕೇಳಿ ಮದರಸ ಸಮೀಪದ ಗುಡ್ಡಕ್ಕೆ ಓಡಿ ಬಂದೆ ಎಂದು ಸಿಕ್ಕಿಬಿದ್ದಿರುವ ಮಿನ್ನತ್ ಎಂಬ ಮಹಿಳೆ ಹೇಳುತ್ತಾರೆ. ಈ ಬೆಟ್ಟದಲ್ಲಿ ಸುಮಾರು 150 ಮಂದಿ ಸಿಲುಕಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಏನು ಮಾಡಬೇಕೆಂದು ಸಹ ತಿಳಿದಿಲ್ಲ. ಬೆಳಗ್ಗೆ ಬೆಳಕು ಹರಿದಾಗ ಬೆಟ್ಟದ ಕೆಳಗಿದ್ದ ವಸ್ತುಗಳೆಲ್ಲ ಕೊಚ್ಚಿ ಹೋಗಿದ್ದವು. ಮುಂಡಕೈ ಪಟ್ಟಣ ಒಮ್ಮೆಲೇ ಮಾಯವಾಯಿತು. ನೀರಿನಲ್ಲಿ ಕೊಚ್ಚಿಹೋದ ಮೂವರನ್ನು ರಕ್ಷಿಸಲು ಸಾಧ್ಯವಾಯಿತು ಎಂದು ಮಿನ್ನತ್ ಹೇಳಿದ್ದಾರೆ. ಸದ್ಯ ಆ ಪ್ರದೇಶಕ್ಕೆ ರಕ್ಷಣಾ ಕಾರ್ಯಕರ್ತರು ತಲುಪಲು ಸಾಧ್ಯವಾಗಿಲ್ಲ. ಮದರಸಾದ ಸಮೀಪವಿರುವ ಬೆಟ್ಟದಲ್ಲಿ ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳು ಇದ್ದಾರೆ. ಅವರಿಗೆ ಗಂಭೀರ ಗಾಯಗಳಾಗಿವೆ. ಅವರು ಅಸಹಾಯಕ ಸ್ಥಿತಿಯಲ್ಲಿದ್ದಾರೆ ಎಂದು ಮಿನ್ನತ್ ಹೇಳಿರುವುದಾಗಿ ಮಲಯಾಳ ಮನೋರಮ ವರದಿ ಮಾಡಿದೆ.

ಕೇರಳದ ವಿವಿಧ ಜಿಲ್ತೀಲೆಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (IMD) ನೀಡಿದ್ದು, ಮಂಗಳವಾರ ವಯನಾಡ್‌ಗೆ ‘ರೆಡ್’ ಅಲರ್ಟ್ ನೀಡಿದೆ. ನೆರೆಯ ಮಲಪ್ಪುರಂ, ಕೋಯಿಕ್ಕೋಡ್ ಮತ್ತು ಕಣ್ಣೂರು ಜಿಲ್ಲೆಗಳಿಗೂ ‘ರೆಡ್’ ಅಲರ್ಟ್ ಘೋಷಿಸಲಾಗಿದ್ದು, ಅತಿ ಹೆಚ್ಚು ಮಳೆಯಾಗಲಿದೆ.

ಹವಾಮಾನ ಇಲಾಖೆಯು ಮಂಗಳವಾರ ಪತ್ತನಂತಿಟ್ಟ,ಆಲಪ್ಪುಳ,  ಕೋಟ್ಟಯಂ, ಎರ್ನಾಕುಲಂ, ಇಡುಕ್ಕಿ, ತ್ರಿಶೂರ್ ಮತ್ತು ಪಾಲಕ್ಕಾಡ್ ಜಿಲ್ಲೆಗಳಲ್ಲಿ ಮತ್ತು ಬುಧವಾರ ಮಲಪ್ಪುರಂ, ಕೋಯಿಕ್ಕೋಡ್, ವಯನಾಡ್ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ‘ಆರೆಂಜ್’ ಅಲರ್ಟ್ ಘೋಷಿಸಿದೆ.

ವಯನಾಡ್‌ನಲ್ಲಿ ಭಾರೀ ಮಳೆ ಮುಂದುವರಿದಂತೆ, ಮೂರು ಭಾರಿ ಭೂಕುಸಿತಗಳುಂಟಾಗಿದೆ. ಇದರಲ್ಲಿ 40 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ  ನೂರಾರು ಜನರು  ಕಾಣೆಯಾಗಿದ್ದಾರೆ.  ಇದುವರೆಗೆ ಸುಮಾರು 250 ಜನರನ್ನು ರಕ್ಷಿಸಲಾಗಿದೆ. ಅವರನ್ನು  ತಾತ್ಕಾಲಿಕ ಆಶ್ರಯಕ್ಕೆ ಸ್ಥಳಾಂತರಿಸಲಾಗಿದೆ ಎಂದು ಕೇರಳ ಸಚಿವ ಎಂ.ಬಿ.ರಾಜೇಶ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:43 pm, Tue, 30 July 24