AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ-ತಮಿಳುನಾಡು ಸರ್ಕಾರಗಳ ದಿವ್ಯನಿರ್ಲಕ್ಷ್ಯ, ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ತಾಳವಾಡಿ ಕನ್ನಡಿಗರು ಯಾರಿಗೂ ಬೇಡವಾಗಿದ್ದಾರೆ!

Thalavadi: ತಮಿಳುನಾಡಿನಲ್ಲಿ ಕೆಲಸ ಪಡೆಯಬೇಕಾದರೆ ತಮಿಳು ಪರೀಕ್ಷೆ ಪಾಸ್ ಕಡ್ಡಾಯ. ನಾವು ಓದಿರೋದು ಕನ್ನಡ ಮಾತ್ರ. ತಮಿಳು ಹೇಗೆ ಪಾಸ್ ಮಾಡೋದು? ಇನ್ನೊಂದೆಡೆ ನಾವು ಕನ್ನಡದಲ್ಲಿ ಓದ್ತಿರೋದ್ರಿಂದ ಕರ್ನಾಟಕದಲ್ಲಿ ಕೆಲಸ ಪಡೆಯಬೇಕೆಂದ್ರೆ ನೀವು ತಮಿಳುನಾಡು ರಾಜ್ಯದವರು ಅಂತಾರೆ. ಇನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಗಡಿನಾಡು ಅಭಿವೃದ್ಧಿ ಪ್ರಾಧಿಕಾರ ಇದ್ದರೂ ನಮಗೆ ಪ್ರಯೋಜನವಿಲ್ಲ- ತಾಳವಾಡಿ ಕನ್ನಡಿಗರು

ಕರ್ನಾಟಕ-ತಮಿಳುನಾಡು ಸರ್ಕಾರಗಳ ದಿವ್ಯನಿರ್ಲಕ್ಷ್ಯ, ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ತಾಳವಾಡಿ ಕನ್ನಡಿಗರು ಯಾರಿಗೂ ಬೇಡವಾಗಿದ್ದಾರೆ!
ಕರ್ನಾಟಕ- ತಮಿಳುನಾಡು ಸರ್ಕಾರಗಳ ದಿವ್ಯನಿರ್ಲಕ್ಷ್ಯ, ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಕನ್ನಡಿಗರು ಯಾರಿಗೂ ಬೇಡವಾಗಿದ್ದಾರೆ!
TV9 Web
| Edited By: |

Updated on: Nov 01, 2022 | 5:29 PM

Share

Chamarajanagara: ರಾಜ್ಯೋತ್ಸವ (Kannada Rajyotsava) ಬಂತಂದ್ರೆ ಸಾಕು ರಾಜ್ಯಾದ್ಯಂತ ಕನ್ನಡ ಡಿಂಡಿಮ ಸದ್ದು ಜೋರಾಗುತ್ತೆ. ಆದ್ರೆ ನೆರೆ ರಾಜ್ಯದ ಕನ್ನಡಿಗರ ಕಥೆ ಕೇಳಿದ್ರೆ ನಿಜವಾಗ್ಲೂ ಬೇಸರವಾಗುತ್ತೆ. ಆ ಪ್ರಾಂತ್ಯ ಒಂದು ಕಾಲದಲ್ಲಿ ಕರ್ನಾಟಕದಲ್ಲಿತ್ತು. ಅಲ್ಲಿರುವ 48 ಗ್ರಾಮದ ಜನಗಳ ನುಡಿಯೇ ಕನ್ನಡವಾಗಿತ್ತು. ನಂತರ ಭಾಷಾ, ರಾಜ್ಯ ವಿಂಗಡನೆ ನಂತರ ಆ ಪ್ರಾಂತ್ಯ ನೆರೆ ರಾಜ್ಯ ತಮಿಳುನಾಡಿಗೆ ಸೇರಿದೆ. ಆದ್ರೂ ಕೂಡ ಆ ಪ್ರಾಂತ್ಯದಲ್ಲಿ ಜನರ ಭಾಷೆ ಕನ್ನಡವೇ ಆಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವದಲ್ಲಿದ್ದರೂ ಕನ್ನಡಿಗರ ಕಷ್ಟ ಆಲಿಸುವ ಕೆಲಸ ನಡೆದೆ ಇಲ್ಲ ಅಂತಾರೆ. ನಾವು ತಮಿಳುನಾಡಿನಲ್ಲಿದ್ರೂ ಕೂಡ ಓದಿರೋದು ಮಾತ್ರ ಕನ್ನಡ. ಇತ್ತ ತಮಿಳುನಾಡಿನಲ್ಲೂ ಸರ್ಕಾರಿ ಕೆಲಸ ಸಿಗ್ತಿಲ್ಲ. ಇನ್ನು ಕರ್ನಾಟಕದಲ್ಲಿಯೂ ಕೆಲಸವಿಲ್ಲ ಅಂತಾ ಅಳಲು ತೋಡಿಕೊಳ್ತಿದ್ದಾರೆ. ಇದೆಲ್ಲಿ ಅಂತೀರಾ? ಹಾಗಾದ್ರೆ ಈ ಸ್ಟೋರಿ ನೋಡಿ..

