ಮೈಸೂರು, (ಜುಲೈ 28): ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಸವಿತಾ ಅವರ ಹಣೆಗೆ ಚಾಮರಾಜನಗರ ಸಂಸದ ಸುನೀಲ್ ಬೋಸ್ ಅವರು ಕುಂಕುಮ ಇಟ್ಟಿರುವ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಹೌದು.. ಮೊನ್ನೇ ಶ್ರಾವಣ ಮಾಸದ ಶುಕ್ರವಾರದಂದು ಮೈಸೂರಿನ ಚಾಮುಂಡೇಶ್ವರಿ ಗರ್ಭಗುಡಿಯಲ್ಲೇ ಎಲ್ಲರ ಸಮ್ಮುಖದಲ್ಲೇ ಸಂಸದರು, ಮಹಿಳಾಧಿಕಾರಿ ಹಣೆಗೆ ಕುಂಕುಮ ಇಟ್ಟಿದ್ದು, ಇದೀಗ ಇವರಿಬ್ಬರ ಫೋಟೋ ಭಾರೀ ವೈರಲ್ ಆಗಿದೆ. ಅಲ್ಲದೇ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಮೊನ್ನೆ (ಜುಲೈ 26) ಮೂರನೇ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮರಾಜನಗರದ ನೂತನ ಸಂಸದ ಸುನೀಲ್ ಬೋಸ್ ಮತ್ತು ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಬಿ.ಕೆ. ಸವಿತಾ ಚಾಮುಂಡಿ ಬೆಟ್ಟಕ್ಕೆ ಇವರಿಬ್ಬರೂ ಜತೆಯಾಗಿ ಬಂದಿದ್ದು, ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಚಾಮುಂಡೇಶ್ವರಿ ತಾಯಿ ಗರ್ಭಗುಡಿಯಲ್ಲಿ ಬೆಂಬಲಿಗರ ಸಮ್ಮುಖದಲ್ಲೇ ಸುನೀಲ್ ಬೋಸ್, ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಬಿ.ಕೆ. ಸವಿತಾ ಅವರ ಹಣೆಗೆ ಕುಂಕುಮ ಇಟ್ಟಿದ್ದಾರೆ. ಇದೀಗ ಸುನೀಲ್ ಬೋಸ್ ನಡೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: ಮಹಿಳಾಧಿಕಾರಿ ಹಣೆಗೆ ಕುಂಕುಮ ಇಟ್ಟ ಸುನೀಲ್ ಬೋಸ್, ಪುತ್ರನ ಬಗ್ಗೆ ಮಹದೇವಪ್ಪ ಅಚ್ಚರಿ ಹೇಳಿಕೆ
ಯಾಕೆಂದರೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತಮಗೆ ಮದುವೆ ಆಗಿಲ್ಲ ಎಂದು ಸುನೀಲ್ ಬೋಸ್ ನಾಮಪತ್ರದ ಅಫಿಡೆವಿಟ್ ಸಲ್ಲಿಸಿದ್ದರು. ಈ ಬಗ್ಗೆ ಚಾಮರಾಜನಗರ ಬಿಜೆಪಿ ಸದಸ್ಯರು ಚುನಾವಣಾ ಅಧಿಕಾರಿಗಳಿಗೆ ದೂರನ್ನೂ ನೀಡಿದ್ದರು. ಸುನೀಲ್ ಬೋಸ್ ಹಾಗೂ ಸವಿತಾ ಜತೆಯಲ್ಲಿ ಇರುವ ಫೋಟೋಗಳನ್ನು ನೀಡಿ ದೂರು ನೀಡಿದ್ದರು. ಸುನೀಲ್ ಬೋಸ್‌ಗೆ ಮದುವೆಯಾಗಿದೆ, ಆದರೆ ಅಫಿಡವಿಟ್‌ನಲ್ಲಿ ಸುಳ್ಳು ಹೇಳಿದ್ದಾರೆ ಎಂದು ದೂರಿದ್ದರು. ಇದೀಗ ದೇವರ ಮುಂದೆಯೇ ಅದೇ ಮಹಿಳಾ ಅಧಿಕಾರಿಯ ಹಣೆಗೆ ಕುಂಕುಮ ಇಟ್ಟಿರುವುದು ಸಂಚಲನ ಮೂಡಿಸಿದೆ.
ʼಇದೀಗ, ಚಾಮುಂಡೇಶ್ವರಿ ಗರ್ಭಗುಡಿಯಲ್ಲಿ ನಡೆದದ್ದು ಸುಳ್ಳು ಅಲ್ಲ ತಾನೆ?ʼ ಎಂದು ಬಿಜೆಪಿ ಸದಸ್ಯರು ಪ್ರಶ್ನಿಸಿದ್ದಾರೆ. ʼಮದುವೆ ಆಗಿದ್ದರೆ, ಆಗಿದೆ ಎಂದು ಹೇಳಲಿ. ಇದರಲ್ಲಿ ಅಡಗಿಸಿ ಇಡುವ ಮುಜುಗರದ ಸಂಗತಿ ಏನಿದೆ?ʼ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಅಲ್ಲದೇ ಸಾರ್ವಜನಿಕರ ಮುಂದೆಯೇ ಓರ್ವ ಮಹಿಳಾ ಸರ್ಕಾರಿ ಅಧಿಕಾರಿಗೆ ಕುಂಕುಮ ಇಟ್ಟಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿದೆ. ಕಾಮನ್ ಆಗಿ ಕುಂಕುಮ ಹಚ್ಚಿದರೆ ತಪ್ಪೇನು ಎಂದು ಕೆಲವರು ಅಭಿಪ್ರಾಯಪಟ್ಟಿದ್ದರೆ, ಇನ್ನು ಕೆಲವರು ಸಾರ್ವಜನಿಕವಾಗಿ ಓರ್ವ ಸರ್ಕಾರಿ ಅಧಿಕಾರಿ ಹಣೆಗೆ ಕುಂಕುಮ ಇಟ್ಟಿರುವುದು ತಪ್ಪು ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:59 pm, Sun, 28 July 24