ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಬಳಿಯ ಗುಮ್ಮಕಲ್ಲು ಗುಡ್ಡದಲ್ಲಿ ಬಂಡೆ ಕುಸಿದಿದ್ದು ಟಿಪ್ಪರ್ ಮೇಲೆ ಬಂಡೆಗಳು ಬಿದ್ದಿವೆ. ಬಂಡೆಯಡಿ ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಗುಮ್ಮಕಲ್ಲು ಗುಡ್ಡದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿತ್ತು. ಇಂದು ಏಕಾಏಕಿ ಬಂಡೆಗಳು ಕುಸಿದು ಟಿಪ್ಪರ್ ಮೇಲೆ ಬಿದ್ದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಚರಣೆ ಶುರು ಮಾಡಿದ್ದು ಅದೃಷ್ಟವಶಾತ್ ಯಾವುದೇ ಸಾವಿನ ಬಗ್ಗೆ ಈ ವರೆಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.
ಗುಂಡ್ಲುಪೇಟೆ ತಾಲೂಕು ಬೊಮ್ಮಲಾಪುರ ಗ್ರಾಮದ ಮಹೇಂದ್ರಪ್ಪ ಎಂಬುವವರ ಜಾಗದಲ್ಲಿ ಹಕೀಂ ಎಂಬುವವರಿಂದ ಗಣಿಗಾರಿಕೆ ನಡೆಯುತ್ತಿದ್ದು ಆ ಜಾಗವನ್ನು ಗುತ್ತಿಗೆಗೆ ಪಡೆದು ಹಕೀಮ್ ಗಣಿಗಾರಿಕೆ ನಡೆಸುತ್ತಿದ್ದರು ಎಂದು ಮಾಹಿತಿ ತಿಳಿದು ಬಂದಿದೆ. ಮಹೇಂದ್ರಪ್ಪರ ಒಂದು ಎಕರೆ ಜಾಗದಲ್ಲಿ ಹಕೀಂ ಗಣಿಗಾರಿಕೆ ನಡೆಸುತ್ತಿದ್ದಾರೆ. ಸದ್ಯ ಇಲ್ಲಿ ಈಗ ಬಂಡೆ ಕುಸಿದಿದ್ದು ಟಿಪ್ಪರ್ ಮೇಲೆ ಬಂಡೆಗಳು ಬಿದ್ದಿವೆ. ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಐವರು ಕಾರ್ಮಿಕರ ಪೈಕಿ ಮೂವರ ರಕ್ಷಣೆ, ಮತ್ತಿಬ್ಬರು ಕಣ್ಮರೆ
ಇನ್ನು ಗುಮ್ಮಕಲ್ಲು ಗುಡ್ಡದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿತ್ತು ಎಂದು ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಗಣಿಯಲ್ಲಿ ಐವರು ಕಾರ್ಮಿಕರು ಕೆಲಸ ಮಾಡುತ್ತಿದ್ದ ಬಗ್ಗೆ ಮಾಹಿತಿ ಇದೆ. ಐವರು ಕಾರ್ಮಿಕರ ಪೈಕಿ ಮೂವರು ಕಾರ್ಮಿಕರನ್ನು ರಕ್ಷಿಸಲಾಗಿದೆ. ಮತ್ತಿಬ್ಬರು ಕಾರ್ಮಿಕರು ಕಣ್ಮರೆಯಾಗಿದ್ದು ಶೋಧ ನಡೆಯುತ್ತಿದೆ. ಸ್ಥಳೀಯರ ಮಾಹಿತಿ ಪ್ರಕಾರ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಇದ್ದರಂತೆ ಎಂದು ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.
ಟಿಪ್ಪರ್ ಒಳಗೆ ಸಿಲುಕಿದ್ದ ಚಾಲಕನನ್ನು ರಕ್ಷಿಸಿರುವ ಸಿಬ್ಬಂದಿ
ಟಿಪ್ಪರ್ ಒಳಗೆ ಸಿಲುಕಿದ್ದ ಚಾಲಕನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಟಿಪ್ಪರ್ ಚಾಲಕನನ್ನು ಸಿಬ್ಬಂದಿ ರಕ್ಷಣೆ ಮಾಡಿದ್ದು ಗಾಯಾಳು ಚಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ದುರಂತದ ಬಳಿಕ ತಾತ್ಕಾಲಿಕವಾಗಿ ಕೆಲಸ ಸ್ಥಗಿತಗೊಳಿಸಲಾಗಿದೆ. ಇದುವರೆಗೂ ಮೂವರ ರಕ್ಷಣೆ ಮಾಡಲಾಗಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ. ಫ್ರಾನ್ಸಿಸ್ ಹಾಗೂ ಅಸ್ರಫ್ ಹಾಗೂ ನೂರುದ್ದೀನ್ ರಕ್ಷಣೆ ಮಾಡಲಾಗಿದ್ದು ಎಲ್ಲರೂ ಮಹಾರಾಷ್ಟ್ರ ಮೂಲದವರು ಅನ್ನೋ ಬಗ್ಗೆ ಮಾಹಿತಿ ಸಿಕ್ಕಿದೆ. ಡಿಸಿ ಚಾರುಲತಾ ಸೋಮಲ್, ಎಸ್ಪಿ ಶಿವಕುಮಾರ್, ಡಿವೈಎಸ್ಪಿ ಸುಂದರರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
Published On - 2:40 pm, Fri, 4 March 22