ಕಬ್ಬಿಗಾಗಿ ಹೆದ್ದಾರಿಯಲ್ಲಿ ನಿಲ್ಲುವ ಮದವೇರಿದ ಆನೆಗಳ ಮಧ್ಯೆ ಕಾಳಗ! ಮೈನವಿರೇಳಿಸುವ ದೃಶ್ಯ ಮೊಬೈಲ್ಗಳಲ್ಲಿ ಸೆರೆ
ರಾಷ್ಟ್ರೀಯ ಹೆದ್ದಾರಿ 209ರಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಕಬ್ಬು ತುಂಬಿದ ಲಾರಿಗಳು ಓಡಾಡುತ್ತಿದ್ದು, ಈ ವೇಳೆ ರಸ್ತೆ ಬದಿಯಲ್ಲಿ ಗ್ರಾಹಕರ ರೀತಿಯಲ್ಲಿ ನಿಂತು ಕೊಂಡಿರುವ ಆನೆಗಳು ಲಾರಿ ಅಡ್ಡಗಟ್ಟಿ ಕಬ್ಬನ್ನು ತಿನ್ನುತ್ತವೆ. ಕೆಲವೊಮ್ಮೆ ಲಾರಿ ಚಾಲಕರೇ ಆನೆಗಳಿಗೆ ಕಬ್ಬನ್ನ ಕೊಡುತ್ತಾರೆ.
ಚಾಮರಾಜನಗರ: ಮದವೇರಿದ ಎರಡು ಆನೆಗಳು ಕಾಳಗ ನಡೆಸಿ, ವಾಹನ ಸವಾರರನ್ನು ತಮ್ಮತ್ತ ಸೆಳೆದಿರುವ ಘಟನೆಯೊಂದು ಬೆಂಗಳೂರಿನಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ, ಚಾಮರಾಜನಗರ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ನಡೆದಿದೆ.
ಮನರಂಜನೆ ಪಡೆದ ಪ್ರಯಾಣಿಕರು: ರಾಷ್ಟ್ರೀಯ ಹೆದ್ದಾರಿ 209ರಿಂದ ಸುಮಾರು 50 ಮೀಟರ್ ದೂರದಲ್ಲಿ ಕಾಡಾನೆಗಳು ಕಾಳಗ ನಡೆಸಿದ್ದು, ಸುಮಾರು ಒಂದು ಗಂಟೆಗೂ ಅಧಿಕ ಸಮಯ ಮದಗಜಗಳೆರಡು ಫೈಟಿಂಗ್ ನಡೆಸಿವೆ. ಈ ಕಾಳಗದಿಂದ ಚಾಮರಾಜನಗರದಿಂದ ತಮಿಳುನಾಡಿಗೆ ಹೋಗುತ್ತಿದ್ದ ಪ್ರಯಾಣಿಕರು ಬಿಟ್ಟಿ ಮನರಂಜನೆ ಪಡೆದುಕೊಂಡಿದ್ದು ತಮ್ಮ ಮೊಬೈಲ್ಗಳಲ್ಲಿ ಈ ದೃಶ್ಯವನ್ನು ಸೆರೆ ಹಿಡಿದು ಆನಂದಿಸಿದ್ದಾರೆ.
ಕಬ್ಬಿಗಾಗಿ ರಾಷ್ಟ್ರೀಯ ಹೆದ್ದಾರಿಗೆ ಆಗಮಿಸುವ ಆನೆಗಳು.. ರಾಷ್ಟ್ರೀಯ ಹೆದ್ದಾರಿ 209ರಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಕಬ್ಬು ತುಂಬಿದ ಲಾರಿಗಳು ಓಡಾಡುತ್ತಿರುತ್ತವೆ. ಈ ವೇಳೆ ರಸ್ತೆ ಬದಿಯಲ್ಲಿ ಗ್ರಾಹಕರ ರೀತಿಯಲ್ಲಿ ನಿಲ್ಲುವ ಈ ಮದವೇರಿದ ಆನೆಗಳು ಲಾರಿಗಳನ್ನು ಅಡ್ಡಗಟ್ಟಿ ಕಬ್ಬನ್ನು ಕಿತ್ತು ತಿನ್ನುತ್ತವೆ. ಕೆಲವೊಮ್ಮೆ ಲಾರಿ ಚಾಲಕರೇ ಆನೆಗಳಿಗೆ ಕಬ್ಬನ್ನ ಕೊಡುತ್ತಾರೆ. ಹೀಗಾಗಿ ಆನೆಗಳು ಸಂಜೆ ಮತ್ತು ಮುಂಜಾನೆಯ ವೇಳೆ ರಸ್ತೆಯ ಬದಿ ಬಂದು ನಿಲ್ಲುವುದನ್ನು ಅಭ್ಯಾಸ ಮಾಡಿಕೊಂಡಿವೆ.
