ಕೇರಳ ಗುಡ್ಡ ಕುಸಿತ: ಹೊಸ ಮನೆ ಕೊಂಡ ಸಂತಸದಲ್ಲೇ ಜಲಸಮಾಧಿಯಾದ ಕರ್ನಾಟಕದ ದಂಪತಿ
Wayanad Landslide: ಕೇರಳದ ವಯನಾಡು ಜಿಲ್ಲೆಯಲ್ಲಿ ಸರಣಿ ಭೂಕುಸಿತ ಉಂಟಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ವಯನಾಡು ಜಿಲ್ಲೆ ಚೂರಲ್ಮಲನಲ್ಲಿ ಗುಡ್ಡ ಕುಸಿದಿದ್ದು, ದೊಡ್ಡ ದುರಂತ ಸಂಭವಿಸಿದೆ. ಈ ದುರಂತದಲ್ಲಿ ಚಾಮರಾಜನಗರದ ದಂಪತಿ ಮೃತಪಟ್ಟಿದ್ದಾರೆ.
ಚಾಮರಾಜನಗರ, ಜುಲೈ 31: ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಘೋರ ಗುಡ್ಡ ಕುಸಿತದಲ್ಲಿ (Kerala Wayanad Landslide) ಚಾಮರಾಜನಗರ (Chamrajnagar) ಜಿಲ್ಲೆಯ ನಾಲ್ವರು ಮೃತಪಟ್ಟಿದ್ದಾರೆ. 50 ವರ್ಷದ ರಾಜೇಂದ್ರ, 45 ವರ್ಷದ ರತ್ನಮ್ಮ, 62 ವರ್ಷದ ಪುಟ್ಟಸಿದ್ದಶೆಟ್ಟಿ ಮತ್ತು 50 ವರ್ಷದ ರಾಣಿ ಎಂಬವರು ಸಾವನಪ್ಪಿದ್ದಾರೆ. ಇವರೆಲ್ಲರೂ ಚಾಮರಾಜನಗರ ಜಿಲ್ಲೆಯವರು. ರಾಜೇಂದ್ರ ಮತ್ತು ರತ್ನಮ್ಮ ದಂಪತಿ ಮೂಲತಃ ಚಾಮರಾಜನಗರ ತಾಲೂಕಿನ ಇರಸವಾಡಿ ನಿವಾಸಿಗಳಾಗಿದ್ದು, ವಯನಾಡಿನ ಚೂರಲ್ ಮಲೈನಲ್ಲಿ ವಾಸವಾಗಿದ್ದರು.
ಕೂಲಿ ಮಾಡಿ ಕೇರಳದಲ್ಲಿ ಬದುಕು ಕಟ್ಟಿಕೊಂಡಿದ್ದ ದಂಪತಿ ಆರು ತಿಂಗಳ ಹಿಂದೆಯಷ್ಟೇ ಹೊಸಮನೆ ಖರೀದಿಸಿದ್ದರು. ಸಂಬಂಧಿಕರು, ಸ್ನೇಹಿತರನ್ನು ಕರೆದು ಗೃಹಪ್ರವೇಶ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಿದ್ದರು. ಈಗ ದುರಂತದಲ್ಲಿ ದಂಪತಿ ಮನೆ ಸಮೇತ ಜಲಸಮಾಧಿಯಾಗಿದ್ದಾರೆ. ಈ ಇಬ್ಬರ ಮೃತದೇಹಗಳಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಚಾಮರಾಜನಗರದ ಜಿಲ್ಲೆಯ ತ್ರಯಂಬಕಪುರದ ಸ್ವಾಮಿಶೆಟ್ಟಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಯನಾಡು ಜಿಲ್ಲೆಯ ಮೆಪ್ಪಾಡಿಯ ವೈತ್ರಿ ತಾಲೂಕು ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಗುಂಡ್ಲುಪೇಟೆ ತಹಶೀಲ್ದಾರ್ ರಮೇಶ್ ಬಾಬು ಮೃತರ ಕುಟುಂಬದವರ ಜತೆ ಸಂಪರ್ಕದಲ್ಲಿದ್ದಾರೆ.
ಚಾಮರಾಜನಗರದ ಮತ್ತೊಂದು ಕುಟುಂಬ ನಾಪತ್ತೆ
ಮುಂಡಕೈನಲ್ಲಿ ಚಾಮರಾಜನಗರದ ಮತ್ತೊಂದು ಕುಟುಂಬ ನಾಪತ್ತೆಯಾಗಿದೆ. ಝಾನ್ಸಿರಾಣಿ, ಎರಡೂವರೆ ವರ್ಷದ ಪುತ್ರ ನಿಹಾಲ್ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ನಿವಾಸಿಯಾಗಿರುವ ಝಾನ್ಸಿರಾಣಿ ಅವರು ವಯನಾಡು ಜಿಲ್ಲೆಯ ಮುಂಡಕೈ ಟೀ ಎಸ್ಟೇಟ್ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಇದೀಗ ಅದೇ ಸ್ಥಳದಲ್ಲೇ ಗುಡ್ಡ ಕುಸಿದ್ದಿದ್ದು, ಝಾನ್ಸಿರಾಣಿ ಮತ್ತು ಎರಡುವರೆ ವರ್ಷದ ಮಗು ನಿಹಾಲ್ ಕಾಣೆಯಾಗಿದ್ದಾರೆ.
