ರಸ್ತೆ ಇಲ್ಲದ ಈ ಕುಗ್ರಾಮದ ಯುವಕರಿಗೆ ಯಾರೂ ಹುಡುಗಿ ಕೊಡುತ್ತಿಲ್ಲ! ಪಕ್ಕದೂರಲ್ಲೇ ಸಂಪುಟ ಸಭೆ ನಡೆದರೂ ಇವರ ಸಮಸ್ಯೆಗಿಲ್ಲ ಮುಕ್ತಿ

ಮಲೆ ಮಹದೇಶ್ವರ ಬೆಟ್ಟದಲ್ಲಿ ಕೆಲವೇ ದಿನಗಳ ಹಿಂದೆ ನಡೆದಿದ್ದ ಸಚಿವ ಸಂಪುಟ ಸಭೆ ಆ ಕಾಡಿನ ಗ್ರಾಮಸ್ಥರಲ್ಲಿ ಹಲವು ಭರವಸೆಗಳನ್ನು ಹುಟ್ಟು ಹಾಕಿತ್ತು. ಸಮಾಜದ ಮುಖ್ಯವಾಹಿನಿಗೆ ಸೇರಬೇಕೆಂಬ ಕನಸು ಇನ್ನೇನು ನನಸಾಗಿಯೇ ಬಿಡುತ್ತದೆ ಎಂಬ ನಿರೀಕ್ಷೆ ಹೊತ್ತಿದ್ದರು ಅವರೆಲ್ಲ. ಆದರೆ ಸಚಿವ ಸಂಪುಟ ಸಭೆ ಆ ಕಾಡಿನ ಗ್ರಾಮಸ್ಥರ ನಿರೀಕ್ಷೆಗಳನ್ನು ಹುಸಿಯಾಗಿಸಿದೆ.

ರಸ್ತೆ ಇಲ್ಲದ ಈ ಕುಗ್ರಾಮದ ಯುವಕರಿಗೆ ಯಾರೂ ಹುಡುಗಿ ಕೊಡುತ್ತಿಲ್ಲ! ಪಕ್ಕದೂರಲ್ಲೇ ಸಂಪುಟ ಸಭೆ ನಡೆದರೂ ಇವರ ಸಮಸ್ಯೆಗಿಲ್ಲ ಮುಕ್ತಿ
ಹೊನ್ನೂರು ಪ್ರಕಾಶ್, ರೈತ ಮುಖಂಡ
Edited By:

Updated on: May 06, 2025 | 11:28 AM

ಚಾಮರಾಜನಗರ, ಮೇ 6: ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿ ಧಾಮದ ವ್ಯಾಪ್ತಿಯಲ್ಲಿರುವ ಚಂಗಡಿ ಗ್ರಾಮ (Changadi Village) ಮೂಲ ಸೌಕರ್ಯಗಳ ಕೊರತೆ, ವನ್ಯಜೀವಿಗಳ ಹಾವಳಿಯಿಂದ ತತ್ತರಿಸಿ ಹೋಗಿದೆ. ಮುಖ್ಯರಸ್ತೆಯಿಂದ 23 ಕಿಲೋ ಮೀಟರ್ ದೂರ ದಟ್ಟ ಕಾಡಿನೊಳಗೆ ಇರುವ ಈ ಕುಗ್ರಾಮ ಶಿಕ್ಷಣ, ಆರೋಗ್ಯ ಸೇರಿದಂತೆ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಈ ಗ್ರಾಮದಲ್ಲಿ ಯಾವುದೇ ನೆಟ​ವರ್ಕ್ ಸಿಗುವುದಿಲ್ಲ. ರಸ್ತೆ ಇಲ್ಲದ ಕಾರಣ ಆ್ಯಂಬುಲೆನ್ಸ್ ಕೂಡ ಬರಲ್ಲ. ಆರೋಗ್ಯ ಹದಗೆಟ್ಟರೆ ಮತ್ತು ಗರ್ಭಿಣಿಯರಿಗೆ ಹೆರಿಗೆ ನೋವು ಕಾಣಿಸಿಕೊಂಡರಂತೂ ದೇವರೇ ಗತಿ. ಡೋಲಿ ಕಟ್ಟಿ 23 ಕಿಲೋಮೀಟರ್ ದೂರ ಕಲ್ಲು ಮುಳ್ಳುಗಳ ಹಾದಿಯಲ್ಲಿ ಮುಖ್ಯರಸ್ತೆಗೆ ಹೊತ್ತು ತರಬೇಕು. ಕಾಡು ಪ್ರಾಣಿಗಳ ಹಾವಳಿಯಿಂದ ಹಾಕಿದ ಬೆಳೆ ಕೂಡ ಕೈಸೇರಲ್ಲ. ಇದಕ್ಕಿಂತ ಹೆಚ್ಚಾಗಿ, ಈ ಕುಗ್ರಾಮದ ಯುವಕರಿಗೆ ಮದುವೆಯಾಗಲು ಯಾರೂ ಹೆಣ್ಣು ಕೊಡುತ್ತಿಲ್ಲ. ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೆ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ.

