
ಚಾಮರಾಜನಗರ, ಜೂನ್ 24: ಗಡಿ ಜಿಲ್ಲೆ ಚಾಮರಾಜನಗರದಲ್ಲಿ (Chamrajanagar) ಕಳೆದ ವರ್ಷಕ್ಕಿಂತ ಈ ಬಾರಿಯ ಶೈಕ್ಷಣಿಕ ವರ್ಷದಲ್ಲಿ ಹೆಚ್ಚು ಮಕ್ಕಳು ಸರ್ಕಾರಿ ಶಾಲೆಯಲ್ಲಿ (Government School) ದಾಖಲಾತಿ ಪಡೆದಿದ್ದು, ಇದಕ್ಕೆ ಕಾರಣ ಸರ್ಕಾರಿ ಶಾಲೆಯ ಶಿಕ್ಷಕನ ವಿನೂತ ಅಭಿಯಾನ ಎಂದು ವರದಿಯಾಗಿತ್ತು. ಆದರೆ ಇದೀಗ, ಇದೇ ಚಾಮರಾಜನಗರ ಜಿಲ್ಲೆಯಲ್ಲಿನ ಒಂದು ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಲ್ಲದೆ ಮುಚ್ಚುವ ಹಂತಕ್ಕೆ ತಲುಪಿದೆ. ಚಾಮರಾಜನಗರ ತಾಲೂಕಿನ ಹೊಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪೋಷಕರು ಮಕ್ಕಳನ್ನು ಕಳುಹಿಸುತ್ತಿಲ್ಲ. ಟಿಸಿ ಪಡೆದು ಬೇರೆ ಶಾಲೆಗೆ ದಾಖಲಿಸುತ್ತಿದ್ದಾರೆ. ಸದ್ಯ ಈ ಶಾಲೆಯಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿ ಇದ್ದು ಮುಚ್ಚುವ ಹಂತಕ್ಕೆ ಬಂದಿದೆ.
ಈ ಹಿಂದೆ ಈ ಶಾಲೆಯಲ್ಲಿ ಮೂವರು ಶಿಕ್ಷಕರಿದ್ದರು. ಇವರ ಒಳಜಗಳದಿಂದ ಸಮರ್ಪಕವಾಗಿ ಪಾಠ ನಡೆಯದೆ ಪೋಷಕರು ಬೇಸತ್ತು ಹಲವು ಬಾರಿ ಈ ಶಾಲೆಗೆ ಬೀಗ ಜಡಿದು ಪ್ರತಿಭಟನೆಯನ್ನೂ ಮಾಡಿದ್ದರು. ಮಕ್ಕಳ ಸಂಖ್ಯೆಯೂ 22 ಕ್ಕೆ ಕುಸಿದಿತ್ತು. ನಂತರ ವರ್ಷಗಳಲ್ಲಿ ಮಕ್ಕಳ ಸಂಖ್ಯೆ ದಿಢೀರ್ನೆ ಕುಸಿದಿದ್ದು, 12 ವಿದ್ಯಾರ್ಥಿಗಳು ಟಿಸಿ ಪಡೆದು ಬೇರೆ ಕಡೆ ಸೇರಿಕೊಂಡಿದ್ದಾರೆ. ಉಳಿದವರು ಟಿಸಿಗೆ ಅರ್ಜಿ ಸಲ್ಲಿಸಿದ್ದು ಶಾಲೆ ಕಡೆ ಮುಖ ಮಾಡುತ್ತಿಲ್ಲ.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯ ಶಿಕ್ಷಕ ಚಿನ್ನಸ್ವಾಮಿ, ಹಿಂದೆ ಈ ಶಾಲೆಯಲ್ಲಿ ಶಿಕ್ಷಕರು ಸರಿಯಾದ ರೀತಿ ಪಾಠ ಮಾಡುತ್ತಿಲ್ಲ ಎಂಬ ಆರೋಪ ಬಂದಿತ್ತು. ಊರಿನ ಗ್ರಾಮಸ್ಥರು ಕೂಡ ಅಧಿಕಾರಿಗಳಿಗೆ ದೂರು ಕೊಟ್ಟಿದ್ದರು. ನಂತರ ಆ ಇಬ್ಬರೂ ಶಿಕ್ಷಕರನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿತ್ತು. ನಂತರ ಸಮಸ್ಯೆ ಉದ್ಬವವಾಗಿರಲಿಲ್ಲ. ಆದರೆ, ಪೋಷಕರು ಮಕ್ಕಳ ಟಿಸಿ ಪಡೆದು ಕರೆದುಕೊಂಡು ಹೋಗುತ್ತಿದ್ದು, ಯಾವ ಕಾರಣಕ್ಕೆ ಎಂಬುವುದು ಗೊತ್ತಿಲ್ಲ ಎಂದು ಹೇಳಿದರು.
ಈ ಶಾಲೆಯಲ್ಲಿ ಮುಂಚೆ ಹಿಂದುಳಿದ ಹಾಗೂ ದಲಿತ ವರ್ಗಕ್ಕೆ ಸೇರಿದ ಇಬ್ಬರು ಅಡುಗೆ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಮಕ್ಕಳ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ಮಹಿಳೆಯನ್ನು ಕೆಲಸದಿಂದ ತೆಗೆದು ಹಾಕಿ, ರೋಸ್ಟರ್ ಪದ್ಧತಿ ಪ್ರಕಾರ ದಲಿತ ಮಹಿಳೆಯನ್ನು ಅಡುಗೆ ಸಿಬ್ಬಂದಿಯಾಗಿ ನೇಮಕ ಮಾಡಲಾಯ್ತು. ದಲಿತ ಮಹಿಳೆ ಅಡುಗೆ ಮಾಡುತ್ತಾರೆ ಎಂಬ ಕಾರಣಕ್ಕೆ ಮಕ್ಕಳನ್ನು ಶಾಲೆ ಬಿಡಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆದರೆ, ಈ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.
ಇದನ್ನೂ ಓದಿ: ಖಾಸಗಿ ಶಾಲೆಗಳಿಗೆ ಗುಡ್ ಬೈ, ಚಾಮರಾಜನಗರದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಳ
ಒಟ್ಟಿನಲ್ಲಿ ಹಿಂದೆ ಈ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಪಾಠ ಮಾಡ್ತಿಲ್ಲವೆಂದು ಪೋಷಕರು ಗಲಾಟೆ ಮಾಡಿ ಶಿಕ್ಷಕರನ್ನು ಬೇರೆಡೆಗೆ ಎತ್ತಂಗಡಿ ಮಾಡಿಸಿದ್ದರು. ಹೊಸ ಶಿಕ್ಷಕರು ನೇಮಕವಾದರೂ ಕೂಡ ಪೋಷಕರು ತಮ್ಮ ಮಕ್ಕಳ ಟಿಸಿ ಪಡೆದು ಬೇರೆ ಶಾಲೆಗೆ ದಾಖಲಿಸುತ್ತಿರುವುದು ಏಕೆ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ.
Published On - 10:17 pm, Tue, 24 June 25