AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನೆಗೆ ತಿನ್ನಲು ಕಬ್ಬು ಕೊಟ್ಟು 75,000 ರೂ. ದಂಡ ತೆತ್ತ ಮೈಸೂರಿನ ಲಾರಿ ಚಾಲಕ!

ಕಾಡಾನೆಗೆ ಕಬ್ಬು ನೀಡಿ ತಮಿಳುನಾಡು ಅರಣ್ಯಾಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಮೈಸೂರು ಜಿಲ್ಲೆಯ ಲಾರಿ ಚಾಲಕ 75,000 ರೂ. ದಂತೆ ತೆತ್ತಿದ್ದಾನೆ

ಆನೆಗೆ ತಿನ್ನಲು ಕಬ್ಬು ಕೊಟ್ಟು 75,000 ರೂ. ದಂಡ ತೆತ್ತ ಮೈಸೂರಿನ ಲಾರಿ ಚಾಲಕ!
ಕಾಡಾನೆಗೆ ಕಬ್ಬು ಕೊಟ್ಟು ದಂಡ ತೆತ್ತ ಲಾರಿ ಚಾಲಕ
TV9 Web
| Edited By: |

Updated on:Dec 06, 2022 | 10:58 PM

Share

ಚಾಮರಾಜನಗರ:  ಪ್ರಾಣಿ ಮೇಲಿನ ಕಾಳಜಿಗೋ ಅಥವಾ ಮಾನವೀಯತೆಯಿಂದಲೋ ಲಾರಿ ಚಾಲಕನೊಬ್ಬ ಕಾಡಾನೆಗೆ(wild elephant) ತಿನ್ನಲು ಕಬ್ಬು(sugarcane) ಕೊಟ್ಟಿದ್ದಾನೆ. ಆದ್ರೆ,  ಆನೆಗೆ ಕಬ್ಬು ನೀಡಿದ್ದೇ ತಪ್ಪಾಯ್ತು ಅನ್ಸುತ್ತೆ.  ನೆರೆಯ ತಮಿಳುನಾಡಿನ ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದ ಹಾಸನೂರು ಬಳಿ ಕಾಡಾನೆಗೆ ತಿನ್ನಲು ಕಬ್ಬು ನೀಡಿದ ಮೈಸೂರು ಮೂಲದ ಲಾರಿ ಚಾಲಕನಿಗೆ ಅರಣ್ಯ ಇಲಾಖೆ 75 ಸಾವಿರ ರೂಪಾಯಿ ದಂಡ ವಿಧಿಸಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿ ಸಿದ್ದರಾಜು ಎನ್ನುವ ಲಾರಿ ಚಾಲಕ, ಡಿಸೆಂಬರ್ 3 ರಂದು ಕಬ್ಬು ತುಂಬಿಕೊಂಡು ತಮಿಳುನಾಡಿಗೆ ಹೋಗುತ್ತಿದ್ದ. ಆ ವೇಳೆ ಗಡಿ ಭಾಗದ ತಮಿಳುನಾಡಿನ ಹಾಸನೂರು ಬಳಿ ಕಾಡಾನೆಗೆ ಕಬ್ಬು ನೀಡಿದ್ದಾನೆ. ಇದನ್ನು ನೋಡಿ ಅರಣ್ಯಧಿಕಾರಿಗಳು ಚಾಲಕನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ 75,000 ರೂ. ದಂಡ ಕಟ್ಟಿಸಿಕೊಂಡಿದ್ದಾರೆ.

ಇದನ್ನೂ ಒದಿ: ಗ್ರಾಮ ಪಂಚಾಯಿತಿಗೂ ಕಾಲಿಟ್ಟ ರೆಸಾರ್ಟ್​ ರಾಜಕೀಯ: ವಿಮಾನದಲ್ಲಿ ಬಂದು ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸಿದ್ರು

ಕರೆಪಳ್ಳಂ ಚೆಕ್​ಪೋಸ್ಟ್​ನಿಂದ ಮೂರು ಕಿ.ಮೂ ದೂರದಲ್ಲಿ ಕಬ್ಬು ತುಂಬಿದ್ದ ಲಾರಿ ನಿಂತಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಲಾರಿ ಚಾಲಕ ರಾಷ್ಟ್ರೀಯ ಹೆದ್ದಾರಿ ಬಳಿ ಇದ್ದ ಕಾಡಾನೆಗೆ ತಿನ್ನಲು ಕಬ್ಬು ತೆಗೆದುಕೊಂಡು ಹೋಗುತ್ತಿದ್ದನ್ನು ನೋಡಿದ್ದಾರೆ. ಬಳಿಕ ವಿಚಾರಣೆ ವೇಳೆ ಆನೆಗೆ ಕಬ್ಬು ನೀಡಿದ್ದನ್ನು ಲಾರಿ ಚಾಲಕ ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ 75 ಸಾವಿರ ರೂ. ಶುಲ್ಕ ವಿಧಿಸಿದ್ದಾರೆ.

ಸಂರಕ್ಷಿತಾರಣ್ಯಗಳಲ್ಲಿ ವಾಹನಗಳನ್ನು ನಿಲ್ಲಿಸುವುದು ಹಾಗೂ ವನ್ಯಜೀವಿಗಳಿಗೆ ಆಹಾರ ನೀಡುವುದಕ್ಕೆ ಅವಕಾಶ ಇಲ್ಲ. ಜಿಲ್ಲೆಯ ಗಡಿಭಾಗದ ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶಲ್ಲಿ ಹಾದು ಹೋಗುವ ಹೆದ್ದಾರಿಯಲ್ಲಿ ಆನೆಗಳು ಕಬ್ಬಿನ ಲಾರಿಗಳನ್ನು ತಡೆದು ಕಬ್ಬು ತಿನ್ನುವುದು ಸಾಮಾನ್ಯವಾಗಿದೆ.

ವಾಹನ ಚಾಲಕರು ಕಬ್ಬು ನೀಡುವುದರಿಂದ ಆನೆಗಳು ರಸ್ತೆಗೆ ಬರುವ ಅಭ್ಯಾಸ ಬೆಳೆಸಿಕೊಂಡಿದ್ದವು. ಇದು ಅಪಘಾತಕ್ಕೆ ಕಾರಣವಾಗುತ್ತಿತ್ತು. ಅಲ್ಲದೇ ಈ ವೇಳೆ ಕೆಲವೊಮ್ಮೆ ವಾಹನಗಳ ಮೇಲೂ ದಾಳಿ ನಡೆಸುತ್ತಿವೆ. ಹೀಗಾಗಿ ಕಾಡು ಪ್ರಾಣಿಗಳಿಗೆ ಆಹಾರ ನೀಡುವುದು ನಿಷೇಧಿಸಲಾಗಿತ್ತು.ಈ ನಿಯಮ ಉಲ್ಲಂಘಿಸಿ ಕಾಡಾನೆಗೆ ಕಬ್ಬು ನೀಡಿದ ಲಾರಿ ಚಾಲಕನಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ ಎಂದು ಸತ್ಯಮಂಗಲಂ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 8:10 pm, Tue, 6 December 22