ಸ್ವಯಂ ಪ್ರೇರಿತರಾಗಿ ನಾಡಿಗೆ ಸ್ಥಳಾಂತರಗೊಳ್ಳಲು 2016 ರಲ್ಲಿಯೇ ಚಂಗಡಿ ಗ್ರಾಮಸ್ಥರು ಒಪ್ಪಿಗೆ ಸೂಚಿಸಿದ್ದರು. ಇವರ ಪುನರ್ವಸತಿಗಾಗಿ 2021 ರಲ್ಲಿ ಅರಣ್ಯ ಇಲಾಖೆ ಹನೂರು ತಾಲೋಕಿನ ವೈಶಂಪಾಳ್ಯ ಡಿಎಂ ಸಮುದ್ರದ ಬಳಿ 435 ಎಕರೆ ಭೂಮಿ ಗುರುತಿಸಿ ಕ್ರಿಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಗ್ರಾಮದ 256 ಕುಟುಂಬಗಳ ಪುನರ್ವಸತಿ ಯೋಜನೆಗಾಗಿ ಸುಮಾರು 40 ಕೋಟಿ ರೂಪಾಯಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಸಂಪುಟ ಸಭೆಯಲ್ಲಿ ಪರಿಹಾರ ದೊರೆಯುವ ಆಸೆಯಲ್ಲಿದ್ದವರಿಗೆ ನಿರಾಶೆ

ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಚಂಗಡಿ ಗ್ರಾಮಸ್ಥರ ಪುನರ್ವಸತಿಗೆ ಅನುಮೋದನೆ ದೊರೆಯುತ್ತದೆ ಎಂಬುದು ಗ್ರಾಮಸ್ಥರ ನಿರೀಕ್ಷೆಯಾಗಿತ್ತು. ಆದರೆ ಈ ಬಗ್ಗೆ ಸಭೆಯಲ್ಲಿ ಈ ವಿಷಯವೇ ‌ಪ್ರಸ್ತಾಪವಾಗದೆ ಗ್ರಾಮಸ್ಥರ ನಿರೀಕ್ಷೆ ಹುಸಿಯಾಗಿದೆ.

ಇದನ್ನೂ ಓದಿ
ಆನೇಕಲ್: ನಿಗೂಢ ಸ್ಫೋಟಕ್ಕೆ ಛಿದ್ರಗೊಂಡ ಕಾಂಕ್ರೀಟ್ ರಸ್ತೆ!
ಹುಬ್ಬಳ್ಳಿಯಲ್ಲಿ 19 ಮೈದಾನದ ಅಂತಾರಾಷ್ಟ್ರೀಯ ಮಟ್ಟದ ಬೃಹತ್ ಕ್ರೀಡಾ ಸಂಕೀರ್ಣ
ದಿಂಬಂ ಘಾಟ್​ನಲ್ಲಿ ರಾಶಿ ರಾಶಿ ಟೊಮೆಟೋ ತಿಂದು ತೇಗಿದ ಕಾಡಾನೆ: ವಿಡಿಯೋ ನೋಡಿ
ಜಿಲೇಬಿಯಲ್ಲಿ ಕೃತಕ ಬಣ್ಣ ಶಂಕೆ: ಮಾದರಿ ಸಂಗ್ರಹಕ್ಕೆ ಮುಂದಾದ ಆಹಾರ ಇಲಾಖೆ

ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆ ಈ ಭಾಗದ ಸಮಸ್ಯೆಗಳಿಗೆ ಇತಿಶ್ರೀ ಹಾಡುತ್ತದೆ. ಒಂದಷ್ಟು ಪರಿಹಾರೋಪಾಯಗಳು ಸಿಗುತ್ತವೆ ಎಂಬ ನಿರೀಕ್ಷೆ ನಮ್ಮಲ್ಲಿ ಹುಟ್ಟು ಹಾಕಿತ್ತು. ಆದರೆ ನಿರೀಕ್ಷೆಗಳೆಲ್ಲಾ ಹುಸಿಯಾಗಿವೆ. ಚಂಗಡಿ ಗ್ರಾಮಸ್ಥರಲ್ಲಿ ಭ್ರಮನಿರಸನ ಮೂಡಿಸಿದೆ ಎಂದು ರೈತ ಮುಖಂಡ ಹೊನ್ನೂರು ಪ್ರಕಾಶ್ ಹೇಳಿದ್ದಾರೆ.

ಇದನ್ನೂ ಓದಿ: ದಿಂಬಂ ಘಾಟ್​ನಲ್ಲಿ ರಾಶಿ ರಾಶಿ ಟೊಮೆಟೋ ತಿಂದು ತೇಗಿದ ಕಾಡಾನೆ: ವಿಡಿಯೋ ನೋಡಿ

ಪುನರ್ವಸತಿ ಪ್ರಸ್ತಾವನೆಯನ್ನು ಸಂಪುಟ ಸಭೆಯ ಮುಂದಿಡುವಲ್ಲಿ ಸ್ಥಳೀಯ ಶಾಸಕರ ವೈಫಲ್ಯ ಹಾಗೂ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಎಲ್ಲಾ ಕಡೆ ಕಾಡಿನಲ್ಲಿರುವ ಜನರನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಪ್ರಯತ್ನಿಸುತ್ತಲೇ ಇದೆ. ಅದರೆ ಇಲ್ಲಿ ಗ್ರಾಮಸ್ಥರೇ ಸ್ಥಳಾಂತರಗೊಳ್ಳಲು ಸ್ವಯ ಪ್ರೇರಿತರಾಗಿ ಮುಂದೆ ಬಂದಿದ್ದರೂ ಸರ್ಕಾರ ಸ್ಪಂದಿಸದೇ ಇರುವುದು ವಿಪರ್ಯಾಸ.

ಕರ್ನಾಟಕದ ಇನ್ನಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