ರಾಜ್ಯ ಪುನರ್ವಿಂಗಡಣೆ ವೇಳೆ ಗಡಿ ಜಿಲ್ಲೆ ಚಾಮರಾಜನಗರದ ನೆರೆಯಲ್ಲಿ ಬರುವ ತಾಳವಾಡಿ (Thalavadi) ತಮಿಳುನಾಡಿಗೆ ಸೇರಿದೆ. ಆದ್ರೆ ಅಂದಿನಿಂದಲೂ ಕೂಡ ತಾಳವಾಡಿ ಫೀರ್ಕದ 48 ಗ್ರಾಮದಲ್ಲಿ ವಾಸಿಸುವ ಜನರೆಲ್ಲ ಕನ್ನಡಿಗರು. ಕರ್ನಾಟಕಕ್ಕೆ ಸೇರಿಸಿ ಅಂತಾ ಹೋರಾಟ ನಡೆದಿದೆ. ತಮಿಳುನಾಡಿಗೆ ಸೇರಿದ್ರೂ ಕೂಡ ಇಲ್ಲಿನ ಜನರ ಭಾಷೆ ಕನ್ನಡವೇ ಆಗಿದೆ. ಈ ಭಾಗದಲ್ಲಿ ಕನ್ನಡದಲ್ಲಿ ವ್ಯಾಸಂಗ ಮಾಡಿದ ನಾಲ್ಕು ಸಾವಿರಕ್ಕೂ ಹೆಚ್ಚು ವಿದ್ಯಾವಂತರಿದ್ದಾರೆ. ಆದ್ರೆ ಈ ವಿದ್ಯಾವಂತರಿಗೆ ಸರ್ಕಾರಿ ಉದ್ಯೋಗ ಮಾತ್ರ ಗಗನ ಕುಸುಮವಾಗಿದೆ. (ವರದಿ: ದಿಲೀಪ್ ಚೌಡಹಳ್ಳಿ, ಟಿವಿ9, ಚಾಮರಾಜನಗರ)

ಈ ಭಾಗದ ಜನರು ಓದಿರೋದು ಕನ್ನಡದಲ್ಲಿ. ಆದರೆ ತಮಿಳುನಾಡಿನಲ್ಲಿ ಕೆಲಸ ಪಡೆಯಬೇಕಾದರೆ ಕಡ್ಡಾಯವಾಗಿ ತಮಿಳು ಪರೀಕ್ಷೆ ಪಾಸ್ ಮಾಡಬೇಕಿದೆ. ನಾವು ಓದಿರೋದು ಕನ್ನಡ ಮಾತ್ರ. ತಮಿಳು ಹೇಗೆ ಪಾಸ್ ಮಾಡೋದು? ಇದರಿಂದ ನಮಗೆ ಕೆಲಸ ಸಿಗ್ತಿಲ್ಲ. ಇನ್ನೊಂದೆಡೆ ನಾವು ಕನ್ನಡದಲ್ಲಿ ಓದ್ತಿರೋದ್ರಿಂದ ಕರ್ನಾಟಕದಲ್ಲಿ ಕೆಲಸ ಪಡೆಯಬೇಕೆಂದ್ರೆ ನೀವು ತಮಿಳುನಾಡು ರಾಜ್ಯದವರು ಅಂತಾರೆ. ಇದರಿಂದ ತಮಿಳುನಾಡು, ಕರ್ನಾಟಕ ಎರಡೂ ಭಾಗದಲ್ಲಿ ಕೆಲಸದಿಂದ ವಂಚಿತರಾಗಿದ್ದೇವೆ. ಇನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಗಡಿನಾಡ ಅಭಿವೃದ್ಧಿ ಪ್ರಾಧಿಕಾರ ಇದ್ದರೂ ಕೂಡ ನಮಗೆ ಪ್ರಯೋಜನವಿಲ್ಲ. ವಿಶ್ವದಲ್ಲಿ ಇರುವ ಕನ್ನಡಿಗರ ಹೊಣೆ ಸರ್ಕಾರದ್ದೆ ಅಲ್ಲವೇ? ಅಂತಾ ಪ್ರಶ್ನೆ ಮಾಡ್ತಾರೆ ತಾಳವಾಡಿ ಕನ್ನಡಿಗ ನಂದಕುಮಾರ್.

