ಈಡೇರಲಿಲ್ಲ ಚಂಗಡಿ ಗ್ರಾಮಸ್ಥರ ಕನಸು: ಕಲ್ಲು-ಮುಳ್ಳಿನ ಹಾದಿ, 23 ಕಿಮೀ ಕಾಡಿನಲ್ಲಿ ಜನರ ನಿತ್ಯ ದರ್ಶನ

ಚಾಮರಾಜನಗರದ ಮಲೆ ಮಹದೇಶ್ವರ ವನ್ಯಜೀವಿಧಾಮದ ಚಂಗಡಿ ಗ್ರಾಮ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಸ್ವಯಂಪ್ರೇರಿತರಾಗಿ ಸ್ಥಳಾಂತರಗೊಳ್ಳಲು ಸಿದ್ಧವಿದ್ದಾರೆ. ಆದರೆ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅವರ ಪುನರ್ವಸತಿ ಪ್ರಸ್ತಾವನೆ ಚರ್ಚೆಯಾಗದೆ ನಿರೀಕ್ಷೆ ಹುಸಿಯಾಗಿದೆ. ಸರ್ಕಾರದ ನಿರ್ಲಕ್ಷ್ಯದಿಂದ ಗ್ರಾಮಸ್ಥರಲ್ಲಿ ಭ್ರಮನಿರಸನ ಮೂಡಿದೆ.

ಈಡೇರಲಿಲ್ಲ ಚಂಗಡಿ ಗ್ರಾಮಸ್ಥರ ಕನಸು: ಕಲ್ಲು-ಮುಳ್ಳಿನ ಹಾದಿ, 23 ಕಿಮೀ ಕಾಡಿನಲ್ಲಿ ಜನರ ನಿತ್ಯ ದರ್ಶನ
ಚಂಗಡಿ ಗ್ರಾಮ
Image Credit source: tv9 kannada
Edited By:

Updated on: Mar 10, 2026 | 8:28 PM

ಚಾಮರಾಜನಗರ, ಮಾರ್ಚ್​ 10: ಆ ಕಾಡಿನ ಗ್ರಾಮಸ್ಥರಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ (Male Mahadeshwara Hills) ನಡೆದ ಸಚಿವ ಸಂಪುಟ ಸಭೆ ಹಲವು ಭರವಸೆ ಹುಟ್ಟು ಹಾಕಿತ್ತು. ಸಮಾಜದ ಮುಖ್ಯವಾಹಿನಿಗೆ ಸೇರಬೇಕೆಂಬ ಕನಸು ಇನ್ನೇನು ನನಸಾಗಿಯೇ ಬಿಡುತ್ತದೆ ಎಂಬ ನಿರೀಕ್ಷೆ ಹೊತ್ತಿದ್ದರು. ಆದರೆ ಸಚಿವ ಸಂಪುಟ ಸಭೆ ಆ ಕಾಡಿನ ಗ್ರಾಮಸ್ಥರ ನಿರೀಕ್ಷೆಗಳನ್ನು ಹುಸಿಯಾಗಿಸಿದೆ.

23 ಕಿ.ಮೀ ಕಾಡಿನಲ್ಲಿ ಜನರ ನಿತ್ಯ ದರ್ಶನ

ಮಲೆ ಮಹದೇಶ್ವರ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿರುವ ಚಂಗಡಿ ಗ್ರಾಮ ಮೂಲ ಸೌಕರ್ಯಗಳ ಕೊರತೆ, ವನ್ಯಜೀವಿಗಳ ಹಾವಳಿಯಿಂದ ತತ್ತರಿಸಿ ಹೋಗಿದೆ. ಮುಖ್ಯರಸ್ತೆಯಿಂದ 23 ಕಿ.ಮೀಟರ್ ದೂರ ದಟ್ಟಕಾಡಿನೊಳಗೆ ಇರುವ ಈ ಕುಗ್ರಾಮ ಶಿಕ್ಷಣ, ಆರೋಗ್ಯ ಸೇರಿದಂತೆ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಈ ಗ್ರಾಮದಲ್ಲಿ ಯಾವುದೇ ನೆಟ್​ವರ್ಕ್ ಇಲ್ಲ. ರಸ್ತೆ ಇಲ್ಲದ ಕಾರಣ ಆ್ಯಂಬುಲೆನ್ಸ್ ಕೂಡ ಬರಲ್ಲ. ಆರೋಗ್ಯ ಹದಗೆಟ್ಟರೆ, ಗರ್ಭಿಣಿಯರಿಗೆ ಹೆರಿಗೆ ನೋವು ಕಾಣಿಸಿಕೊಂಡರೆ ದೇವರೇ ಗತಿ.

