ಡಿ.12ರಂದು ಚಾಮರಾಜನಗರಕ್ಕೆ ಸಿಎಂ ಭೇಟಿ: ಅಧಿಕಾರ ಕಳೆದುಕೊಳ್ಳುವ ಮೌಢ್ಯದ ಮಧ್ಯೆ ಅಭಿವೃದ್ಧಿ ಜಪ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಡಿ.12ರಂದು ಚಾಮರಾಜನಗರ ಜಿಲ್ಲೆಯ ಕಾಂಗ್ರೆಸ್ ಭದ್ರಕೋಟೆಯಾಗಿರುವ ಹನೂರು ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ.
ಚಾಮರಾಜನಗರ: ಚಾಮರಾಜನಗರಕ್ಕೆ (Chamarajanagar) ಮುಖ್ಯಮಂತ್ರಿಗಳು ಭೇಟಿ ನೀಡಿದ ಆರು ತಿಂಗಳ ಒಳಗೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆ ಇದೆ. ಈ ಮಧ್ಯೆಯೇ ಈಗಾಗಲೇ ಈ ಹಿಂದೆ ಬೊಮ್ಮಾಯಿ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿ ಅಂಟಿದ್ದ ಮೌಢ್ಯ ಕಳಂಕವನ್ನು ತೊಳೆದುಹಾಕಿದ್ದರು. ಇದೀಗ ಮತ್ತೆ ಅಭಿವೃದ್ಧಿ ಜಪದೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, (CM Basavaraj bommai) ಡಿ.12ರಂದು ಜಿಲ್ಲೆಯ ಕಾಂಗ್ರೆಸ್ ಭದ್ರಕೋಟೆಯಾಗಿರುವ ಹನೂರು ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ 650 ಕೋಟಿ ರೂ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
ಇನ್ನೇರಡು ಕ್ಷೇತ್ರಗಳನ್ನೂ ಕಬಳಿಸಲು ಹೊಂಚು ಹಾಕುತ್ತಿರುವ ಬಿಜೆಪಿ
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ 6 ತಿಂಗಳು ಬಾಕಿ ಇರುವಾಗಲೇ ಬಿಜೆಪಿ ಪಕ್ಷ ಸಂಘಟನೆಗೆ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗುತ್ತಿದೆ. ಇನ್ನೂ ಬಿಜೆಪಿ ಚಾಮರಾಜನಗರ ಜಿಲ್ಲೆಯ ಕಾಂಗ್ರೆಸ್ ಕ್ಷೇತ್ರಗಳನ್ನೇ ಟಾರ್ಗೇಟ್ ಮಾಡಿದ್ದು, ಸರಣಿ ಸಭೆಗಳ ಮೂಲಕ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸುತ್ತಾ ಪಕ್ಷವನ್ನು ಗಟ್ಟಿಗೊಳಿಸುತ್ತಿದೆ.
ಗುಜರಾತ್ ಚುನಾವಣೆ ಫಲಿತಾಂಶದ ನಂತರ ಹುರುಪಿನಲ್ಲಿರುವ ಕೇಸರಿ ಪಡೆ, ಜಿಲ್ಲೆಯ ನಾಲ್ಕು ಕ್ಷೇತ್ರಗಳ ಪೈಕಿ ಎರಡರಲ್ಲಿ ಅಸ್ತಿತ್ವದಲ್ಲಿದ್ದು, ಮತ್ತೆರಡು ಕ್ಷೇತ್ರ ವಶಪಡಿಸಿಕೊಳ್ಳಲು ಮಾಸ್ಟರ್ ಪ್ಲಾನ್ ರೂಪಿಸುತ್ತಿದೆ.
ಜಾಗದಲ್ಲಿ ದೋಷ ಇರುವುದಿಲ್ಲ, ನಾವು ನೋಡುವ ದೃಷ್ಟಿಕೋನದಲ್ಲಿಯೇ ದೋಷ ಇರುತ್ತದೆ
ಕಳೆದ ಎರಡು ತಿಂಗಳ ಹಿಂದೆ (ಅ.6) ರಂದು ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದಾಗ ನಾನು ಚಾಮರಾಜನಗರಕ್ಕೆ ಭೇಟಿ ನೀಡುತ್ತೇನೆ. ಕೆಲವರು ಅಲ್ಲಿಗೆ ಹೋಗಬಾರದು ಇಲ್ಲಿಗೆ ಹೋಗಬಾರದು ಅಂತ ಏನೇನೋ ಹೇಳುತ್ತಾರೆ. ನಾವು ಸಿನಿಮಾ ನೋಡಬೇಕು ಅನಿಸಿದಾಗ ಥಿಯೇಟರ್‌ಗೆ ಹೋಗುತ್ತೇವೆ. ಥಿಯೇಟರ್ ಹೇಗಿರುತ್ತೆ ಅಂತ ನೋಡಲ್ಲ. ಏಕೆಂದರೆ ಯಾವುದೇ ಜಾಗದಲ್ಲಿ ದೋಷ ಇರುವುದಿಲ್ಲ. ಬದಲಿಗೆ ನಾವು ನೋಡುವ ದೃಷ್ಟಿಕೋನದಲ್ಲಿಯೇ ದೋಷ ಇರುತ್ತದೆ. ಅಭಿವೃದ್ಧಿ ದೃಷ್ಟಿಯಿಂದ ಯಾವಾಗ ಬೇಕಾದರೂ ಚಾಮರಾಜನಗರಕ್ಕೆ ಭೇಟಿ ನೀಡುತ್ತೇನೆ ಎಂದು ಹೇಳಿದ್ದರು.