ತಾಳವಾಡಿ ಕನ್ನಡಿಗರು ಕನ್ನಡದಲ್ಲಿ ವ್ಯಾಸಂಗ ಮಾಡ್ತಿದ್ದು ಉದ್ಯೋಗದಿಂದ ವಂಚಿತರಾಗ್ತಿದ್ದಾರೆ. ನಾಳೆ ನಮ್ಮ ಮಕ್ಕಳನ್ನು ಕನ್ನಡದಲ್ಲಿ ಓದಿಸಬೇಕಾ? ಅಥವಾ ತಮಿಳಿನಲ್ಲಿ ಓದಿಸಬೇಕಾ ಅನ್ನೋ ಗೊಂದಲದಲ್ಲಿದ್ದಾರೆ. ತಮಿಳಿನಲ್ಲಿ ಓದಿಸಿದ್ರೆ ಕೆಲಸ ಸೇರಿದಂತೆ ಒಂದಷ್ಟು ಸೌಲಭ್ಯ ಪಡೆಯಬಹುದೆಂಬುದು ತಮಿಳುನಾಡು-ಕನ್ನಡಿಗರ ಆಸೆ. ಕರ್ನಾಟಕ ಸರ್ಕಾರ ನಮ್ಮನ್ನು ಸಂಪೂರ್ಣ ಕಡೆಗಣಿಸಿದೆ. ಇನ್ನಾದ್ರೂ ಸರ್ಕಾರ ಎಚ್ಚೆತ್ತುಕೊಳ್ಳುವ ಮೂಲಕ ಕನ್ನಡಿಗರಿಗೆ ನೆರವಾಗಬೇಕಿದೆ. ಕನ್ನಡ ಮಾತನಾಡುವವರ ಹಿತರಕ್ಷಣೆ ಮಾಡೋದು ಸರ್ಕಾರದ ಹೊಣೆಯಾಗಿದೆ ಎನ್ನುತ್ತಾರೆ ತಾಳವಾಡಿ ಕನ್ನಡಿಗ ಕುಮಾರಸ್ವಾಮಿ.

ಒಟ್ಟಾರೆ ಇಲ್ಲಿಯೂ ಸಲ್ಲದೇ, ಅಲ್ಲಿಯೂ ಸಲ್ಲದೆ ಅತಂತ್ರರಾಗಿರುವ ತಾಳವಾಡಿ ಕನ್ನಡಿಗರು ತಮಿಳುನಾಡು ಸರ್ಕಾರದ ಭಾಷಾ ಅಲ್ಪಸಂಖ್ಯಾತ ನೀತಿಯಿಂದಲೂ ವಂಚಿತರಾಗಿದ್ದಾರೆ. ಈ ಕನ್ನಡಿಗರಿಗೆ ಉನ್ನತ ಶಿಕ್ಷಣ, ಸರ್ಕಾರಿ ಉದ್ಯೋಗ ಮರೀಚಿಕೆಯಾಗಿದೆ. ನಮಗೂ ಮೀಸಲಾತಿ ಕೊಡಿ ಅಂತಾ ಸರ್ಕಾರದ ಬಳಿ ಅಂಗಲಾಚ್ತಿದ್ದು, ಸರ್ಕಾರ ಇವರ ಮನವಿಗೆ ಸ್ಪಂದಿಸುತ್ತಾ ಅನ್ನೋದನ್ನ ಕಾದುನೋಡಬೇಕಾಗಿದೆ.