ಚಾಮರಾಜನಗರ/ದಾವಣಗೆರೆ, ಜನವರಿ 15: ಪ್ರತ್ಯೇಕ ಎರಡು ಅಪಘಾತ ಸಂಭವಿಸಿದ್ದು ಏಳು ಜನ ಮೃತಪಟ್ಟಿದ್ದಾರೆ. ಮತ್ತು ಆರು ಜನ ಗಾಯಗೊಂಡಿದ್ದಾರೆ. ಹೌದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಜಿನಕನಹಳ್ಳಿ ಗ್ರಾಮದ ಸಮೀಪ ಹೋಗುತ್ತಿದ್ದ ಬೈಕ್ಗೆ ಭತ್ತ ಕಟಾವು ಮಾಡುವ ಲಾರಿ (Lorry) ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ನಲ್ಲಿ ಹೋಗುತ್ತಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಓರ್ವ ಬಾಲಕ ಗಾಯಗೊಂಡಿದ್ದನು.
ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದ ನಿವಾಸಿಗಳಾದ ಪತಿ ಸಂತೋಷ್(32), ಪತ್ನಿ ಸೌಮ್ಯ(27) ಹೆಣ್ಣು ಮಗು ನಿತ್ಯಸಾಕ್ಷಿ (4) ಮೃತ ದುರ್ದೈವಿಗಳು. ಗಾಯಗೊಂಡ ಮಗ ಅಭಿ (9) ಅನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಭಿ ಕೂಡ ಮೃತಪಟ್ಟಿದ್ದಾನೆ. ಕೊಳ್ಳೇಗಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸ್ಥಳಕ್ಕೆ ಕೊಳ್ಳೆಗಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ, 2 ಸಾವು
ಮತ್ತೊಂದು ಪ್ರಕರಣದಲ್ಲಿ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಸವಳಂಗ ಸಮೀಪದ ಚಿನ್ನಿಕಟ್ಟಿ ಬಳಿ ಬೊಲೆರೊ ವಾಹನ ಪಲ್ಟಿಯಾಗಿ ಮೂವರು ಮೃತಪಟ್ಟಿದ್ದಾರೆ. ಆರು ಮಂದಿಗೆ ಗಾಯಗಳಾಗಿವೆ. ಭದ್ರಾವತಿಯ ಚಂದನಕೆರೆ ಗ್ರಾಮದ ನಾಗರಾಜ್ (38), ಮಂಜುನಾಥ್ (45), ಗೌತಮ್ (17) ಮೃತ ದುರ್ದೈವಿಗಳು.
ಕಾರ್ಮಿಕರು ಅಡಿಕೆ ಕೋಯ್ಲು ಮುಗಿಸಿ ಬೊಲೆರೊ ವಾಹನದಲ್ಲಿ ವಾಪಸ್ ಆಗುತ್ತಿದ್ದರು. ವಾಹನ ಸವಳಂಗ ಸಮೀಪ ಆಗಮಿಸುತ್ತಿದ್ದಂತೆ ಹಸು ಅಡ್ಡ ಬಂದಿದೆ. ಹೀಗಾಗಿ ಚಾಲಕ ಹಸುವಿಗೆ ಗುದ್ದುವುದನ್ನು ತಪ್ಪಿಸಿದ್ದಾನೆ. ಆದರೆ ವಾಹನ ವೇಗ ಇದ್ದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿ: ಹೊರವಲಯದ ಗಬ್ಬೂರು ಬಳಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:24 pm, Mon, 15 January 24