ಮಹಿಳಾಧಿಕಾರಿ ಹಣೆಗೆ ಕುಂಕುಮ ಇಟ್ಟ ಸುನೀಲ್ ಬೋಸ್, ಪುತ್ರನ ಬಗ್ಗೆ ಮಹದೇವಪ್ಪ ಅಚ್ಚರಿ ಹೇಳಿಕೆ

ಮಹಿಳಾಧಿಕಾರಿ ಹಣೆಗೆ ಕುಂಕುಮ ಇಟ್ಟ ಸುನೀಲ್ ಬೋಸ್, ಪುತ್ರನ ಬಗ್ಗೆ ಮಹದೇವಪ್ಪ ಅಚ್ಚರಿ ಹೇಳಿಕೆ

ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ರಮೇಶ್ ಬಿ. ಜವಳಗೇರಾ

Updated on: Jul 28, 2024 | 7:08 PM

ಚಾಮರಾಜನಗರ ಕಾಂಗ್ರೆಸ್ ಸಂಸದ ಸುನೀಲ್ ಬೋಸ್ ಅವರು ದೇವಾಲಯದ ಗರ್ಭಗುಡಿಯಲ್ಲಿ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಹಣೆಗೆ ಕುಂಕುಮ ಇಟ್ಟಿರುವ ಘಟನೆ ನಡೆದಿದೆ. ಇದೀಗ ಇವರಿಬ್ಬರ ಫೋಟೋ ಭಾರೀ ವೈರಲ್ ಆಗಿದೆ. ಅಲ್ಲದೇ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇನ್ನು ಪುತ್ರನ ಬಗ್ಗೆ ತಂದೆ ಎಚ್​ಸಿ ಮಹದೇವಪ್ಪ ಅವರು ಅಚ್ಚರಿ ಸಮಜಾಯಿಷಿ ನೀಡಿದ್ದಾರೆ.

ದಾವಣಗರೆ/ಮೈಸೂರು, (ಜುಲೈ 28): ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಸವಿತಾ ಅವರ ಹಣೆಗೆ ಚಾಮರಾಜನಗರ ಸಂಸದ ಸುನೀಲ್‌ ಬೋಸ್ ಅವರು ಕುಂಕುಮ ಇಟ್ಟಿರುವ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಮೊನ್ನೇ ಶ್ರಾವಣ ಮಾಸದ ಶುಕ್ರವಾರದಂದು ಮೈಸೂರಿನ ಚಾಮುಂಡೇಶ್ವರಿ ಗರ್ಭಗುಡಿಯಲ್ಲೇ ಎಲ್ಲರ ಸಮ್ಮುಖದಲ್ಲೇ ಸಂಸದರು, ಮಹಿಳಾಧಿಕಾರಿ ಹಣೆಗೆ ಕುಂಕುಮ ಇಟ್ಟಿದ್ದು, ಇದೀಗ ಇವರಿಬ್ಬರ ಫೋಟೋ ಭಾರೀ ವೈರಲ್ ಆಗಿದೆ. ಅಲ್ಲದೇ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇನ್ನು ಇದಕ್ಕೆ ಇದೀಗ ಸ್ವತಃ ಸುನೀಲ್ ಬೋಸ್ ಅವರ ತಂದೆ ಸಚಿವ ಎಚ್​ಸಿ ಮಹಾದೇವಪ್ಪ ಅವರು ಪ್ರತಿಕ್ರಿಯಿಸಿದ್ದು, ಕುಂಕುಮ ಇಟ್ಟಿರೋದ್ರಲ್ಲಿ ತಪ್ಪೇನಿದೆ? ಯಾರು ಯಾರಿಗೆ ಬೇಕಾದ್ರು ಕುಂಕುಮ ಇಡಬಹುದು. ಹಿಂದೂ ಸಂಪ್ರದಾಯದಲ್ಲಿ ಸಮಾನತೆ ಅನ್ನೋದು ಇದೆ. ಹೀಗಾಗಿ ಕುಂಕುಮ‌ ಇಟ್ಟಿದಾರೆ ಎಂದು ಸಮಜಾಯಿಸಿ ನೀಡಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್ ಸಿ ಮಹಾದೇವಪ್ಪ, ಮದುವೆ ಆಗಿದೆಯೋ ಇಲ್ವೋ ಎನ್ನುವುದನ್ನು ಅಫಿಡವಿಟ್ ನಲ್ಲಿ ನೋಡಿಕೊಳ್ಳಿ ಎಂದು ಗರಂ ಆದರು. ರಿಟರ್ನಿಂಗ್ ಆಫೀಸರ್ ನೋಡಿದ್ದಾರೆ, ಕಾನೂನು ಪ್ರಕಾರ ತಪ್ಪಿದ್ದರೆ ಕ್ರಮ ಆಗುತ್ತೆ. ಎಲ್ಲವನ್ನೂ ಅಫಿಡವಿಟ್ ನಲ್ಲಿ ಕೊಟ್ಡಿದ್ದಾರೆ. ಎಲೆಕ್ಷನ್ ನಲ್ಲಿ ಬಿಜೆಪಿಯವರು ತಕರಾರು ಹಾಕಿದ್ರು, ನಾಮಪತ್ರ ಸ್ವೀಕೃತಿ ಆಗಿದೆ. ಎಲೆಕ್ಷನ್ ಅರ್ಜಿ ಅಂಗೀಕಾರ ಆಗಿದೆ ಎಂದ ಮೇಲೆ ಕಾನೂನು ರೀತಿ ಎಲ್ಲಾ ಸರಿ ಇದೆ. ಬಿಜೆಪಿಯವರು ಮಾಡದೇ ಇರೋ ಆರೋಪ ಯಾವುದು ಇದೆ. ಸಂವಿಧಾನದಲ್ಲಿ ಎಲ್ಲಾ ಸಮಾನರು ಅಲ್ವಾ? ಲಿಂಗ ತಾರತಮ್ಯ ಮಾಡಬಾರದು ಅಲ್ವಾ ? ವಾಟ್ ಇಸ್ ದಿ ಪ್ರಾಬ್ಲಂ ಎಂದರು.

ಇದನ್ನೂ ಓದಿ: ದೇವಿ ಮುಂದೆಯೇ ಮಹಿಳಾ ಅಧಿಕಾರಿಯ ಹಣೆಗೆ ಕುಂಕುಮ ಇಟ್ಟ ಸಂಸದ ಸುನೀಲ್ ಬೋಸ್, ಚರ್ಚೆಗೆ ಗ್ರಾಸ: ಕಾರಣ ಇಲ್ಲಿದೆ