ಬೆಂಗಳೂರಿನಲ್ಲಿ ಕುಡಿಯುವ ನೀರು, ರಸ್ತೆ ಅಭಿವೃದ್ಧಿಗೆ 90 ಕೋಟಿ ರೂ.ಬಿಡುಗಡೆ: CM ಯಡಿಯೂರಪ್ಪ
ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನೀರಿನ ಸಮಸ್ಯೆಗಳು, ಶಿಕ್ಷಣ, ಮೂಲಭೂತ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು. ಕಟ್ಟಡ ನಿರ್ಮಾಣಕ್ಕೆ ಜಿಲ್ಲಾ ಪಂಚಾಯತಿ ಕಾರ್ಯನಿರ್ವಹಿಸಿದರೆ ಸಾಲದು, ಅಭಿವೃದ್ಧಿ ಕಾರ್ಯಗಳಿಗೆ ಗಮನ ಹರಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಶಿವರಾಮೇ ಗೌಡರಿಗೆ ಮುಖ್ಯಮಂತ್ರಿ ಬಿ.ಎಸ್ಯಡಿಯೂರಪ್ಪ ಸೂಚಿಸಿದರು.
ಬೆಂಗಳೂರು: ಕೊರೊನಾ ತಂದೊಡ್ಡಿರುವ ಆರ್ಥಿಕ ಸಂಕಷ್ಟದಲ್ಲಿಯೂ ಬೆಂಗಳೂರಿನಲ್ಲಿ ಕುಡಿಯುವ ನೀರು ಪೂರೈಕೆಗೆ 25 ಕೋಟಿ ರೂ. ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗಾಗಿ 65 ಕೋಟಿ ರೂ.ನ್ನು ಬಿಡುಗಡೆ ಮಾಡಲು ಆದೇಶಿಸಲಾಗಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದರು.
ಬನಶಂಕರಿಯಲ್ಲಿರುವ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಮಹಾದ್ವಾರ ಹಾಗೂ ಸಂಪನ್ಮೂಲ ಕೇಂದ್ರವನ್ನು ಉದ್ಘಾಟಿಸಿದ ನಂತರ ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ಅನುದಾನ ಮೀಸಲಿರಿಸಿಲ್ಲ ಜಿಲ್ಲಾ ಪಂಚಾಯತ್ಗೆ ಬಿಡುಗಡೆಯಾಗಿರುವ ಒಟ್ಟು ಅನುದಾನದಲ್ಲಿ ಬಹುತೇಕ ಭಾಗ ಕಟ್ಟಡ ನಿರ್ಮಾಣ ಹಾಗೂ ವೇತನಕ್ಕಾಗಿಯೇ ವೆಚ್ಚವಾಗುತ್ತಿದೆ. ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ಅನುದಾನ ಮೀಸಲಿರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇರುವ ಸಂಪನ್ಮೂಲಗಳಲ್ಲಿ ಹೆಚ್ಚಿನ ಆದಾಯ ಬರುವಂತಹ ಕಾರ್ಯಗಳಿಗೆ ಒತ್ತು ಕೊಡುವಂತೆ ಸಲಹೆ ನೀಡಿದ ಅವರು, ಆದ್ಯತೆ ಮೇರೆಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವಂತೆ ಸೂಚಿಸಿದರು.
ಕುಡಿಯುವ ನೀರಿನ ಯೋಜನೆಗೆ ಆದ್ಯತೆ ಗ್ರಾಮೀಣ ಭಾಗದ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳ ಅನುಷ್ಠಾನಕ್ಕೆ ಆದ್ಯತೆ ನೀಡಬೇಕಾಗಿದೆ. 2,215 ಯೋಜನೆಗಳಲ್ಲಿ ಹಲವು ಯೋಜನೆಗಳು ಪರಿಪೂರ್ಣಗೊಂಡಿಲ್ಲ. ಕುಡಿಯುವ ನೀರಿನ ಯೋಜನೆಗೆ ಬಹುತೇಕ ಆನುದಾನವನ್ನು ಬಿಡುಗಡೆ ಮಾಡಲಾಗಿದ್ದರೂ, ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುವಂತಹ ಸುಮಾರು 736 ಟ್ಯಾಂಕುಗಳ ಪೈಕಿ 69 ಟ್ಯಾಂಕುಗಳು ಕಾರ್ಯನಿರ್ವಹಿಸುತ್ತಿಲ್ಲ. ಇದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಉದಾಹರಣೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತಿಗೆ ಸೂಚನೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನೀರಿನ ಸಮಸ್ಯೆಗಳು, ಶಿಕ್ಷಣ, ಮೂಲಭೂತ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು. ಕಟ್ಟಡ ನಿರ್ಮಾಣಕ್ಕೆ ಜಿಲ್ಲಾ ಪಂಚಾಯತಿ ಕಾರ್ಯನಿರ್ವಹಿಸಿದರೆ ಸಾಲದು, ಅಭಿವೃದ್ಧಿ ಕಾರ್ಯಗಳಿಗೆ ಗಮನ ಹರಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಶಿವರಾಮೇ ಗೌಡರಿಗೆ ಸೂಚಿಸಿದರು.
