ಚಾಮರಾಜನಗರ: ಕಾಡಾನೆ ಹಾವಳಿಗೆ ಬ್ರೇಕ್ ಹಾಕಲು ಮಾಸ್ಟರ್ ಪ್ಲಾನ್, ಜಮೀನಿಗೆ ನುಗ್ಗದಂತೆ ಮಾಡಲು ಹೊಸ ಟೆಕ್ನಾಲಜಿ ಬಳಕೆ

| Updated By: Ganapathi Sharma

Updated on: Feb 16, 2025 | 2:57 PM

ಗಡಿನಾಡು ಚಾಮರಾಜನಗರದಲ್ಲಿ ಸದಾ ಮಾನವ ಹಾಗೂ ಕಾಡು ಪ್ರಾಣಿ ಸಂಘರ್ಷ ನಡೆಯುತ್ತಲೇ ಇರುತ್ತದೆ. ಅದರಲ್ಲೂ ಕಾಡಾನೆಗಳ ಹಾವಳಿಗೆ ಕಾಡಂಚಿನ ಗ್ರಾಮದ ಜನ ರೋಸಿ ಹೋಗಿದ್ದಾರೆ. ಮದಗಜಗಳ ಉಪಟಳ ತಡೆಗೆ ಗ್ರಾಮಸ್ಥರೇ ಹೊಸ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಗ್ರಾಮಸ್ಥರ ಈ ಹೊಸ ಅಸ್ತ್ರದಿಂದ ಕಾಡಾನೆಗಳ ಹಾವಳಿಗೆ ಬ್ರೇಕ್ ಬಿದ್ದಿದೆ. ಹಾಗಾದರೆ ಏನದು? ಇಲ್ಲಿದೆ ಮಾಹಿತಿ.

ಚಾಮರಾಜನಗರ: ಕಾಡಾನೆ ಹಾವಳಿಗೆ ಬ್ರೇಕ್ ಹಾಕಲು ಮಾಸ್ಟರ್ ಪ್ಲಾನ್, ಜಮೀನಿಗೆ ನುಗ್ಗದಂತೆ ಮಾಡಲು ಹೊಸ ಟೆಕ್ನಾಲಜಿ ಬಳಕೆ
ಕಾಡಾನೆ ಹಾವಳಿಗೆ ಬ್ರೇಕ್ ಹಾಕಲು ಹೊಸ ಟೆಕ್ನಾಲಜಿ ಬಳಕೆ
Follow us on

ಚಾಮರಾಜನಗರ, ಫೆಬ್ರವರಿ 16: ರೈಲ್ವೆ ಬ್ಯಾರಿಕೇಡ್ ದಾಟಿ ಜಮೀನಿನ ಒಳ ನುಗ್ಗಲು ಯತ್ನಿಸುತ್ತಿರುವ ಒಂಟಿ ಸಲಗ, ಮತ್ತೊಂದೆಡೆ ಗ್ರಾಮದ ಹೊರ ವಲಯ ಬೀಡು ಬಿಟ್ಟಿರುವ ಕಾಡಾನೆಯ ಹಿಂಡು. ಗ್ರಾಮದತ್ತ ಆನೆಗಳು ನುಗ್ಗದಂತೆ ಕೇಕೆ ಹಾಕುತ್ತಿರುವ ಗ್ರಾಮಸ್ಥರು. ಈ ಎಲ್ಲಾ ದೃಶ್ಯಗಳು ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪಿಜಿ ಪಾಳ್ಯದಲ್ಲಿ ಸಾಮಾನ್ಯ. ದಿನ ನಿತ್ಯ ಕತ್ತಲಾದರೆ ಸಾಕು, ಪಿಜಿ ಪಾಳ್ಯ ಸೇರಿದಂತೆ ಸುತ್ತಮುತ್ತ 10 ಗ್ರಾಮಗಳಿಗೆ ಕಾಡಾನೆಗಳ ಹಿಂಡು ನುಗ್ಗಿ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಹಾನಿ ಮಾಡುತ್ತಲೇ ಇವೆ. ಸೋಲಾರ್ ಫೆನ್ಸಿಂಗ್, ರೈಲ್ವೆ ಬ್ಯಾರಿಕೇಟ್ ಹಾಕಿದರೂ ಯಾವುದೇ ಪ್ರಯೋಜನಕ್ಕೆ ಬರಲಿಲ್ಲ. ಹಾಗಾಗಿ ಇದೀಗ ಗ್ರಾಮಸ್ಥರು ಹೊಸ ತಂತ್ರವನ್ನು ಬಳಸಿದ್ದಾರೆ.

ಗ್ರಾಮಸ್ಥರು ಬಳಸಿದ ಹೊಸ ತಂತ್ರಜ್ಞಾನ ಏನು?

