ಮಾನವ ಮತ್ತು ವನ್ಯಜೀವಿ ಸಂಘರ್ಷ: ಸಚಿವ ಖಂಡ್ರೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಏನೇನಾಯ್ತು?

ಮೈಸೂರು, ಚಾಮರಾಜನಗರ ಎರಡೂ ಜಿಲ್ಲೆಗಳಲ್ಲಿ ಮಾನವ- ಪ್ರಾಣಿ ಸಂಘರ್ಷ ಹೆಚ್ಚುತ್ತಿರುವ ಹಿನ್ನೆಲೆ ಸಿಎಂ‌ ಸಿದ್ದರಾಮಯ್ಯ ನಿರ್ದೇಶನದ ಮೇರೆಗೆ ಚಾಮರಾಜನಗರದ ಕೆಡಿಪಿ ಸಭಾಂಗಣದಲ್ಲಿ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಯಾವ ಯಾವ ವಿಚಾರ ಚರ್ಚೆ ಆಯ್ತು? ರೈತರ ಆಗ್ರಹಗಳೇನು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಾನವ ಮತ್ತು ವನ್ಯಜೀವಿ ಸಂಘರ್ಷ: ಸಚಿವ ಖಂಡ್ರೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಏನೇನಾಯ್ತು?
ಸಚಿವ ಖಂಡ್ರೆ ಅಧ್ಯಕ್ಷತೆಯಲ್ಲಿ ನಡೆದ ಮಹತ್ವದ ಸಭೆ
Updated By: ಗಂಗಾಧರ​ ಬ. ಸಾಬೋಜಿ

Updated on: Nov 02, 2025 | 9:38 PM

ಚಾಮರಾಜನಗರ, ನವೆಂಬರ್​ 02: ಚಾಮರಾಜನಗರ (Chamarajanagar) ಹಾಗೂ ಮೈಸೂರು ಜಿಲ್ಲೆಯಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwara Khandre) ಅಧ್ಯಕ್ಷತೆಯಲ್ಲಿ ಚಾಮರಾಜನಗರದ ಕೆಡಿಪಿ ಸಭಾಂಗಣದಲ್ಲಿ ಭಾನುವಾರ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳು, ರೈತ ಮುಖಂಡರು ಭಾಗಿಯಾಗಿದ್ದರು. ಸಭೆಯಲ್ಲಿ ಯಾವ ಯಾವ ವಿಚಾರ ಚರ್ಚೆ ಆಯ್ತು? ರೈತರ ಆಗ್ರಹಗಳೇನು? ಅಧಿಕಾರಿಗಳ ಸಲಹೆಗಳೇನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ

ಸಭೆ ಆರಂಭಗೊಳ್ಳುತ್ತಿದ್ದಂತೆ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶದ ಸುರಿಮಳೆಗೈದರು. ಅರಣ್ಯ ಇಲಾಖೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ, ಬೇರೆ ಯಾವುದೇ ರಾಜ್ಯದಲ್ಲಿ ಇಷ್ಟು ‌ಪ್ರಾಣಿ‌ ಹಾಗೂ ಮಾನವ ಸಂಘರ್ಷವಾಗುತ್ತಿಲ್ಲ, ನಮ್ಮಲ್ಲಿ ಮಾತ್ರ ಹೆಚ್ಚಾಗಲು ಅರಣ್ಯಾಧಿಕಾರಿಗಳ ಸಂಪೂರ್ಣ ‌ನಿರ್ಲಕ್ಷ್ಯ ಕಾರಣ ಎಂದು ರೈತ ಮುಖಂಡ ಹೊನ್ನೂರು ಪ್ರಕಾಶ್​ ಕಿಡಿಕಾರಿದರು.

ವೀರಪ್ಪನ್ ಇದ್ದಾಗಲೇ ಕಾಡು ಚೆನ್ನಾಗಿತ್ತು

ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಾಕಷ್ಟು ಅಕ್ರಮ ರೆಸಾರ್ಟ್​ಗಳು‌ ನಡೆಯುತ್ತಿವೆ. ವೀರಪ್ಪನ್ ಇದ್ದಾಗಲೇ ಕಾಡು ಚೆನ್ನಾಗಿತ್ತು. ಅಕ್ರಮ ಗಣಿಗಾರಿಕೆ- ರೆಸಾರ್ಟ್​ಗಳು ನಡೆಯುತ್ತಿರಲಿಲ್ಲ. ಅಧಿಕಾರಿಗಳಿಗಿಂತ ವೀರಪ್ಪನ್ ಪರವಾಗಿರಲಿಲ್ಲ ಎಂದು ಸಿಡಿಮಿಡಿಗೊಂಡ ರೈತರು, ಪ್ರಾಣಿಯಿಂದ ಮನುಷ್ಯರು ಸತ್ತಾಗ ಸಚಿವರು, ಶಾಸಕರು, ಡಿಸಿಎಫ್​​ಗಳ ಮೇಲೆ ಕೇಸ್ ಹಾಕಬೇಕು. ಮೊದಲೇ ಸಭೆ ನಡೆಸಿ ಸೂಕ್ತ ಕ್ರಮಕೈಗೊಂಡಿದ್ದರೆ ಯಾವುದೆ ಸಾವು ಆಗುತ್ತಿರಲ್ಲಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿವ ಈಶ್ವರ್ ಖಂಡ್ರೆ ಹೇಳಿದ್ದಿಷ್ಟು 

