ವಯನಾಡು ಭೂಕುಸಿತ: ಕರ್ನಾಟಕದ 6 ಮಂದಿ ಸಾವು, ಮಂಡ್ಯದ ಮಹಿಳೆ ನಾಪತ್ತೆ

Wayanad Landslide: ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಭಯಾನಕ ಗುಡ್ಡ ಕುಸಿತ ಕಣ್ಣೀರ ಕಥೆಗಳನ್ನೇ ಹೇಳುತ್ತಿವೆ. ಈ ನಡುವೆ ಕೇರಳದ ದುರಂತ ಕರ್ನಾಟಕ್ಕೂ ಆಘಾತ ತಂದಿದೆ. ಕೇರಳ ಗುಡ್ಡ ಕುಸಿತದಲ್ಲಿ ಕರ್ನಾಟಕದ 6 ಮಂದಿ ಮೃತಪಟ್ಟಿದ್ದಾರೆ. ಮೃತರು ಚಾಮರಾಜನಗರ ಜಿಲ್ಲೆಯವರಾಗಿದ್ದಾರೆ. ಇನ್ನೂ ಒಂದು ಕುಟುಂಬ ನಾಪತ್ತೆಯಾಗಿದೆ ಎನ್ನಲಾಗಿದೆ.

ವಯನಾಡು ಭೂಕುಸಿತ: ಕರ್ನಾಟಕದ 6 ಮಂದಿ ಸಾವು, ಮಂಡ್ಯದ ಮಹಿಳೆ ನಾಪತ್ತೆ
ವಯನಾಡು ಭೂಕುಸಿತದ ಡ್ರೋನ್ ದೃಶ್ಯ
Follow us
| Updated By: ಗಣಪತಿ ಶರ್ಮ

Updated on:Jul 31, 2024 | 8:47 AM

ಚಾಮರಾಜನಗರ, ಜುಲೈ 31: ಇತ್ತೀಚಿಗಷ್ಟೇ ಉತ್ತರ ಕನ್ನಡ ಜಿಲ್ಲೆಯ ಶಿರೂರಿನ ಗುಡ್ಡ ಕುಸಿತದಲ್ಲಿ ಕೇರಳದ ಲಾರಿಚಾಲಕ ಅರ್ಜುನ್ ನಾಪತ್ತೆಯಾಗಿದ್ದ. ಅರ್ಜನ್‌ಗಾಗಿ ಇಡೀ ಕೇರಳ ಮಿಡಿದಿತ್ತು. ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿದೆ ಎಂದು ಆರೋಪಿಸಿದ್ದರು. ಆದರೆ ಕೇರಳದ ವಯನಾಡಿನಲ್ಲಿ ಸಂಭವಿಸಿರೋ ಘೋರ ಗುಡ್ಡ ಕುಸಿತದಲ್ಲಿ ಕರ್ನಾಟಕದ 6 ಮಂದಿ ಮೃತಪಟ್ಟಿದ್ದಾರೆ. ಮೃತರು ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಯವರು ಎಂಬುದು ಪತ್ತೆಯಾಗಿದೆ. 50 ವರ್ಷದ ರಾಜೇಂದ್ರ, 45 ವರ್ಷದ ರತ್ನಮ್ಮ, ವಯನಾಡಿನ ಮೇಪಾಡಿಯಲ್ಲಿ ವಾಸವಿದ್ದ 62 ವರ್ಷದ ಪುಟ್ಟಸಿದ್ದಶೆಟ್ಟಿ ಮತ್ತು 50 ವರ್ಷದ ರಾಣಿ ಎಂಬವರು ಸಾವನಪ್ಪಿದ್ದಾರೆ. ಇವರೆಲ್ಲರೂ ಚಾಮರಾಜನಗರ ಜಿಲ್ಲೆಯವರು. ಮಂಡ್ಯದ ಎರಡೂವರೆ ವರ್ಷದ ನಿಹಾಲ್​, ಅಜ್ಜಿ ಲೀಲಾವತಿ (55) ಶವ ಕೂಡ ಪತ್ತೆಯಾಗಿದೆ.

ರಾಜೇಂದ್ರ ಮತ್ತು ರತ್ನಮ್ಮ ಇರಸವಾಡಿ ಗ್ರಾಮದವರಾಗಿದ್ದು ಈ ಇಬ್ಬರ ಮೃತದೇಹಗಳಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಇವರಿಬ್ಬರೂ ಕೇರಳದ ಚೂರಲ್ಲಾದಲ್ಲಿ ಕೆಲಸ ಮಾಡಿಕೊಂಡಿದ್ದರು. ಚಾಮರಾಜನಗರದ ಜಿಲ್ಲೆಯ ತ್ರಯಂಬಕಪುರದ ಸ್ವಾಮಿಶೆಟ್ಟಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಯನಾಡು ಜಿಲ್ಲೆಯ ಮೆಪ್ಪಾಡಿಯ ವೈತ್ರಿ ತಾಲೂಕು ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಗುಂಡ್ಲುಪೇಟೆ ತಹಶೀಲ್ದಾರ್ ರಮೇಶ್ ಬಾಬು ಮೃತರ ಕುಟುಂಬದವರ ಜತೆ ಸಂಪರ್ಕದಲ್ಲಿದ್ದಾರೆ.