ಇದನ್ನೂ ಓದಿ: ವಯನಾಡು ಭೂಕುಸಿತ: ಕರ್ನಾಟಕದ ನಾಲ್ವರು ಸಾವು, ಮಂಡ್ಯದ ಮಹಿಳೆ ನಾಪತ್ತೆ
ನೆರವಿಗಾಗಿ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳ ನಿಯೋಜನೆ: ಸಿಎಂ
ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದ ಸಂಕಷ್ಟದಲ್ಲಿರುವ ಜನರ ನೆರವಿಗಾಗಿ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಹಾಗೆಯೇ ಗಡಿಜಿಲ್ಲೆ ಚಾಮರಾಜ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.
ಐಎಎಸ್ ಅಧಿಕಾರಿಗಳ ಮೊಬೈಲ್ ಸಂಖ್ಯೆ
ಸಿ.ಜಾಫರ್-9448355577 ದಿಲೀಶ್ ಶಶಿ-9556000514
ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿ ಸಹಾಯವಾಣಿ ಸಂಖ್ಯೆಗಳು:
08226-223163
08226-223161
08226-223160
ವಾಟ್ಸಪ್ ಸಂಖ್ಯೆ:
9740942901
ಈ ಮಾಹಿತಿಯನ್ನು ಹೆಚ್ಚೆಚ್ಚು ಜನರಿಗೆ ತಲುಪಿಸಿ, ಸಂಕಷ್ಟದಲ್ಲಿರುವವರಿಗೆ ಸಕಾಲದಲ್ಲಿ ನೆರವು ಸಿಗಲು ಕಾರಣರಾಗಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.
ರಾಜ್ಯದ ಜಿಲ್ಲಾಧಿಕಾರಿಗಳಿಗೂ ಸೂಚನೆ
ರಾಜ್ಯದ ಒಳಗೆ ಮತ್ತು ನೆರೆಯ ರಾಜ್ಯಗಳಲ್ಲಿಯೂ ಅತಿಯಾದ ಮಳೆ ಸುರಿಯುತ್ತಿದ್ದು, ರಾಜ್ಯದ ಯಾವುದೇ ಮೂಲೆಯಲ್ಲಿ ಸಮಸ್ಯೆ ತಲೆದೋರಿದರೂ ಅದನ್ನು ಎದುರಿಸಲು ಸಕಲ ತಯಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ಅಧಿಕಾರಿಗಳಿಗೆ ಕೆಲವು ಸೂಚನೆಗಳನ್ನು ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜ್ಯದಲ್ಲಿಡೆ ಭಾರಿ ಮಳೆಯಾಗುತ್ತಿದ್ದು ಪ್ರವಾಹ, ಭೂಕುಸಿತದಂತಹ ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ಸಿದ್ಧರಿರುವಂತೆ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಜಲಾಶಯಗಳ ನೀರಿನ ಮಟ್ಟದ ಕುರಿತು ನಿರಂತರ ಪರಿಶೀಲನೆ ನಡೆಸಿ ಪ್ರವಾಹ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಅಲ್ಲಲ್ಲಿ ಭೂಕುಸಿತದ ಪ್ರಕರಣಗಳು ವರದಿಯಾಗುತ್ತಿದ್ದು ಈ ಬಗ್ಗೆ ಜಿಲ್ಲಾಧಿಕಾರಿಗಳು ಎಚ್ಚರವಹಿಸಬೇಕು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸಹ ಪ್ರವಾಹ ಪರಿಸ್ಥಿತಿಯ ನಿರ್ವಹಣೆಯ ಮೇಲ್ವಿಚಾರಣೆ ನಡೆಸುವಂತೆ ನಿರ್ದೇಶನ ನೀಡಿದ್ದೇನೆ ಎಂದು ತಿಳಿಸಿದರು.
ಅಧಿಕಾರಿಗಳು ಪ್ರವಾಹ ಪರಿಸ್ಥಿತಿಯನ್ನು ಸಮರೋಪಾದಿಯಲ್ಲಿ ನಿರ್ವಹಿಸುವಂತೆ, ರಕ್ಷಣೆ ಹಾಗೂ ಪರಿಹಾರ ಕಾರ್ಯಚರಣೆಗಳನ್ನು ಕೈಗೊಳ್ಳುವಂತೆ ಹಾಗೂ ಪ್ರವಾಹ ಪೀಡಿತರಿಗೆ ಅಗತ್ಯಕ್ಕನುಸಾರವಾಗಿ ಕಾಳಜಿ ಕೇಂದ್ರಗಳನ್ನು ತೆರೆದು ಎಲ್ಲ ಸೌಲಭ್ಯಗಳನ್ನು ಕಲ್ಪಿಸುವಂತೆ ಸೂಚಿಸಲಾಗಿದೆ. ಎಲ್ಲ ಜಿಲ್ಲೆಗಳಲ್ಲಿ ನಿಯಂತ್ರಣ ಕೊಠಡಿ ತೆರೆದು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲು ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