ಚಾಮರಾಜನಗರ: ಉದ್ಯಮಿಯಿಂದ 3.70 ಲಕ್ಷ ರೂ. ಕಿತ್ತುಕೊಂಡು ಪರಾರಿಯಾದ ಪೊಲೀಸ್​ ಆ್ಯಂಡ್​ ಟೀಂ

ಚಾಮರಾಜನಗರದ ಸೈಬರ್ ಕ್ರೈಂ ಪಿಎಸ್ಐ ಅಯ್ಯನಗೌಡ ಮತ್ತು ಅವರ ತಂಡವು ತಮಿಳುನಾಡು ಮೂಲದ ಉದ್ಯಮಿಯೊಬ್ಬರಿಂದ 3.7 ಲಕ್ಷ ರೂಪಾಯಿಗಳನ್ನು ಹೆದರಿಸಿ ವಸೂಲಿ ಮಾಡಿದೆ. ಈ ಪ್ರಕರಣದಲ್ಲಿ ಪಿಎಸ್ಐ ಮತ್ತು ಇತರ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಆರೋಪಿಗಳನ್ನು ಬಂಧಿಸಲಾಗಿದ್ದು, ಪರಾರಿಯಾಗಿರುವ ಪೊಲೀಸರನ್ನು ಬಂಧಿಸಲು ವಿಶೇಷ ತಂಡ ರಚಿಸಲಾಗಿದೆ. ಪ್ರಕರಣ ಸಂಬಂಧ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಚಾಮರಾಜನಗರ: ಉದ್ಯಮಿಯಿಂದ 3.70 ಲಕ್ಷ ರೂ. ಕಿತ್ತುಕೊಂಡು ಪರಾರಿಯಾದ ಪೊಲೀಸ್​ ಆ್ಯಂಡ್​ ಟೀಂ
ಪಿಎಸ್ಐ ಅಯ್ಯನಗೌಡ
Updated By: ವಿವೇಕ ಬಿರಾದಾರ

Updated on: Jul 28, 2025 | 7:11 PM

ಚಾಮರಾಜನಗರ, ಜುಲೈ 28: ಚಾಮರಾಜನಗರ (Chamrajnagar) ಸೈಬರ್ ಕ್ರೈಂ ಪೊಲೀಸ್ (Cyber Crime Police) ಠಾಣೆಯ ಪಿಎಸ್ಐ ಅಯ್ಯನಗೌಡ ಮತ್ತು ಈತನ ಗ್ಯಾಂಗ್​ ತಮಿಳುನಾಡು ಮೂಲದ ಉದ್ಯಮಿಯೊಬ್ಬರಿಗೆ ಹೆದರಿಸಿ 3 ಲಕ್ಷದ 70 ಸಾವಿರ ರೂ. ವಸೂಲಿ ಮಾಡಿದೆ. ಪ್ರಕರಣ ಸಂಬಂಧ ಪಿಎಸ್ಐ ಅಯ್ಯನಗೌಡ, ಪೊಲೀಸ್​ ಪೇದೆಗಳಾದ ಮೋಹನ್, ಮಹೇಶ್ ಹಾಗೂ ಚಾಮರಾಜನಗರ ಟೌನ್ ಠಾಣೆಯ ಪೊಲೀಸ್​ ಪೇದೆ ಬಸವಣ್ಣ, ಸೈಯದ್ ಅನ್ಸಾರಿ ಹಾಗೂ ಇಮ್ರಾನ್ ಸೇರಿದಂತೆ ನಾಲ್ವರು ಆರೋಪಿಗಳ ವಿರುದ್ಧ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಪ್ರಕರಣ ಸಂಬಂಧ ಪೊಲೀಸ್​ ಅಧಿಕಾರಿಗಳನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ. ಬಿಟಿ ಕವಿತಾ ಆದೇಶ ಹೊರಡಿಸಿದ್ದಾರೆ.

ತಮಿಳನಾಡು ಉದ್ಯಮಿ ಸಚ್ಚಿದಾನಂದ ಮೂರ್ತಿ ಅವರಿಗೆ ಆರೋಪಿಗಳಾದ ಸೈಯದ್ ಅನ್ಸಾರಿ ಹಾಗೂ ಇಮ್ರಾನ್ ಕರೆ ಮಾಡಿ, 3 ಲಕ್ಷ ಹಣ ತೆಗೆದುಕೊಂಡು ಬನ್ನಿ ಒಂದು ತಿಂಗಳ ಒಳಗಾಗಿ ಡಬಲ್ ಮಾಡಿ ಕೊಡುತ್ತೇವೆ ಎಂದು ನಂಬಿಸಿದ್ದಾರೆ. ಇವರ ಮಾತು ನಂಬಿದ ಉದ್ಯಮಿ ಸಚ್ಚಿದಾನಂದ ಜುಲೈ 26 ರಂದು 3 ಲಕ್ಷ ಹಣ ತಗೆದುಕೊಂಡು ಚಾಮರಾಜನಗರದ ಡೆಲ್ಲಿ ದರ್ಬಾರ್ ಹೋಟೇಲ್​ಗೆ ಬಂದಿದ್ದಾರೆ.