ಘನ ತ್ಯಾಜ್ಯ ವಿಲೆಗಾಗಿ ಭೂಮಿ ಮಂಜೂರಾಗಿದೆ ಸಭೆಯಲ್ಲಿ ಉಪಸ್ಥಿತರಿದ್ದ ಜಿ. ಪಂ ಸದಸ್ಯರಾದ ಮುನಿರಾಜು ಮಾತನಾಡಿ, ಗ್ರಾಮ ಪಂಚಾಯತಿಗಳಲ್ಲಿ ಘನತ್ಯಾಜ್ಯ ವಿಲೇವಾರಿಗೆ ಕಂದಾಯ ಇಲಾಖೆಯಿಂದ ಭೂಮಿ ಹಂಚಿಕೆಯಲ್ಲಿ ವಿಳಂಬವಾಗುತ್ತಿದೆ. ಇದಕ್ಕೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಅತೀಕ್ ಅವರು ಜಿಲ್ಲೆಯಲ್ಲಿರುವ ಒಟ್ಟು 93 ಗ್ರಾಮ ಪಂಚಾಯತಿಗಳಲ್ಲಿ 22 ಪಂಚಾಯತಿಗಳಿಗೆ ಘನ ತ್ಯಾಜ್ಯ ವಿಲೆಗಾಗಿ ಭೂಮಿ ಮಂಜೂರಾಗಿದೆ. ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಇದು ಅತಿ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದಕ್ಕೆ ಭೂಮಿ ಒದಗಿಸಲು ಪ್ರಥಮಾದ್ಯತೆ ನೀಡಬೇಕಾಗಿದೆ ಎಂದು ಕೋರಿದರು.
ಕಂದಾಯ ಸಚಿವರಾದ ಆರ್.ಅಶೋಕ್ ಪ್ರತಿಕ್ರಿಯಿಸಿ, ಗ್ರಾಮಗಳಲ್ಲಿ ಲಭ್ಯವಿರುವ ಸರ್ಕಾರಿ ಜಮೀನನ್ನು ಗುರುತಿಸಿ ಸರ್ವೇ ನಂಬರ್ ಅನ್ನು ಸೂಚಿಸಿ ಕೋರಿಕೆ ಸಲ್ಲಿಸಿದರೆ ಸಾಕು ಕೂಡಲೇ ಅದನ್ನು ಮಂಜೂರು ಮಾಡಿಕೊಡುವುದಾಗಿ ಭರವಸೆ ನೀಡಿದರು.
ಇನ್ನು, ಸಾಮಾಜಿಕ ಭದ್ರತೆ ಯೋಜನೆಗಳ ಬಗ್ಗೆ ಮಾತನಾಡಿ, ಇನ್ನು ಮುಂದೆ ಮಾಸಾಶನಗಳು ಅಂಚೆ ಇಲಾಖೆ ಮೂಲಕ ವಿತರಣೆಯಾಗುವುದಿಲ್ಲ. ಬದಲಾಗಿ ಬ್ಯಾಂಕ್ ಮೂಲಕ ನೇರವಾಗಿ ಫಲಾನುಭವಿಗಳ ಖಾತೆಗೆ ತಲುಪುವಂತೆ ವ್ಯವಸ್ಥೆ ಮಾಡಲಾಗುವುದು. ಆಧಾರ್ ಹಾಗೂ ಬಿಪಿಎಲ್ ಕಾರ್ಡಿನ ಆಧಾರದ ಮೇಲೆ ಅರ್ಹರ ಮನೆ ಬಾಗಿಲಿಗೆ ಅರ್ಜಿ ಇಲ್ಲದೇ ಮಾಸಾಶನ ತಲುಪಿಸಲಾಗುವುದು ಎಂದು ಸೂಚಿಸಿದರು.
ಕೊರೊನಾ ಆತಂಕದ ನಡುವೆ ಗ್ರಾಮಸ್ಥರಿಗೆ ಎದುರಾಗಿದೆ ಕುಡಿಯುವ ನೀರಿನ ಸಮಸ್ಯೆ
Published On - 12:34 pm, Wed, 13 January 21