ರೈತರ ಆರೋಪಗಳಿಗೆ ಉತ್ತರಿಸಿದ ಸಚಿವ ಈಶ್ವರ್ ಖಂಡ್ರೆ, ರಾಜ್ಯದ ಯಾವುದೇ ಅರಣ್ಯ ಪ್ರದೇಶದಲ್ಲಿ ಅಕ್ರಮ ಹೋಂ ಸ್ಟೇ , ರೆಸಾರ್ಟ್​​ಗಳಾಗಲಿ, ಅಕ್ರಮ ಕಲ್ಲು ಗಣಿಗಾರಿಕೆ ಆಗಲಿ ನಮ್ಮ ಸರ್ಕಾರ ಅವಕಾಶ ನೀಡಿಲ್ಲ. ಸ್ಪಷ್ಟ ದೂರು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.

ಇದನ್ನೂ ಓದಿ: ಚಾಮರಾಜನಗರ ತಮಿಳುನಾಡು ಗಡಿ ದಿಂಬಂ ಘಾಟ್​ನಲ್ಲಿ ಕಾಡಾನೆ ಉಪಟಳ: ವಿಡಿಯೋ ವೈರಲ್

ಇನ್ನು ಇಲಾಖೆ ವತಿಯಿಂದ ಇಬ್ಬರು ತಜ್ಞರ ಸಮಿತಿ ರಚಿಸಲಾಗಿದ್ದು, ವನ್ಯಜೀವಿಗಳು ನಾಡಿಗೆ ಬರುತ್ತಿರುವ ಬಗ್ಗೆ ಅಧ್ಯಯನ ಮಾಡಿಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನೂ ಮಾಡಲಾಗುತ್ತಿದೆ. ಇದರ ಜೊತೆಗೆ ಇಂದಿನ ಸಭೆಯಲ್ಲಿ ರೈತರು, ಸಾರ್ವಜನಿಕರು ನೀಡಿರುವ ಎಲ್ಲ ಸಲಹೆ ಕ್ರೋಢೀಕರಿಸಿ, ಚರ್ಚಿಸಿ ಅನುಷ್ಠಾನಕ್ಕೆ ತರಲಾಗುವುದು ಎಂದರು.

ವನ್ಯಜೀವಿಯಿಂದ ಬೆಳೆ ಹಾನಿ, ಜಾನುವಾರಗಳ ಹಾನಿ ಆದಾಗ ಪರಿಹಾರ ಹೆಚ್ಚಿಸಬೇಕು ಎಂಬ ಬೇಡಿಕೆ ಇದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು ಎಂದು ಸಚಿವ ಈಶ್ವರ್ ಖಂಡ್ರೆ ಭರವಸೆ ನೀಡಿದ್ದಾರೆ. ಒಟ್ಟಿನಲ್ಲಿ ಅರಣ್ಯ ಇಲಾಖೆ ಇನ್ನಾದರೂ ಮಾನವ ಮತ್ತು ವನ್ಯಜೀವಿ ಸಂಘರ್ಷಕ್ಕೆ ಬ್ರೇಕ್ ಹಾಕಿ ಹುಲಿ, ಕಾಡಾನೆ ಹಾವಳಿಯಿಂದ ಜನರಿಗೆ ಅಭಯ ನೀಡಬೇಕಿದೆ.

ಇದನ್ನೂ ಓದಿ: ಮೈಸೂರಿನಲ್ಲಿ ಸೆರೆ ಸಿಕ್ಕ ಹುಲಿ; ರೈತನ ಹತ್ಯೆಗೈದ ಹುಲಿ ಇದೇನಾ?

ಇನ್ನು ಸಭೆಯಲ್ಲಿ ಸಚಿವರಾದ ಎಚ್.ಸಿ.ಮಹಾದೇವಪ್ಪ, ಕೆ.ವೆಂಕಟೇಶ್, ಶಾಸಕರುಗಳು ರೈತ ಮುಖಂಡರು ಭಾಗಿಯಾಗಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.