ಚನ್ನಪಟ್ಟಣ ಉಪಚುನಾವಣೆ: ತಮ್ಮ ಮತದ ಬಗ್ಗೆ ಮಾತಾಡದ 13 ಪ್ರತಿಶತ ಮತದಾರರಿಂದ ಭವಿಷ್ಯ ನಿರ್ಧಾರ-ಲೋಕನೀತಿ ಸಮೀಕ್ಷೆ

| Updated By: ಡಾ. ಭಾಸ್ಕರ ಹೆಗಡೆ

Updated on: Nov 22, 2024 | 11:50 AM

ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಚನ್ನಪಟ್ಟಣ ವಿಧಾನಸಭಾ ‌ಉಪಚುನಾವಣೆ ಫಲಿತಾಂಶ ನವೆಂಬರ್ 23ರಂದು ಹೊರಬೀಳಲಿದೆ. ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಸೋಲು - ಗೆಲುವಿನ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ. ಇದರ ನಡುವೆ ಲೋಕನೀತಿ-ಸಿಎಸ್​ಡಿಎಸ್ (CSDS) ಸಮೀಕ್ಷೆ ಸಮೀಕ್ಷೆಯೊಂದನ್ನು ನಡೆಸಿದ್ದು, ರಾಜಕೀಯ ತಜ್ಞ ಮತ್ತು ಖ್ಯಾತ ಸೈಫಾಲಜಿಸ್ಟ್ ಸಂದೀಪ್ ಶಾಸ್ತ್ರಿ ಅವರ ಸಮೀಕ್ಷೆಯಲ್ಲಿ ಚನ್ನಪಟ್ಟಣದ ಫಲಿತಾಂಶ ಏನಾಬಹುದು ಎನ್ನುವ ಒಂದು ನೋಟ ಇಲ್ಲಿದೆ.

ಚನ್ನಪಟ್ಟಣ ಉಪಚುನಾವಣೆ: ತಮ್ಮ ಮತದ ಬಗ್ಗೆ ಮಾತಾಡದ 13 ಪ್ರತಿಶತ ಮತದಾರರಿಂದ ಭವಿಷ್ಯ ನಿರ್ಧಾರ-ಲೋಕನೀತಿ ಸಮೀಕ್ಷೆ
ಚನ್ನಪಟ್ಟಣ ಉಪಚುನಾವಣೆ ಜಿದ್ದಾಜಿದ್ದಿ: ಲೋಕನೀತಿಯ ಸಮೀಕ್ಷೆ ಹೇಳುವುದೇನು?
Follow us on

ಸಂದೀಪ್ ಶಾಸ್ತ್ರಿ, ರಾಜಕೀಯ ತಜ್ಞ ಮತ್ತು ಖ್ಯಾತ ಸೈಫಾಲಜಿಸ್ಟ್ 

ಬೆಂಗಳೂರು, (ನವೆಂಬರ್ 21): ತೀವ್ರ ಕುತೂಹಲ ಮೂಡಿಸಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ (Channapatna by-election) ಉಪಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಇನ್ನೊಂದೆಡೆ ನಾಯಕರು, ಕಾರ್ಯಕರ್ತರು ಕಾತರದಿಂದ ಕಾಯುತ್ತಿದ್ದಾರೆ. ಬೊಂಬೆನಗರಿಯ ಉಪಚುನಾವಣೆಗೆ ಶೇ.88.81ರಷ್ಟು ಮತದಾನವಾಗಿದೆ. ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಮತಗಳು ಚಲಾವಣೆಗೊಂಡಿರುವುದು, ಹೆಚ್ಚಿನ ಮುಸ್ಲಿಂ ಮತಗಳು, ಮಹಿಳಾ ಮತದಾರರೇ ಫಲಿತಾಂಶ ನಿರ್ಧರಿಸುವ ಅಂಶಗಳಾಗಿ ಪರಿಗಣಿತವಾಗುತ್ತಿದ್ದು, ಅವುಗಳ ಆಧಾರದ ಮೇಲೆಯೇ ಸೋಲು, ಗೆಲುವಿನ ಸಾಧ್ಯತೆಗಳು ಚರ್ಚೆಯಲ್ಲಿವೆ.

ಈಗಾಗಲೇ ಹೋಟೆಲ್‍ಗಳು, ಟೀ ಅಂಗಡಿಗಳು, ಸಾರ್ವಜನಿಕ ಸ್ಥಳಗಳು ಚರ್ಚಾ ತಾಣಗಳಾಗಿವೆ. ಇದರ ನಡುವೆ ಬೆಂಗಳೂರಿನ ಎನ್‌ಎಂಐಟಿಯ ಸೆಂಟರ್‌ ಫಾರ್‌ ಪಾಲಿಸಿ ಆ್ಯಂಡ್‌ ಗವರ್ನನ್ಸ್‌ ಸ್ಟಡೀಸ್‌ ಮತ್ತು ಲೋಕನೀತಿ ಸಂಸ್ಥೆಗಳು ಸಮೀಕ್ಷೆ ನಡೆಸಿವೆ. ವಿಧಾನಸಭೆ ಕ್ಷೇತ್ರದ 20 ಮತಗಟ್ಟೆಗಳಲ್ಲಿ ತಲಾ 25 ಮತದಾರರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಇದರೊಂದಿಗೆ ಒಟ್ಟು 502 ಜನರಿಂದ ಅಭಿಪ್ರಾಯ ಸಂಗ್ರಹಿಸಿ ವರದಿ ನೀಡಲಾಗಿದೆ. ಮುಖಾಮುಖಿ ಸಂದರ್ಶನದ ಮೂಲಕ ಚುನಾವಣೋತ್ತರ ಟ್ರೆಂಡ್‌ ಬಗ್ಗೆ ವರದಿ ತಯಾರಿಸಲಾಗಿದೆ.