ಕಾಡಂಚಿನ ಪ್ರದೇಶಗಳಲ್ಲಿ ಎಲ್ಲೆಲ್ಲಿ ಆನೆಗಳು ನುಗ್ಗುತ್ತವೆಯೋ ಆ ಪ್ರದೇಶಗಳಲ್ಲಿ ನೂತನ ಸ್ಕ್ಯಾನರ್, ಸಿಸಿ ಕ್ಯಾಮರಾ ಅಳವಡಿಸಿದ್ದಾರೆ. ಕ್ಯಾಮರಾದಲ್ಲಿ ಆನೆ ಕಾಣಿಸುತ್ತಿದ್ದಂತೆಯೇ ತಕ್ಷಣ ಹುಲಿ ಗರ್ಜನೆ ಸೈರನ್ ಮೊಳಗುವುದರ ಜತೆಗೆ ವಿಚಿತ್ರವಾಗಿ ಶಬ್ದ ಮಾಡುತ್ತಿದೆ. ಈ ಸದ್ದು ಕೇಳಿದ ಆನೆಗಳ ಹಿಂಡು ಬೆದರಿ ವಾಪಸ್ಸು ಕಾಡಿನತ್ತ ಮುಖ ಮಾಡುತ್ತಿವೆ.

ತಂತ್ರಜ್ಞಾನದ ವಿಶೇಷವೇನು?

ಈ ಸಿಸಿ ಕ್ಯಾಮರಾದ ವಿಶೇಷ ಏನಂದರೆ, ಆನೆಗಳನ್ನೇ ಗುರಿಯಾಗಿಸುತ್ತವೆ. ರೈಲ್ವೆ ಬ್ಯಾರಿಕೇಡ್ ಹತ್ತಿರ ಆನೆಗಳು ಬರುತ್ತಿದ್ದಂತೆಯೇ ಸಿಸಿ ಕ್ಯಾಮರಾ ಸೈರನ್​ಗೆ ಸಂದೇಶ ಕಳುಹಿಸುತ್ತದೆ. ತಕ್ಷಣವೇ ಸೈರನ್​​ ಮೊಳಗುತ್ತದೆ. ಹುಲಿ ಗರ್ಜನೆ ಹಾಗೂ ವಿಚಿತ್ರವಾದ ಶಬ್ದ ಹೊರ ಬರುತ್ತದೆ. ಹುಲಿ ಗರ್ಜನೆ ಕೇಳಿದ ತಕ್ಷಣ ಆನೆಗಳು, ಹುಲಿ ಇದೆ ಎಂದು ಭಾವಿಸಿ ಆ ಸ್ಥಳದಿಂದ ಕಾಲು ಕೀಳುತ್ತಿವೆ.

ಇದೀಗ ಹೊಸ ತಂತ್ರಜ್ಞಾನ ಸಿಕ್ಕಾಪಟ್ಟೆ ಪರಿಣಾಮ ಬೀರಿದ್ದು, ಮುಂಬರುವ ದಿನಗಳಲ್ಲಿ ಆನೆಗಳ ಹಾವಳಿಗೆ ಬ್ರೇಕ್ ಹಾಕಲು ಈ ತಂತ್ರಜ್ಞಾನವನ್ನೇ ಉಪಯೋಗಿಸಿಕೊಳ್ಳುವ ಸಾಧ್ಯತೆಯಿದೆ.

ಇದನ್ನೂ ಓದಿ: ವಿದೇಶಿ ಪ್ರಜೆಯನ್ನು ಬಲಿ ಪಡೆದ ಕಾಡಾನೆ, ಸೊಂಡಿಲಿನಿಂದ ಎತ್ತಿ ಬಿಸಾಡಿರುವ ವಿಡಿಯೋ ನೋಡಿ

ಕಾಡಾನೆ ಹಾವಳಿಯಿಂದಾಗಿ ಪಿಜಿ ಪಾಳ್ಯ ಗೌಡನ ದೊಡ್ಡಿ ಗ್ರಾಮಗಳಲ್ಲಿ ಬಾಳೆ ಬೆಳೆ, ತರಕಾರಿಗಳು, ಕಬ್ಬು ಬೆಳೆಯಲು ಸಾದ್ಯವಾಗುತ್ತಿರಲಿಲ್ಲ. ಈ ಪ್ರದೇಶದಲ್ಲಿ ಕಾಡಾನೆಗಳ ಹಿಂಡು ರಾತ್ರೋ ರಾತ್ರಿ ಜಮೀನುಗಳಿಗೆ ನುಗ್ಗಿ ಬೆಳೆ ನಾಶಪಡಿಸುತ್ತಿತ್ತು. ಇದರಿಂದ ರೋಸಿ ಹೋಗಿದ್ದ ಗ್ರಾಮಸ್ಥರಿಗೆ ಈಗ ಸ್ಕ್ಯಾನರ್ ಸಿಸಿ ಕ್ಯಾಮರಗಳು ಭಾರೀ ಪ್ರಯೋಜನಕಾರಿಯಾಗಿವೆ.

ಪಟಾಕಿ ಶಬ್ದದಕ್ಕೂ ಬಗ್ಗದೆ, ರೈಲ್ವೇ ಬ್ಯಾರೀಕೇಡ್​​ಗೂ ಕ್ಯಾರೇ ಅನ್ನದೆ ಗ್ರಾಮಸ್ಥರಿಗೆ ಉಪಟಳ ನೀಡುತ್ತಿದ್ದ ಕಾಡಾನೆಗಳ ಹಾವಳಿಗೆ ಕೊನೆಗೂ ಬ್ರೇಕ್ ಬಿದ್ದಿದ್ದು ಗ್ರಾಮಸ್ಥರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