ಸಚ್ಚಿದಾನಂದ ಮೂರ್ತಿ ಹಣ ತಂದಿರುವ ವಿಚಾರವನ್ನು ಅನ್ಸಾರಿ ಹಾಗೂ ಸೈಯದ್ ಸಿಇಎನ್ ಠಾಣೆಯ ಪಿಎಸ್​ಐ ಅಯ್ಯನಗೌಡಗೆ ತಿಳಿಸಿದ್ದಾರೆ. ಬಳಿಕ, ಪಿಎಸ್​ಐ ಅಯ್ಯನಗೌಡ ಮೂರು ಜನ ಪೇದೆಗಳನ್ನು ಕರೆದುಕೊಂಡು ಡೆಲ್ಲಿ ದರ್ಬಾರ್ ಹೋಟೆಲ್ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಉದ್ಯಮಿ ಸಚ್ಚಿದಾನಂದ ಅವರಿಗೆ ಧಮ್ಕಿ ಹಾಕಿ, “ಕೇಸ್ ರಿಜಿಸ್ಟರ್ ಆಗಬಾರದು ಅಂದ್ರೆ 4 ಲಕ್ಷ ರೂ. ಕೊಡು ಎಂದು ಹೇಳಿದ್ದಾರೆ. ನಂತರ, ಉದ್ಯಮಿ ಸಚ್ಚಿದಾನಂದ ಬಳಿ ಇದ್ದ 3 ಲಕ್ಷ ರೂ. ಕಿತ್ತುಕೊಂಡಿದ್ದಾರೆ. ಅಲ್ಲದೆ 70 ಸಾವಿರ ಹಣವನ್ನ ಫೋನ್ ಪೇ ಮೂಲಕ ಅನ್ಸಾರಿ ಖಾತೆಗೆ ಹಾಕಿಸಿಕೊಂಡಿದ್ದಾರೆ.

ಇದನ್ನೂ ಓದಿ
ಡೇಟಿಂಗ್​ ಆ್ಯಪ್​ನಲ್ಲಿ ಪರಿಚಯವಾದ ಸುಂದರಿಯ ಹಿಂದೆ ಹೋದ ಟೆಕ್ಕಿಗೆ ಪಂಗನಾಮ
ಹನಿಟ್ರ್ಯಾಪ್​ ಜಾಲಕ್ಕೆ ಬೀಳಿಸಿ ವಸೂಲಿ ಮಾಡ್ತಿದ್ದ ಜೋಡಿ ಅರೆಸ್ಟ್!
ಪ್ರೀತಿಸುವಂತೆ ಮಹಿಳೆಗೆ ಕಿರುಕುಳ: ಮಾತುಕತೆಗೆ ಕರೆದವರಿಗೆ ಹೀಗಾ ಮಾಡೋದು?
ಹನಿಟ್ರ್ಯಾಪ್ ಖೆಡ್ಡಾಕ್ಕೆ ಬಿದ್ದ ಕಲಬುರಗಿಯ ಸರ್ಕಾರಿ ಅಧಿಕಾರಿಗಳು!

ಇದನ್ನೂ ಓದಿ: ಬಟ್ಟೆ ವ್ಯಾಪರಿಯನ್ನ ಬುಟ್ಟಿಗೆ ಹಾಕಿಕೊಂಡು ಮನೆಗೆ ಕರೆಸಿಕೊಂಡ ಯುವತಿ: ಲಾಕ್ ಆಗಿದ್ದು ಪೊಲೀಸಪ್ಪ

ಈ ಸಂಬಂಧ ಉದ್ಯಮಿ ಸಚ್ಚಿದಾನಂದ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಾದ ಅನ್ಸಾರಿ ಹಾಗೂ ಸೈಯದ್​ನನ್ನು ಬಂಧಿಸಿದ್ದಾರೆ. ಬಂಧನ ವಿಚಾರ ತಿಳಿಯುತ್ತಿದ್ದಂತೆ ಪಿಎಸ್ಐ ಅಯ್ಯನಗೌಡ, ಪೊಲೀಸ್​ ಪೇದೆಗಳಾದ ಬಸವಣ್ಣ, ರಮೇಶ್ ಹಾಗೂ ಮೋಹನ್ ತಲೆ ಮರೆಸಿಕೊಂಡಿದ್ದಾರೆ. ಪರಾರಿಯಾಗಿರುವ ಪೊಲೀಸರ ಬಂಧನಕ್ಕಾಗಿ ವಿಶೇಷ ತಂಡ ರಚಿಸಿ ಶೋಧಕಾರ್ಯ ನಡೆಸಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:08 pm, Mon, 28 July 25