ಇದನ್ನೂ ಓದಿ: ಸಿಎಂ ಚಾಮರಾಜನಗರ ಭೇಟಿ; ಅಧಿಕಾರ ಕಳೆದುಕೊಳ್ಳುವ ಮೌಢ್ಯ ಅಳಿಸಲು ಮುಂದಾದ ಬೊಮ್ಮಾಯಿ
ಅಧಿಕಾರ ಕಳೆದುಕೊಂಡಿದ್ದ ತಂದೆ ಎಸ್. ಆರ್ ಬೊಮ್ಮಾಯಿ
1988ರಲ್ಲಿ ಸಿಎಂ ಬೊಮ್ಮಾಯಿ ತಂದೆ ಎಸ್. ಆರ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಚಾಮರಾಜನಗರಕ್ಕೆ ಭೇಟಿ ನೀಡಿ ಮಿನಿ ವಿಧಾನಸೌಧ, ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದ್ದರು. ಅಲ್ಲಿಂದ ಹೋದ ಕೆಲವೇ ತಿಂಗಳಲ್ಲಿ ರಾಜಕೀಯ ಕಾರಣಗಳಿಂದ ಅಧಿಕಾರ ಕಳೆದುಕೊಂಡರು.
ಅಧಿಕಾರ ಕಳದುಕೊಂಡಿದ್ದ ಹಲವು ಮುಖ್ಯಮಂತ್ರಿಗಳು
ಈ ಹಿಂದೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು, ಗುಂಡೂರಾವ್, ರಾಮಕೃಷ್ಣ ಹೆಗಡೆ ಮತ್ತು ವೀರೇಂದ್ರ ಪಾಟೀಲ್ ಅವರುಗಳು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದರು. ತಮ್ಮ ಚಾಮರಾಜನಗರ ಭೇಟಿಯ 6 ತಿಂಗಳ ಒಳಗೆ ಬೇರೆ ಬೇರೆ ಕಾರಣಗಳಿಗಾಗಿ ಈಎಲ್ಲರೂ ಮುಖ್ಯಮಂತ್ರಿ ಪಟ್ಟವನ್ನು ಕಳೆದುಕೊಂಡಿದ್ದರು. ಈ ಎಲ್ಲ ಬೆಳವಣಿಗೆಗಳು ಮುಖ್ಯಮಂತ್ರಿಯಾದವರು ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎಂಬ ಮೂಢನಂಬಿಕೆಯೊಂದು ಸೃಷ್ಟಿಯಾಗಿಬಿಟ್ಟಿತ್ತು.
ಇದನ್ನೂ ಓದಿ: ನಾವು ಸುಮ್ಮನೇ ಕುಳಿತಿದ್ದರೂ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಬೊಮ್ಮಾಯಿ ತಿರುಗೇಟು
ಮೌಡ್ಯವನ್ನು ಅಳಸಿದ ಸಿದ್ದರಾಮಯ್ಯ
2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಚಾಮರಾಜನಗರಕ್ಕೆ ಅಂಟಿದ್ದ ಕಳಂಕವನ್ನು ತೊಳೆದುಹಾಕಿದ್ದರು. ಚಾಮರಾಜನಗರಕ್ಕೆ 11 ಬಾರಿ ಭೇಟಿ ನೀಡಿದ ಅವರು ಸಾಕಷ್ಟು ಅನುದಾನವನ್ನು ಸಹ ಒದಗಿಸಿದರು. ಅಲ್ಲದೇ ಮುಖ್ಯಮಂತ್ರಿಯಾಗಿ 5 ವರ್ಷಗಳ ಅಧಿಕಾರವನ್ನು ಪೂರ್ಣಗೊಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:51 pm, Sat, 10 December 22