ಇದನ್ನೂ ಓದಿ: ಚಾಮರಾಜನಗರ ಅಣ್ಣೂರುಕೇರಿಯಲ್ಲಿ ಮಾರಿ ಹಬ್ಬದ ವೇಳೆ 100ಕ್ಕೂ ಹೆಚ್ಚು ಕುರಿಗಳ ಬಲಿ: ರಕ್ತ ಹೀರಿದ ಅರ್ಚಕ, ಭಯಾನಕ ವಿಡಿಯೋ ವೈರಲ್

ಡೋಲಿ ಕಟ್ಟಿ 23 ಕಿ.ಮೀ ದೂರ ಕಲ್ಲು, ಮುಳ್ಳುಗಳ ಹಾದಿಯಲ್ಲಿ ಮುಖ್ಯರಸ್ತೆಗೆ ಹೊತ್ತು ತರಬೇಕು. ಇನ್ನು ಕಾಡು ಪ್ರಾಣಿಗಳ ಹಾವಳಿಗೆ ಬೆಳೆಯೂ ಕೈಸೇರುತ್ತಿಲ್ಲ. ಈ ಕುಗ್ರಾಮದ ಯುವಕರಿಗೆ ಯಾರೂ ಹೆಣ್ಣು ಕೊಡಲ್ಲ. ಕನಿಷ್ಟ ಮೂಲಭೂತ ಸೌಕರ್ಯಗಳಿಲ್ಲದೆ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ.

ಗ್ರಾಮಸ್ಥರ ನಿರೀಕ್ಷೆ ಹುಸಿ

ಸ್ವಯಂಪ್ರೇರಿತರಾಗಿ ನಾಡಿಗೆ ಸ್ಥಳಾಂತರಗೊಳ್ಳಲು 2016ರಲ್ಲಿಯೇ ಚಂಗಡಿ ಗ್ರಾಮಸ್ಥರು ಒಪ್ಪಿಗೆ ಸೂಚಿಸಿದ್ದರು. ಇವರ ಪುನರ್ವಸತಿಗಾಗಿ 2021ರಲ್ಲಿ ಅರಣ್ಯ ಇಲಾಖೆ ಹನೂರು ತಾಲೂಕಿನ ವೈಶಂಪಾಳ್ಯ ಡಿಎಂ ಸಮುದ್ರದ ಬಳಿ 435 ಎಕರೆ ಭೂಮಿ ಗುರುತಿಸಿ ಕ್ರಿಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ. ಗ್ರಾಮದ 256 ಕುಟುಂಬಗಳ ಪುನರ್ವಸತಿ ಯೋಜನೆಗಾಗಿ ಸುಮಾರು 40 ಕೋಟಿ ರೂ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಚಂಗಡಿ ಗ್ರಾಮಸ್ಥರ ಪುನರ್ವಸತಿಗೆ ಅನುಮೋದನೆ ದೊರೆಯುತ್ತದೆ ಎಂಬುದು ಗ್ರಾಮಸ್ಥರ ನಿರೀಕ್ಷೆಯಾಗಿತ್ತು. ಆದರೆ ಈ ಬಗ್ಗೆ ಸಭೆಯಲ್ಲಿ ಈ ವಿಷಯವೇ ‌ಪ್ರಸ್ತಾಪವಾಗದೆ ಗ್ರಾಮಸ್ಥರ ನಿರೀಕ್ಷೆ ಹುಸಿಯಾಗಿದೆ.

ಇದನ್ನೂ ಓದಿ: ಭಕ್ತರ ತಲೆ ಮೇಲೆಯೇ ತೆಂಗಿನ ಕಾಯಿ ಒಡೆಯುತ್ತಾರೆ, ಆದ್ರೂ ಗಾಯವಾಗಲ್ಲ ರಕ್ತ ಬರಲ್ಲ!

ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆ ಈ ಭಾಗದ ಸಮಸ್ಯೆಗಳಿಗೆ ಇತಿಶ್ರೀ ಹಾಡುತ್ತದೆ. ಒಂದಷ್ಟು ಪರಿಹಾರೋಪಾಯಗಳು ಸಿಗುತ್ತವೆ ಎಂಬ ನಿರೀಕ್ಷೆ ಹುಟ್ಟುಹಾಕಿತ್ತು. ಆದರೆ ಈ ನಿರೀಕ್ಷೆಗಳೆಲ್ಲ ಹುಸಿಯಾಗಿವೆ. ಅದರಲ್ಲೂ ಚಂಗಡಿ ಗ್ರಾಮಸ್ಥರಲ್ಲಿ ಭ್ರಮನಿರಸನ ಮೂಡಿಸಿದೆ. ಪುನರ್ವಸತಿ ಪ್ರಸ್ತಾವನೆಯನ್ನು ಸಂಪುಟ ಸಭೆಯ ಮುಂದಿಡುವಲ್ಲಿ ಸ್ಥಳೀಯ ಶಾಸಕರ ವೈಫಲ್ಯ ಹಾಗೂ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಎಲ್ಲಾ ಕಡೆ ಕಾಡಿನಲ್ಲಿರುವ ಜನರನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಪ್ರಯತ್ನಿಸುತ್ತಲೇ ಇದೆ. ಆದರೆ ಇಲ್ಲಿ ಗ್ರಾಮಸ್ಥರೇ ಸ್ಥಳಾಂತರಗೊಳ್ಳಲು ಸ್ವಯಂಪ್ರೇರಿತರಾಗಿ ಮುಂದೆ ಬಂದಿದ್ದರೂ ಸರ್ಕಾರ ಸ್ಪಂದಿಸದೇ ಇರುವುದು ವಿಪರ್ಯಾಸ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us