AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಕ್ಷಾತೀತವಾಗಿ ಗ್ರಾಮದ ಅಭಿವೃದ್ಧಿಯತ್ತ ಚಿತ್ತ: ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಮಾದರಿಯಾದ ಗುಣಕಿ ಗ್ರಾಮ ಪಂಚಾಯ್ತಿ

ಸಾಮಾನ್ಯವಾಗಿ ಚುನಾವಣೆ ಅಂದರೆ ಅಲ್ಲಿ ಹಣ, ಜಾತಿ ಬಲ, ತೋಳ್ಬಲ ಪ್ರದರ್ಶನವಾಗುತ್ತದೆ. ಗುಂಡು‌ ತುಂಡು ಪಾರ್ಟಿ ಇರುತ್ತದೆ. ಇದಕ್ಕಾಗಿ ಅಪಾರ ಪ್ರಮಾಣದ ಖರ್ಚು ವೆಚ್ಚವಾಗುತ್ತದೆ. ಅದರಲ್ಲೂ ಗ್ರಾಮ ಪಂಚಾಯತಿ ಮಟ್ಟದ ಚುನಾವಣೆಯಲ್ಲಿ ಪ್ರತಿಷ್ಠೆ ಪ್ರದರ್ಶನವಾಗುತ್ತದೆ. ಇದಾವುದು ಇಲ್ಲದೆ ವಿಜಯಪುರ ಜಿಲ್ಲೆಯ ಗುಣಕಿ ಗ್ರಾಮ ಪಂಚಾಯ್ತಿ ಚುನಾವಣೆ ಮಾದರಿಯಾಗಿದೆ.

ಪಕ್ಷಾತೀತವಾಗಿ ಗ್ರಾಮದ ಅಭಿವೃದ್ಧಿಯತ್ತ ಚಿತ್ತ: ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಮಾದರಿಯಾದ ಗುಣಕಿ ಗ್ರಾಮ ಪಂಚಾಯ್ತಿ
ಗುಣಕಿ ಗ್ರಾಮ ಪಂಚಾಯಿತಿ ಚುನಾವಣೆ
ಅಶೋಕ ಯಡಳ್ಳಿ, ವಿಜಯಪುರ
| Updated By: ವಿವೇಕ ಬಿರಾದಾರ|

Updated on:Jul 28, 2024 | 3:13 PM

Share

ವಿಜಯಪುರ, ಜುಲೈ 28: ವಿಜಯಪುರ (Vijyapura) ತಾಲೂಕಿನ ಗುಣಕಿ ಗ್ರಾಮ ಪಂಚಾಯತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ರಾಜ್ಯಕ್ಕೆ ಮಾದರಿಯಾಗಿದೆ. ಗ್ರಾಮದ ಗುರು ಹಿರಿಯರು ಕೂಡಿಕೊಂಡು ಗುಣಕಿ ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯನ್ನು ಮಾಡಿದ್ದಾರೆ. ಸರ್ಕಾರದ ಅಧಿಸೂಚನೆಯಂತೆ ಮೀಸಲಾತಿ ಅನ್ವಯ ಇಲ್ಲಿನ ಹಿರಿಯರು ಯಾರಿಗೆ ಅಧಿಕಾರ ನೀಡಬೇಕೆಂದು ತೀರ್ಮಾನ ಮಾಡುತ್ತಾರೆ, ಅವರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುರ್ಚಿಯಲ್ಲಿ ಕೂರುತ್ತಾರೆ.

