ಖಾಸಗಿ ಶಾಲೆಗಳಿಗೆ ಗುಡ್ ಬೈ: ಚಾಮರಾಜನಗರದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಳ
ಸರ್ಕಾರಿ ಶಾಲೆ ಅಂದ್ರೆ ಮೂಗು ಮುರಿಯುವವರೇ ಹೆಚ್ಚಾಗಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ 20ಕ್ಕೂ ಹೆಚ್ಚು ಶಾಲೆಗಳಿಗೆ ಬೀಗ ಬಿದ್ದಿದೆ. ಆದರೆ ಈ ವರ್ಷ ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಕಾರಣವೇನು? ಇಲ್ಲಿದೆ ವಿವರ.

ಚಾಮರಾಜನಗರ, ಜೂನ್ 11: ಸರ್ಕಾರಿ ಶಾಲೆಗಳಲ್ಲಿ (Government School) ಮೂಲಭೂತ ಸೌಕರ್ಯ ಕೊರತೆ ಇರುತ್ತದೆ, ಮಕ್ಕಳಿಗೆ ಕ್ವಾಲಿಟಿ ಶಿಕ್ಷಣ ಸಿಗಲ್ಲ ಎಂಬ ಕಾರಣದಿಂದ ಪೋಷಕರು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ. ಆದರೆ, ಗಡಿ ಜಿಲ್ಲೆ ಚಾಮರಾಜನಗರದಲ್ಲಿ (Chamrajanagar) ಇದಕ್ಕೆ ತದ್ವಿರುದ್ಧ ಎಂಬ ರೀತಿಯಲ್ಲಿ ಈ ಬಾರಿಯ ಶೈಕ್ಷಣಿಕ ವರ್ಷದಲ್ಲಿ ಹೆಚ್ಚು ಮಕ್ಕಳು ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಪಡೆದಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ 20ಕ್ಕೂ ಹೆಚ್ಚು ಸರ್ಕಾರಿ ಶಾಲೆ ಮುಚ್ಚಿದ್ದವು. ಕಟ್ಟಡದ ಕೊರತೆ, ಶಿಕ್ಷಕರ ಕೊರತೆ, ಮೂಲಭೂತ ಸೌಕರ್ಯ ಕೊರತೆಯಿದೆ ಎಂದು ಪೋಷಕರು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುತ್ತಿದ್ದರು. ಆದರೆ, ಈ ಬಾರಿ ಪರಿಸ್ಥಿತಿ ಸ್ವಲ್ಪ ಬದಲಾಗಿದ್ದು, ಸರ್ಕಾರಿ ಶಾಲೆಗಳತ್ತ ಪೋಷಕರು ಸ್ವಲ್ಪ ಮಟ್ಟಿಗೆ ಒಲವು ತೋರಿದ್ದಾರೆ.
ಸರ್ಕಾರಿ ಶಾಲೆಗಳತ್ತ ಮಕ್ಕಳು ಬರಲು, ಪೋಷಕರು ಒಲವು ತೋರಲು ಅನೇಕ ಕಾರಣಗಳಿಗಳಿವೆ. ಇದಕ್ಕೆ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸಿರುವುದು ಪ್ರಮುಖ ಕಾರಣವಾಗಿದೆ. ಅಲ್ಲದೆ, ಸಾಕಷ್ಟು ಶಾಲೆಗಳನ್ನು ಸಿಆರ್ಎಸ್ ಫಂಡ್ ಮೂಲಕ ಅಭಿವೃದ್ಧಿಪಡಿಸಲಾಗಿದೆ. ಶಿಕ್ಷಕರ ಕೊರತೆ ಕೂಡ ನೀಗಿಸುವ ಕೆಲಸವಾಗಿದೆ. ಶಾಲೆಗಳ ಕಟ್ಟಡ ದುರಸ್ತಿ ಪಡಿಸಿಕೊಡಲಾಗಿದೆ. ಈ ಎಲ್ಲ ಕಾರಣಗಳಿಂದ ಮಕ್ಕಳು ಸರ್ಕಾರಿ ಶಾಲೆಗಳಿಗೆ ಬರುತ್ತಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಶಾಲೆ ಹಾಜರಾತಿ , ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ಶಿಕ್ಷಣ ಸಚಿವ
ಸರ್ಕಾರಿ ಶಾಲೆ ಅಂದ್ರೆ ಸಾಕು ಈಗಿನ ಪೋಷಕರು ಮಕ್ಕಳನ್ನು ದಾಖಲು ಮಾಡಲು ಹಿಂದೇಟು ಹಾಕುತ್ತಿರುವವರ ನಡುವೆ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗಕ್ಕೆ ಮಕ್ಕಳನ್ನು ಹೆಚ್ಚು ದಾಖಲಾತಿ ಮಾಡುತ್ತಿರುವುದು ಮಾತ್ರ ಒಂದು ಆಶಾದಾಯಕ ಬೆಳವಣಿಗೆಯೇ ಸರಿ.