
ಚಾಮರಾಜನಗರ, ಫೆಬ್ರವರಿ 15: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಗುಂಡಾಲ್ ಜಲಾಶಯದಲ್ಲಿ ಗಂಡು ಹುಲಿಯ ಮೃತದೇಹ (tiger deadbody) ಪತ್ತೆ ಆಗಿರುವಂತಹ ಘಟನೆ ನಡೆದಿದೆ. ಡ್ಯಾಂನಲ್ಲಿ ಹುಲಿಯ ಶವ ತೇಲುತ್ತಿರುವುದನ್ನು ನೋಡಿದ ಪ್ರವಾಸಿಗರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಕೊಳ್ಳೇಗಾಲ ಪೊಲೀಸರು ಮತ್ತು ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್ ಸಿಬ್ಬಂದಿ ಭೇಟಿ ನೀಡಿದ್ದಾರೆ. ಸದ್ಯ ಜಲಾಶಯದಿಂದ ಹುಲಿಯ ಮೃತದೇಹವನ್ನು ಅರಣ್ಯ ಸಿಬ್ಬಂದಿ ಹೊರತೆಗೆದಿದ್ದು, ಪಶು ವೈದ್ಯರಿಂದ ಸ್ಥಳದಲ್ಲೇ ಹುಲಿಯ ಮರಣೋತ್ತರ ಪರೀಕ್ಷೆ ಮಾಡಿ, ಸ್ಯಾಂಪಲ್ ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ರವಾನಿಸಿದ್ದಾರೆ.
ಬಿಳಿಗಿರಿ ಹುಲಿ ಸಂರಕ್ಷಿತ ಅರಣ್ಯಾಧಿಕಾರಿಗಳ ಮಾಹಿತಿ ಪ್ರಕಾರ ಕತ್ತಿಗೆ ಉರುಳು ಸಿಲುಕಿ ಒದ್ದಾಡಿ ಹುಲಿ ಮೃತಪಟ್ಟಿದೆ. ಅರಣ್ಯಾಧಿಕಾರಿಗಳ ಸ್ಥಳ ಪರಿಶೀಲನೆ ವೇಳೆ ಘಟನೆ ಬೆಳಕಿಗೆ ಬಂದಿದೆ.
ಇನ್ನು ಗಡಿನಾಡು ಚಾಮರಾಜನಗರದಲ್ಲಿ ದಿನ ಕಳೆದಂತೆ ಚಿರತೆ ಉಪಟಳವೂ ಮಿತಿಮೀರಿದೆ. ಇತ್ತೀಚೆಗೆ ಹನೂರು ಭಾಗದಲ್ಲಿ ಚಿರತೆ ದಾಳಿ ನಡೆಸಿ ಮೂರು ಕುರಿಯನ್ನ ತಿಂದು ತೇಗಿತ್ತು. ಕಳೆದ ಒಂದುವರೆ ತಿಂಗಳಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಬರೋಬ್ಬರಿ 15 ಕಡೆ ಚಿರತೆ ದಾಳಿ ನಡೆದಿದೆ.
ಇದನ್ನೂ ಓದಿ: ಜನರನ್ನ ಬಲಿ ಪಡೆಯುತ್ತಿದ್ದ ಹುಲಿಗಳ ಸೆರೆ: ಆಪರೇಷನ್ T2 ಆಲ್ಫಾ 5ನೇ ಹಂತದ ಕಾರ್ಯಾಚರಣೆಯೂ ಯಶಸ್ವಿ
ಗಡಿ ನಾಡು ಚಾಮರಾದನಗರ ಅಪಾರ ವನ್ಯ ಮೃಗಗಳ ಸಂಪತ್ತು ಹೊಂದಿರುವ ಜಿಲ್ಲೆ. ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್ ನಂತಹ ಎರೆಡೆರೆಡು ಟೈಗರ್ ರಿಸರ್ವ್ ಫಾರೆಸ್ಟ್ ಹಾಗೂ ಕಾವೇರಿ ವೈಲ್ಡ್ ಲೈಫ್ ಮಲೆ ಮಹದೇಶ್ವರ ವನ್ಯಜೀವಿಧಾಮವಿದೆ.
ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳುತ್ತಿದ್ದ ಭಕ್ತನ ಕತ್ತು ಸೀಳಿ ಕೊಂದು ಹೊತ್ತೊಯ್ದಿದ್ದ ಚಿರತೆ ಕೊನೆಗೂ ಸೆರೆ
ಇಷ್ಟೊಂದು ಅಪಾರ ಸಂಪತ್ತು ವನ್ಯ ಮೃಗಗಳು ಇರುವ ಈ ಜಿಲ್ಲೆಯಲ್ಲಿ ದಿನ ಕಳೆದಂತೆ ಚಿರತೆ ಉಪಟಳ ಹೆಚ್ಚಾಗಿದೆ. ಕಾಡಿನಿಂದ ನಾಡಿಗೆ ಬರುವ ಚಿರತೆಗಳು ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ. ಮಾದಪ್ಪನ ಭಕ್ತನನ್ನ ಕೊಂದು ತಿಂದ ನರಭಕ್ಷಕ ಚಿರತೆ ಸೆರೆಯಾದ ಬಳಿಕವು ಹನೂರು ಭಾಗದಲ್ಲಿ ಮತ್ತೆ ಮಹಾಲಿಂಗನಕಟ್ಟೆಯಲ್ಲಿ ಚಿರತೆ ದಾಳಿ ನಡೆಸಿ 3 ಮೇಕೆಗಳನ್ನ ತಿಂದು ತೇಗಿತ್ತು.
ಕರ್ನಾಟಕದ ನತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:43 pm, Sun, 15 February 26