ಗ್ರಾಮದ ಹಿರಿಯರು ಗ್ರಾಮ ಪಂಚಾಯತಿ ಸದಸ್ಯರ ಜೊತೆಗೆ ಸಭೆ ನಡೆಸಿ ಕಾಶೀರಾಯಗೌಡ ಪಾಟೀಲರನ್ನು ಎಂಬುವರನ್ನು ಅಧ್ಯಕ್ಷರನ್ನಾಗಿ ಮಾಡಲು ಸೂಚನೆ ನೀಡಿದರು. ಎಲ್ಲ ಸದಸ್ಯರು ಸರ್ವಾನುಮತದಿಂದ ಒಪ್ಪಿ ಅವಿರೋಧವಾಗಿ ಆಯ್ಕೆ ಮಾಡಿದರು. ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಕಾಶೀರಾಯಗೌಡ ಪಾಟೀಲ್​ ಅವರಿಗೆ ಸನ್ಮಾನಿಸಿ ಸಿಹಿ ತಿನ್ನಿಸಲಾಯಿತು. ನೂತನ ಆಧ್ಯಕ್ಷರು ಉತ್ತಮವಾಗಿ ಕೆಲಸ ಮಾಡಲಿ ಎಂದು ಆಶಿಸಿದರು.

ಒಟ್ಟು 22 ಸದಸ್ಯ ಬಲದ ಗುಣಕಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಗುಣಕಿ,‌ ಕನ್ನಾಳ, ಮಿಂಚನಾಳ, ಮಿಂಚನಾಳ ತಾಂಡಾ, ಮಿಂಚನಾಳ ಆರ್​ಎಸ್ ಹಾಗೂ ಕನ್ನಾಳ ತಾಂಡಾ ಬರುತ್ತವೆ. ಗ್ರಾಮ ಪಂಚಾಯತಿಗೆ ಆರು ಗ್ರಾಮಗಳ ಸದಸ್ಯರು ಆಯ್ಕೆಯಾಗುತ್ತಾರೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ 2001ರಿಂದಲೂ ನಡೆದುಕೊಂಡು ಬಂದಿದೆ. ಇದೆಲ್ಲರ ರುವಾರಿ ಕನ್ನಾಳ ಗ್ರಾಮದ ಶಿವನಗೌಡ ಬಿರಾದಾರ್ ಎಂಬುವವರ ನಿರ್ದೇಶನವೇ ಕಾರಣವೆಂದು ಸದಸ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಹೂಳು ತುಂಬಿ ರೈತರಿಗೆ ಕಣ್ಣೀರು ತರಸುತ್ತಿರುವ ಡೋಣಿ ನದಿ, ತಲೆ ಹಾಕದ ಜನಪ್ರತಿನಿಧಿಗಳು

ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು, ಹಣ ಖರ್ಚು ಮಾಡುವುದಕ್ಕಿಂತ ಈ ರೀತಿ ಅವಿರೋಧವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಿದರೆ ಚುನಾವಣೆ ಖರ್ಚು ಉಳಿಸಬಹುದು. ಅಭಿವೃದ್ದಿ ಕೆಲಸ ಕಾರ್ಯಗಳನ್ನು ಮಾಡಬಹುದು ಎಂದು ಗ್ರಾಮ ಪಂಚಾಯತಿ ಸದಸ್ಯರು ಹೇಳಿದರು.

ಗುಣಕಿ ಗ್ರಾಮ ಪಂಚಾಯತಿ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ದುಂದು ವೆಚ್ಚ ಮಾಡದೆ ಅವಿರೋಧವಾಗಿ ಆಯ್ಕೆ ಮಾಡಿರುವುದು ಮಾದರಿಯಾಗಿದೆ. ಇದೇ ರೀತಿ ಇತರೆ ಗ್ರಾಮಗಳಲ್ಲಿನ ಚುನಾವಣೆಗಳು ನಡೆಯಬೇಕಿದೆ. ಈ ಮೂಲಕ ಆಧಿಕಾರಕ್ಕಾಗಿ ಮಾಡುವ ಖರ್ಚು ವೆಚ್ಚಗಳು, ಜಗಳ, ದ್ವೇಷ, ಅಸೂಯೆಗಳಿಗೆ ಜಾಗವಿಲ್ಲದಂತಾಗುತ್ತದೆ. ಈ ಮೂಲಕ ಗುಣಕಿ ಗ್ರಾಮದ ಪಂಚಾಯತಿ ಅಧ್ಯಕ್ಷ ಚುನಾವಣೆ ಮಾದರಿಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:12 pm, Sun, 28 July 24