ಬೆಂಗಳೂರು, ಏಪ್ರಿಲ್ 8: ರಾಜ್ಯದಲ್ಲಿ ಲೋಕಸಭೆ ಚುನಾವಣೆಯ (Lok Sabha Elections) ಕಾವು ಏರತೊಡಗಿದ್ದು, ಮೈಸೂರು ಮತ್ತು ಚಾಮರಾಜನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಹೊಣೆಯನ್ನು ಖುದ್ದು ಸಿಎಂ ಸಿದ್ದರಾಮಯ್ಯ ವಹಿಸಿಕೊಂಡಿದ್ದಾರೆ. ಆದರೆ, ಇದಕ್ಕೆ ಟಕ್ಕರ್ ಕೊಟ್ಟು ಸಿದ್ದರಾಮಯ್ಯರನ್ನು ಹಳಿಯಲು ಬಿಜೆಪಿ (BJP) ಹೈಕಮಾಂಡ್ ಬೇರೆಯೇ ತಂತ್ರಗಾರಿಕೆ ಹೆಣೆದಿದೆ. ಇದೇ ಗುರುವಾರ ಚಾಮರಾಜನಗರ (Chamarajanagar) ಅಖಾಡಕ್ಕೆ ಸಿಎಂ ಸಿದ್ದರಾಮಯ್ಯ ಎಂಟ್ರಿ ಕೊಡುತ್ತಿದ್ದಾರೆ. ತವರು ಕ್ಷೇತ್ರ ಗೆಲ್ಲಲು ತಂತ್ರಗಾರಿಕೆಗೆ ಸಿಎಂ ಮುಂದಾಗುತ್ತಿದ್ದಂತೆಯೇ ಬಿಜೆಪಿ ನಾಯಕರು ಸಕ್ರಿಯರಾಗಿದ್ದಾರೆ. ಬಿಜೆಪಿ ಹೈಕಮಾಂಡ್ ಕೂಡಾ ಚಾಮರಾಜನಗರದ ಮೇಲೆ ಕಣ್ಣಿಟ್ಟಿದ್ದು, ಬಿಜೆಪಿ ಅಭ್ಯರ್ಥಿ ಗೆಲ್ಲಿಸುವ ಜವಾಬ್ದಾರಿ ನೀಡಿದೆ.
ಚಾಮರಾಜನಗರ ಲೋಕಸಭಾ ಕ್ಷೇತ್ರವೀಗ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಪ್ರತಿಷ್ಠೆಯ ಕಣವಾಗಿದೆ. ಸಿಎಂ ತವರು ಕ್ಷೇತ್ರ ವರುಣಾ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಗೆಲುವಿಗೆ ಸಿಎಂ ತಂತ್ರ ರೂಪಿಸ್ತಿದ್ದಾರೆ. ಇದೇ 11ರಂದು ಚಾಮರಾಜನಗರಕ್ಕೆ ಸಿಎಂ ಭೇಟಿ ನೀಡಲಿದ್ದು, ಕೈ ಅಭ್ಯರ್ಥಿ ಗೆಲುವಿಗೆ ರಣತಂತ್ರ ಹೆಣೆಯಲಿದ್ದಾರೆ. ಹೀಗಾಗಿ ಚಾಮರಾಜನಗರವನ್ನ ಗಂಭೀರವಾಗಿ ಪರಿಗಣಿಸಿರೋ ಬಿಜೆಪಿ ಹೈಕಮಾಂಡ್, ತವರಿನಲ್ಲಿ ಸಿಎಂಗೆ ಸೋಲಿನ ರುಚಿ ತೋರಿಸಲು ತಂತ್ರ ಹೆಣೆಯುತ್ತಿದೆ. ಚಾಮರಾಜನಗರಕ್ಕೆ ಭಾನುವಾರ ಭೇಟಿ ನೀಡಿದ್ದ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್, ಸ್ಥಳೀಯ ನಾಯಕರಿಗೆ ಜವಾಬ್ದಾರಿ ನೀಡಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಾದ ತಪ್ಪು ಮರುಕಳಿಸದಂತೆ ಎಚ್ಚರಿಕೋ ನೀಡಿರುವ ರಾಧಾ ಮೋಹನ್ ದಾಸ್, ಬಿಜೆಪಿ ಮಂಡಲ ಅಧ್ಯಕ್ಷರ ಸಭೆಯಲ್ಲಿ ಟಾಸ್ಕ್ ನೀಡಿದ್ದಾರೆ. ನಿಮ್ಮ ಮಂಡಲದಲ್ಲಿ ಎಷ್ಟು ಲೀಡ್ ಕೊಡಬಹುದು? ಎಲ್ಲಿ ಸಮಸ್ಯೆ ಇದೆ? ಆ ಸಮಸ್ಯೆಯನ್ನು ಜಿಲ್ಲಾ ಮುಖಂಡರೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಿ. ಜೆಡಿಎಸ್ ನಾಯಕರು, ಕಾರ್ಯಕರ್ತರನ್ನೂ ಜೊತೆಗೆ ಕರೆದುಕೊಂಡು ಹೋಗಿ ಎಂದು ಸೂಚನೆ ಕೊಟ್ಟಿದ್ದಾರೆ. ಅಲ್ಲದೇ ಯಾವುದೇ ಅಸಮಾಧಾನವೂ ಚುನಾವಣೆ ಮೇಲೆ ಪ್ರಭಾವ ಬೀರಬಾರದು ಎಂದು ಖಡಕ್ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ತವರಿನಲ್ಲೇ ಚುನಾವಣಾ ಬಹಿಷ್ಕಾರದ ಎಚ್ಚರಿಕೆ: ಯತೀಂದ್ರರನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು
ಈ ಮಧ್ಯೆ ಹಾಸನದಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ಗೆ ಪ್ರೀತಂಗೌಡ ಆಪ್ತರು ಶಾಕ್ ಕೊಟ್ಟಿದ್ದಾರೆ. ಹಾಸನದಲ್ಲಿ ಏನೂ ಗೊಂದಲ ಇಲ್ಲ ಅಂತ ಬಿಜೆಪಿ ನಾಯಕರು ಹೇಳ್ತಿದ್ದರೆ, ಹಾಸನದಿಂದ ಅಂತರಕಾಯ್ದುಕೊಂಡಿರುವ ಪ್ರೀತಂಗೌಡ, ಮೈಸೂರು ಚಾಮರಾಜನಗರ ಉಸ್ತುವಾರಿಯಲ್ಲಿ ವ್ಯಸ್ತರಾಗಿದ್ದಾರೆ. ಇತ್ತ ಪ್ರೀತಂಗೌಡ ಆಪ್ತ ಉದ್ದೂರು ಪುರುಷೋತ್ತಮ್, ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರ ಪ್ರಚಾರಕ್ಕಿಳಿದಿದ್ದಾರೆ.
ಮಂಡ್ಯ ಅಖಾಡ ಗೆಲ್ಲು ದಳಪತಿಗಳು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಆದರೆ, ಹೆಚ್‌ಡಿ ಕುಮಾರಸ್ವಾಮಿ ರಾಜ್ಯಾದ್ಯಂತ ಪ್ರವಾಸ ಮಾಡಬೇಕಾಗಿರುವುದರಿಂದ, ಮಂಡ್ಯದಲ್ಲಿ ಮೂರು ದಿನ ರೋಡ್ ಶೋ, ಱಲಿಗೆ ಪ್ಲ್ಯಾನ್ ಮಾಡಿದ್ದಾರೆ. ಮಂಡ್ಯದಲ್ಲಿ 10 ಲಕ್ಷಕ್ಕೂ ಅಧಿಕ ಜನರ ಸೇರಿಸಿ ಸಮಾವೇಶಕ್ಕೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
ಮಂಡ್ಯದಲ್ಲಿ ಕುಮಾರಸ್ವಾಮಿ ಪರ ಸುಮಲತಾ ಪ್ರಚಾರ ಮಾಡುತ್ತಾರೆಯೇ ಎಂಬ ಕುತೂಹಲ ಹೆಚ್ಚಾಗಿದೆ. ಬಿಜೆಪಿ ಸೂಚನೆಗಾಗಿ ಸುಮಲತಾ ಕಾಯುತ್ತಿದ್ದು, ಸೂಚನೆ ಬಂದ ಕೂಡಲೇ ಪ್ರಚಾರ ಶುರು ಮಾಡಲಿದ್ದಾರೆ. ಆದ್ರೆ, ಹೆಚ್‌ಡಿ ಕುಮಾರಸ್ವಾಮಿ ಪ್ರಚಾರ ಮಾಡುವಂತೆ ಆಹ್ವಾನ ನೀಡಿಲ್ಲ. ಹೀಗಾಗಿ ಮಂಡ್ಯದಲ್ಲಿ ಸುಮಲತಾ ಮತಬೇಟೆಯಾಡುತ್ತಾರಾ? ಮಂಡ್ಯದಲ್ಲಿ ಪ್ರಚಾರ ಮಾಡುವಂತೆ ಬಿಜೆಪಿ ಸೂಚನೆ ನೀಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