ಇದನ್ನೂ ಓದಿ: Karnataka Assembly By-Election 2024 Result Date: ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಕ್ಷೇತ್ರಗಳ ಉಪಚುನಾವಣೆ ಮತಎಣಿಕೆ ಯಾವಾಗ?

ಮೂರು ಪಕ್ಷಗಳ ಮಧ್ಯೆ ಪೈಪೋಟಿ ಎದುರಾಗಿತ್ತು. ನಾವು ನಡೆಸಿದ ಮತಗಟ್ಟೆ ಸಮೀಕ್ಷೆಯಲ್ಲಿ 49% ಜನ ಕಾಂಗ್ರೆಸ್​ ಬಗ್ಗೆ ಒಲವು ತೋರಿದರೆ, ಬಿಜೆಪಿ ಬಗ್ಗೆ 8% ಮತ್ತು ಜೆಡಿಎಸ್ ಮೇಲೆ  30% ಜನ ಒಲವು ತೋರಿಸಿದ್ದು ಕಂಡುಬಂತು. ಯಾವ 13 ಪ್ರತಿಶತ ಜನ ತಮ್ಮ ರಾಜಕೀಯ ನಿಲುವಿನ ಬಗ್ಗೆ ಮಾಹಿತಿ ನೀಡಿಲ್ಲವೋ ಅವರೇ ಈ ಚುನಾವಣೆಯ ಭವಿಷ್ಯ ನಿರ್ಧಾರ ಮಾಡುವಂತೆ ಕಾಣುತ್ತದೆ. ಕ್ಷೇತ್ರದ ಮತದಾರರು ಈ ಚುನಾವಣೆಯನ್ನು ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಪರೋಕ್ಷ ಯುದ್ಧವೆಂದೇ ಭಾವಿಸಿರುವುದು ಸ್ಪಷ್ಟವಾಗಿದೆ.

ಯಾರಿಗೆ ಮತ ಹಾಕಬೇಕೆಂದು ನಿರ್ಧರಿಸುವಾಗ ಪಕ್ಷ, ಅಭ್ಯರ್ಥಿ ಅಥವಾ ನಾಯಕತ್ವವು ವ್ಯತ್ಯಾಸವನ್ನುಂಟುಮಾಡಿದೆಯೇ? ಎಂಬ ಪ್ರಶ್ನೆಗೆ ಪ್ರತಿ 10 ರಲ್ಲಿ ನಾಲ್ಕು ಜನರು (41%) ಪಕ್ಷದ ಮೇಲೆ ಕೇಂದ್ರೀಕರಿಸಿದರೆ, ಮೂರನೇ ಒಂದು ಭಾಗದಷ್ಟು ಜನರು (35%) ಅಭ್ಯರ್ಥಿಗಳನ್ನು ಉಲ್ಲೇಖಿಸಿದ್ದಾರೆ. ನಾಲ್ಕನೇ ಒಂದು ಭಾಗದ ಜನರು (24%) ನಾಯಕತ್ವ ತಮ್ಮ ನಿರ್ಧಾರಕ್ಕೆ ನಿರ್ಣಾಯಕವೆಂದು ಭಾವಿಸಿದ್ದಾರೆ.

ಒಕ್ಕಲಿಗ ಸಮುದಾಯದ ನಾಲ್ಕನೇ ಒಂದು ಭಾಗದಷ್ಟು ಜನರು (24%) ಅವರು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಎಂದು ಹೇಳಿದ್ದಾರೆ. ಒಕ್ಕಲಿಗರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು (51%) ಅವರು ಜೆಡಿಎಸ್ (ಎನ್​ಡಿಎ) ಅಭ್ಯರ್ಥಿಗೆ ಮತ ಚಲಾಯಿಸಿದ್ದಾರೆ ಎಂದು ಸೂಚಿಸಿದ್ದಾರೆ. ನಾಲ್ಕನೇ ಒಂದು ಭಾಗದಷ್ಟು ಜನರು (25%) ನಾವು ಯಾರಿಗೆ ಮತ ಚಲಾಯಿಸಿದ್ದಾರೆ ಎಂದು ಹೇಳಲು ಇಷ್ಟಪಟ್ಟಿಲ್ಲ.

ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಕಾಂಗ್ರೆಸ್​, JDS ಮಧ್ಯೆ ಬೆಟ್ಟಿಂಗ್ ಭರಾಟೆ: ಯಾರು ಫೆವರೇಟ್…?

ಇನ್ನು ಕ್ರಾಂಗ್ರೆಸ್​ ಒಬಿಸಿ ಮತ್ತು ಪರಿಶಿಷ್ಟ ಜಾತಿ ಹಾಗೂ ಮುಸ್ಲಿಂ ಮತಗಳನ್ನು ಸೆಳೆದಿದೆ. ಯುವ ಮತದಾರರಲ್ಲಿ ಜೆಡಿಎಸ್ ಸ್ವಲ್ಪಮಟ್ಟಿಗೆ ಮುನ್ನಡೆ ಸಾಧಿಸಿದ್ದರೆ, ಮಧ್ಯವಯಸ್ಕರಲ್ಲಿ ಕಾಂಗ್ರೆಸ್ ಮುಂದಿದೆ. ಹಳೆಯ ಮತದಾರರ ಬೆಂಬಲ ಹೆಚ್ಚು ಕಡಿಮೆ ಸಮಾನವಾಗಿ ಹಂಚಿಕೆಯಾಗಿದೆ. ಹೀಗಾಗಿ ಚನ್ನಪಟ್ಟಣದಲ್ಲಿ ಕಠಿಣ ಸ್ಪರ್ಧೆ ಏರ್ಪಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:53 pm, Thu, 21 November 24