ಚಾಮರಾಜನಗರದಲ್ಲಿ ಹೆಚ್ಚಾಯ್ತು ಬಾಲ್ಯ ವಿವಾಹ ಪ್ರಕರಣಗಳು! ಒಂದೇ ವರ್ಷದಲ್ಲಿ ಬರೋಬ್ಬರಿ 167 ಕೇಸ್ ದಾಖಲು
ರಾಜ್ಯದಲ್ಲಿ ಅತಿ ಹೆಚ್ಚು ಬಾಲ್ಯ ವಿವಾಹ ನಡೆಯುವ ಟಾಪ್ 10 ಜಿಲ್ಲೆಗಳ ಪೈಕಿ ಚಾಮರಾಜನಗರ ಜಿಲ್ಲೆ ಕೂಡ ಸ್ಥಾನ ಪಡೆದಿದ್ದು, ಕಳೆದು ಒಂದು ವರ್ಷಗಳಲ್ಲಿ 167 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿ ಸುದ್ದಿಯಾಗಿದೆ. ಅಸಲಿಗೆ ಇಷ್ಟು ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಲು ಕಾರಣವಾದರೂ ಏನು ಅಂತೀರಾ ಈ ಸ್ಟೋರಿ ಓದಿ.
ಚಾಮರಾಜನಗರ, ಮಾ.02: ಅತಿ ಹೆಚ್ಚು ಕಾಡು ಪ್ರಾಣಿ ಮಾನವ ಸಂಘರ್ಷದಿಂದ ಸುದ್ದಿಯಾಗುತ್ತಿದ್ದ ಗಡಿ ನಾಡು ಚಾಮರಾಜನಗರ, ಈಗ ಬಾಲ್ಯ ವಿವಾಹ(Child Marriage) ಪ್ರಕರಣಗಳಿಂದ ಸದ್ದು ಮಾಡುತ್ತಿದೆ. ಕಳೆದ ನಾಲ್ಕೈದು ವರ್ಷಗಳಿಂದ ಅತಿ ಹೆಚ್ಚು ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿ ಈಗ ರಾಜ್ಯದಲ್ಲಿ ಹೆಚ್ಚು ಬಾಲ್ಯ ವಿವಾಹ ಪ್ರಕರಣಗಳ ಟಾಪ್ 10 ಜಿಲ್ಲೆಗಳಲ್ಲಿ ಒಂದಾಗಿದೆ. ಕಳೆದ 2023 ಏಪ್ರಿಲ್ನಿಂದ 2024 ಜನವರಿವರೆಗೂ ಬರೋಬ್ಬರಿ 167 ಬಾಲ್ಯವಿವಾಹ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಶೇಕಡ 60 ರಷ್ಟು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಸಂತ್ರಸ್ಥ ಯುವತಿಯನ್ನ ನಿರ್ಮಿತಿ ಕೇಂದ್ರಕ್ಕೆ ಕಳುಹಿಸಿ ಕೊಡಲಾದ್ರೆ, ತಪ್ಪಿತಸ್ಥ ಯುವಕನಿಗೆ ಹಾಗೂ ಆತನ ಕುಟುಂಬಸ್ಥರಿಗೆ ಕಾನೂನು ರಿತ್ಯ ಕ್ರಮ ಕೈಗೊಳ್ಳಲಾಗಿದೆ.
ಬಾಲ್ಯ ವಿವಾಹಕ್ಕೆ ಕಾರಣವೇನು?
ಕಳೆದ ನಾಲ್ಕು ವರ್ಷಗಳಿಗೆ ಹೋಲಿಸಿಕೊಂಡರೆ 2023 ಏಪ್ರಿಲ್ನಿಂದ 2024 ಜನವರಿವರೆಗೂ ಅತಿ ಹೆಚ್ಚು ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಲು ಕಾರಣವೇ ಲಾಕ್ ಡೌನ್, ಹೌದು ಲಾಕ್ ಡೌನ್ ಸಂದರ್ಭದಲ್ಲಿ ಅತಿ ಹೆಚ್ಚು ಬಾಲ್ಯ ವಿವಾಹ ನಡೆದಿದ್ದು, ಈಗ ಪ್ರೆಗ್ನಿನ್ಸಿ ಸಂದರ್ಭದಲ್ಲಿ ಆಸ್ಪತ್ರೆಗೆ ಬಂದ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಕೆಲ ಅನಿಷ್ಠ ಆಚರಣೆ ಹಾಗೂ ಶಿಕ್ಷಣದ ಕೊರತೆಯಿಂದ ಬಾಲ್ಯ ವಿವಾಹ ಪ್ರಕರಣಗಳು ನಡೆಯುತ್ತಿವೆ. ಇನ್ನು ಚಾಮರಾಜನಗರದಲ್ಲಿ ಶೇಕಡ 52 ಪ್ರತಿಶತ ಕಾಡು, ಇನ್ನುಳಿದ 42 ಪರ್ಸೆಂಟ್ ಮಾತ್ರ ಭೂ ಪ್ರದೇಶವಿದೆ. ಅತಿ ಹೆಚ್ಚು ಸೋಲಿಗ ಹಾಗೂ ಬುಡಕಟ್ಟು ಜನರು ವಾಸ ಮಾಡುವ ಜಿಲ್ಲೆ ಚಾಮರಾಜನಗರವಾದ ಕಾರಣ, ಸೋಲಿಗ ಆಚರಣೆ ಪ್ರಕಾರ ಬಾಲ್ಯ ವಿವಾಹ ಮಾಡಲಾಗುತ್ತಿದೆ ಎಂಬುದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಅಧಿಕಾರಿಗಳ ವಾದವಾಗಿದೆ.
ಹಿಂದುಳಿದ ಜಿಲ್ಲೆ ಎಂಬ ಅಪಖ್ಯಾತಿ ಪಡೆದಿದ್ದ ಚಾಮರಾಜನಗರ ಜಿಲ್ಲೆ, ಈಗ ಅತಿ ಹೆಚ್ಚು ಬಾಲ್ಯ ವಿವಾಹ ಪ್ರಕರಣಗಳಿಂದ ಮತ್ತೆ ಸದ್ದು ಮಾಡುತ್ತಿರುವುದು ನಿಜಕ್ಕೂ ದುರಂತವೇ ಸರಿ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಂಡು, ಬಾಲ್ಯ ವಿವಾಹವೆಂಬ ಅನಿಷ್ಠ ಪದ್ದತಿಯನ್ನ ತೊಡೆದು ಹಾಕಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