ಇಲ್ಲಿಯವರೆಗೆ ತೊಂದರೆ ಕೊಡದ ಆನೆಗಳು: ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸುಮಾರು 3,500 ಆನೆಗಳಿವೆ. ಸುವರ್ಣಾವತಿ ಜಲಾಶಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿಯೇ ಇರುವುದರಿಂದ ಆನೆಗಳು ಕಾಡಿನಿಂದ ನೀರು ಕುಡಿಯಲು ಅಲ್ಲಿಗೆ ಬರುತ್ತವೆ. ನೀರು ಕುಡಿದು ರಸ್ತೆ ಬದಿ ನಿಂತು ಕೊಳ್ಳುವ ಆನೆಗಳು ಕಬ್ಬಿನ ಸಿಹಿ ಸವಿಯುತ್ತವೆ. ಆದರೆ ಇವು ಇಲ್ಲಿ ಸಂಚಾರ ಮಾಡುವವರಿಗೆ ಈವರೆಗೆ ಯಾವುದೇ ತೊಂದರೆ ಮಾಡಿಲ್ಲ ಎನ್ನುವುದು ಖುಷಿಯ ವಿಚಾರ.
ಮೈನವಿರೇಳಿಸುವ ಆನೆಗಳ ಕಾಳಗ: ಸದ್ಯ ಪುಣಜನೂರು ಚೆಕ್ ಪೋಸ್ಟ್ ಬಳಿ 2 ಆನೆಗಳು ಪರಸ್ಪರ ಘೀಳಿಟ್ಟು, ಸೊಂಡಿಲುಗಳನ್ನು ಸುತ್ತಿಕೊಂಡು ಕಾದಾಡುತ್ತಿದ್ದನ್ನು ಕಂಡ ವಾಹನ ಸವಾರರು ರೋಮಾಂಚಕ ಅನುಭವ ಪಡೆದಿದ್ದಾರೆ. ಬಣ್ಣಾರಿ ದೇಗುಲಕ್ಕೆ ತೆರಳಿದ್ದ ಪ್ರವಾಸಿಗರು ಆನೆಗಳ ಕಾಳಗದ ವಿಡಿಯೋವನ್ನು ಸೆರೆಹಿಡಿದಿದ್ದಾರೆ.
ಸವಾರರು, ವಾಹನ ಚಾಲಕರು ಈ ಕಾಳಗ ನೋಡಲು ಜಮಾಯಿಸಿದ್ದರಿಂದ ಸ್ವಲ್ಪ ಹೊತ್ತಿನ ಮಟ್ಟಿಗೆ ಇಲ್ಲಿ ಜನಜಂಗುಳಿ ಉಂಟಾಗಿದ್ದು, ನಂತರ ಅರಣ್ಯ ಸಿಬ್ಬಂದಿಯೊಬ್ಬರು ಸ್ಥಳಕ್ಕಾಗಮಿಸಿ ಎಲ್ಲರನ್ನೂ ಚದುರಿಸುವ ಪರಿಸ್ಥಿತಿ ಎದುರಾಯಿತು. ಆನೆಗಳ ಘೀಳಿನ ಶಬ್ಧ, ಅವುಗಳ ಕಾದಾಟ ನೋಡಿದರೇ ಭಯವಾಗುವಂತಿತ್ತು ಎಂದು ಅಲ್ಲಿ ನೆರೆದಿದ್ದ ಪ್ರತ್ಯಕ್ಷದರ್ಶಿ ಜನರು ತಿಳಿಸಿದ್ದಾರೆ.
ಇದೇ ರೀತಿಯಾದರೆ ಮುಂದಿನ ದಿನಗಳಲ್ಲಿ ಆನೆಗಳಿಗೆ ದಂತಗಳೇ ಇರುವುದಿಲ್ಲ……!