Rohini Sindhuri: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು
ವಿಧಾನಸಭೆಯ ನಿವೃತ್ತ ಭದ್ರತಾ ಅಧೀಕ್ಷಕರಾದ ಎಂ.ಎನ್.ಪಿಳ್ಳಪ್ಪ ಎಂಬುವವರು ದೂರು ನೀಡಿದ್ದು, ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಲು ಮನವಿ ಮಾಡಿದ್ದಾರೆ.
ದೆಹಲಿ: ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಸಾವು ಪ್ರಕರಣಕ್ಕೆ ಸಂಬಂಧಿಸಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ವಿರುದ್ಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ (NHRC) ದೂರು ಸಲ್ಲಿಕೆಯಾಗಿದೆ. ವಿಧಾನಸಭೆಯ ನಿವೃತ್ತ ಭದ್ರತಾ ಅಧೀಕ್ಷಕರಾದ ಎಂ.ಎನ್.ಪಿಳ್ಳಪ್ಪ ಎಂಬುವವರು ದೂರು ನೀಡಿದ್ದು, ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಲು ಮನವಿ ಮಾಡಿದ್ದಾರೆ.
ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ರೋಗಿಗಳ ಸಾವು ಪ್ರಕರಣದ ವಿಚಾರಣ ನಡೆಸಿದ ಹೈಕೋರ್ಟ್ ಜುಲೈ 6ರಂದು ಅತ್ಯಂತ ಮಹತ್ವದ ತೀರ್ಪು ನೀಡಿದೆ. ಮೃತರ 13 ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಆಕ್ಸಿಜನ್ ಕೊರತೆಯಾದ ರಾತ್ರಿ, ಬೆಳಗ್ಗೆ 13 ರೋಗಿಗಳ ಸಾವನ್ನಪ್ಪಿದ್ದಾರೆ. ಈ ಮೃತರ 13 ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡಿ. ಬಳಿಕ ಮೃತಪಟ್ಟ 11 ಜನರ ಕುಟುಂಬಕ್ಕೆ ತಲಾ 2ಲಕ್ಷ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶಿಸಿದೆ. ಆಯೋಗದ ವರದಿ ಬಳಿಕ ಹೆಚ್ಚುವರಿ ಪರಿಹಾರ ಬಗ್ಗೆ ನಿರ್ಧರಿಸಿ ಎಂದು ಸಹ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಘಟನೆಯ ವಿವರ: ಮೇ 2ರ ರಾತ್ರಿ 10.30ರಿಂದ ತಡರಾತ್ರಿ 2.30ರವರೆಗೆ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆ ಉಂಟಾಗಿತ್ತು. ಅದರ ಪರಿಣಾಮ 24 ಜನ ಮೃತಪಟ್ಟಿದ್ದಾರೆ ಎನ್ನಲಾಗಿದ್ದರೂ ನಂತರ ನ್ಯಾ.ಎ.ಎನ್.ವೇಣುಗೋಪಾಲಗೌಡ ನೇತೃತ್ವದ ಸಮಿತಿ ಹೈಕೋರ್ಟ್ಗೆ ಸಲ್ಲಿಸಿದ ವರದಿಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರು 24 ಜನರಲ್ಲ, 36 ಜನರು ಎಂದು ಉಲ್ಲೇಖಿಸಲಾಗಿತ್ತು.
ಈ 4 ಗಂಟೆಗಳ ಅವಧಿಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಚಿಕಿತ್ಸೆಗಾಗಿ ಆಕ್ಸಿಜನ್ ಇರಲಿಲ್ಲ ಎಂದು ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆಡಿಟ್ ವರದಿ ಪ್ರಕಾರ ಆಕ್ಸಿಜನ್ ಕೊರತೆಯಿಂದ ಮೂವರು ಸಾವನ್ನಪ್ಪಿದ್ದಾರೆ. ಮೆದುಳಿನ ಆಘಾತದಿಂದ 7 ರೋಗಿಗಳು ಮೃತಪಟ್ಟಿದ್ದಾರೆ. ಕೊರೊನಾ ಸೋಂಕಿನಿಂದ 14 ಸಾವಾಗಿದೆ ಎಂದು ತಿಳಿಸಲಾಗಿತ್ತು. ಆದರೆ ಇವರೆಲ್ಲರಿಗೂ ಆಕ್ಸಿಜನ್ ಕೊರತೆ ಆಗಿದ್ದು ನಿಜ. ಆಕ್ಸಿಜನ್ ಕೊರತೆಯಾದ ನಂತರ 36 ಒಳರೋಗಿಗಳು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ನ್ಯಾ.ಎ.ಎನ್.ವೇಣುಗೋಪಾಲಗೌಡ ನೇತೃತ್ವದ ಸಮಿತಿ ಹೈಕೋರ್ಟ್ಗೆ ವರದಿ ಸಲ್ಲಿಸಿತ್ತು.
ಇದನ್ನೂ ಓದಿ:
(Chamarajanagar Medical Oxygen death case Complaint against IAS officer Rohini Sindhuri to National Human Rights Commission)
Published On - 3:54 pm, Wed, 11 August 21