ಚಾಮರಾಜನಗರದ ಮತ್ತೊಂದು ಕುಟುಂಬ ನಾಪತ್ತೆ

ಕೇರಳದ ವಯನಾಡು ಜಿಲ್ಲೆಯ ಮುಂಡಕೈನಲ್ಲಿ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಯ ಮತ್ತೊಂದು ಕುಟುಂಬ ನಾಪತ್ತೆಯಾಗಿದೆ ಎನ್ನಲಾಗಿದೆ. ಟೀ ಎಸ್ಟೇಟ್​ನಲ್ಲಿ ಕೆಲಸ ಮಾಡುತ್ತಿದ್ದ ಝಾನ್ಸಿರಾಣಿ ಮತ್ತು ಅವರ ಎರಡೂವರೆ ವರ್ಷದ ಪುತ್ರ ನಿಹಾಲ್ ಗುಡ್ಡಕುಸಿತದಲ್ಲಿ ಕಣ್ಮರೆಯಾಗಿದ್ದಾರೆ.

ಮಂಡ್ಯದ ಇಬ್ಬರು ಸಾವು

ಕೇರಳ ಗುಡ್ಡ ಕುಸಿತದಲ್ಲಿ ಮಂಡ್ಯದ ಎರಡೂವರೆ ವರ್ಷದ ನಿಹಾಲ್​, ಅಜ್ಜಿ ಲೀಲಾವತಿ (55) ಮೃತಪಟ್ಟಿದ್ದಾರೆ. ಮೂವರಿಗೆ ಗಾಯಗಳಾಗಿವೆ. ಅನಿಲ್​​, ಪತ್ನಿ ಝಾನ್ಸಿ, ದೇವರಾಜ್ ಎಂಬುವರಿಗೆ ಗಾಯಗಳಾಗಿವೆ. ಇವರು ಮಂಡ್ಯ ಜಿಲ್ಲೆ ಕೆ.ಆರ್​.ಪೇಟೆ ತಾಲೂಕಿನ ಕತ್ತರಘಟ್ಟ ನಿವಾಸಿಗಳಾಗಿದ್ದಾರೆ.

ಸಹಾಯವಾಣಿ ಬಗ್ಗೆ ಚಾಮರಾಜನಗರ ಡಿಸಿ ಮಾಹಿತಿ

ವಯನಾಡು ಡಿಸಿ & ಎಸ್​ಪಿ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ. ಕರ್ನಾಟಕದವರು ಯಾರಾದರೂ ಸಿಲುಕಿದ್ದಾರಾ ಎಂಬ ಮಾಹಿತಿ ಕೇಳಿದ್ದೇವೆ. ಗುಂಡ್ಲುಪೇಟೆಯಿಂದ 2 ರಕ್ಷಣಾ ತಂಡ ಹೋಗಿದ್ದು, ಸಹಾಯವಾಣಿ ಸಂಖ್ಯೆ 08226223160 ತೆರೆಯಲಾಗಿದೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದ್ದಾರೆ.

ಗೋಮಾತೆಯಿಂದಾಗಿ ಬದುಕುಳಿದ ಕನ್ನಡಿಗ

ವಯನಾಡಿನ ಮೇಪಾಡಿಯಲ್ಲಿ ಗುಡ್ಡ ಕುಸಿಯುವ ವೇಳೆ ಅದೃಷ್ಟವಶಾತ್, ಚಾಮರಾಜನಗರದ ವಿನೋದ್ ಎಂಬವರು ಬದುಕುಳಿದಿದ್ದಾರೆ. ಗುಡ್ಡ ಕುಸಿಯುವ ವೇಳೆ ಕೊಟ್ಟಿಗೆಯಲ್ಲಿ ದನಕರುಗಳು ಅರಚುತ್ತಿದ್ದವು, ತಕ್ಷಣವೇ ಎಚ್ಚೆತ್ತ ವಿನೋದ್ ಮನೆಪಕ್ಕದಲ್ಲಿ ಮತ್ತೊಂದು ಗುಡ್ಡವನ್ನೇರಿ ಪ್ರಾಣ ಉಳಿಸಿಕೊಂಡಿದ್ದಾರೆ. 2 ತಿಂಗಳ ಬಾಣಂತಿಯಾಗಿರೋ ವಿನೋದ್ ಪತ್ನಿ ಪ್ರಮೀದಾ ಎರಡು ದಿನಗಳ ಹಿಂದಷ್ಟೇ ಕೇರಳದಿಂದ ಚಾಮರಾಜನಗರದ ತಮ್ಮೂರಿಗೆ ತೆರಳಿದ್ದರಿಂದ ಅಪಾಯ ತಪ್ಪಿದೆ. ಆದಷ್ಟು ಬೇಗ ಪತಿಯನ್ನು ತಮ್ಮೂರಿಗೆ ಕರೆತರುವಂತೆ ಪತ್ನಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ವಯನಾಡು ಗುಡ್ಡ ಕುಸಿತದಲ್ಲಿ ಚಾಮರಾಜನಗರ ಮೂಲದ ಇಬ್ಬರು ಸಾವು, ಮತ್ತಿಬ್ಬರು ನಾಪತ್ತೆ

ಬೆಂಗಳೂರಿನಿಂದ ಕೇರಳಕ್ಕೆ ಬಸ್​ಗಳ ಸಂಚಾರ ಸ್ಥಗಿತ

ಕೇರಳದ ವಯನಾಡು ಜಿಲ್ಲೆಯಲ್ಲಿ ಗುಡ್ಡ ಕುಸಿತ ಹಿನ್ನೆಲೆ, ಗುಂಡ್ಲುಪೇಟೆ-ವಯನಾಡು ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತವಾಗಿದೆ. ತಾತ್ಕಾಲಿಕವಾಗಿ ಕೇರಳಕ್ಕೆ ಕೆಲ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:04 am, Wed, 31 July 24