ಚಿಕ್ಕಬಳ್ಳಾಪುರ: ಕೊರೊನಾ ಸಂಕಷ್ಟ ಸಮಯದಲ್ಲಿ ಬಡವರು ಹಸಿವಿನಿಂದ ಬಳಲಬಾರದು ಎಂದು ಸರ್ಕಾರ ಪಡಿತರ ದವಸ ದಾನ್ಯಗಳ ವಿತರಣೆಯಲ್ಲಿ ಏರಿಕೆ ಮಾಡಿ ಮಾನವಿಯತೆ ಮೆರೆದಿದೆ. ಆದರೆ ದೇವರು ವರ ಕೊಟ್ರು ಪೂಜಾರಿ ಕೊಡಲಿಲ್ಲ ಎನ್ನುವ ಮಾತಿನಂತೆ ಆಗಿದೆ. ಸ್ಥಳಿಯ ನ್ಯಾಯಬೆಲೆ ಅಂಗಡಿಗಳಲ್ಲಿ ನ್ಯಾಯಯುತವಾಗಿ ಪಡಿತರ ದವಸ ಧಾನ್ಯ ವಿತರಣೆ ಮಾಡಬೇಕಾದ ಅಂಗಡಿಗಳ ಮಾಲಿಕರು, ಬಡವರ ಬಳಿ ತಲಾ ಪಡಿತರ ಕಾರ್ಡಿಗೆ 10 ರೂಪಾಯಿಯಿಂದ 20 ರೂಪಾಯಿ ಹಣ ವಸೂಲಿ ಮಾಡುತ್ತಿದ್ದಾರೆ.
ಚಿಕ್ಕಬಳ್ಳಾಪುರದ ನ್ಯಾಯ ಬೆಲೆ ಅಂಗಡಿಗಳ ಮಾಲಿಕರು, ಬಡವರ ಬಳಿ ಹತ್ತು ರೂಪಾಯಿ, ಇಪ್ಪತ್ತು ರೂಪಾಯಿ ಹಣ ವಸೂಲಿ ಮಾಡುತ್ತಿದ್ದಾರೆ. ಸಾರ್ವಜನಿಕರ ದೂರಿನ ಮೇರೆಗೆ ಟಿವಿ9, ಇಂದು ಚಿಕ್ಕಬಳ್ಳಾಪುರ ನಗರದ ಶಾಧುಮಠ ರಸ್ತೆಯಲ್ಲಿರುವ ಎಂ.ಮುನಿರಾಜು ಲೈಸೇನ್ಸ್ ದಾರನ ಪಡಿತರ ಅಂಗಡಿ, 3ನೇ ವಾರ್ಡ ನ ದಿಲ್ ಶಾದ್ ಬೇಗಂ, ಹತ್ತನೆ ವಾರ್ಡಿನ ಡಿ.ಕೆ.ವೆಂಕಟೇಶ ಅಂಗಡಿ, ಧರ್ಮಛತ್ರ ರಸ್ತೆಯಲ್ಲಿರುವ ಎಸ್ ಶಶಿಧರ್ ಅಂಗಡಿಗಳಲ್ಲಿ ರಿಯಾಲಿಟಿ ಚೆಕ್ ಮಾಡಿದಾಗ ಅಂಗಡಿಗಳ ಮಾಲಿಕರುಗಳ ಕಳ್ಳಾಟ ಬಯಲಾಯಿತು.
ಗ್ರಾಹಕರ ಕಡೆಯಿಂದ ಹಣ ತೆಗೆದುಕೊಳ್ಳುವ ದೃಶ್ಯ ಸೆರೆಯಾಗಿದ್ದು, ಉಚಿತವಾಗಿ ಪಡಿತರ ಕೊಡುವುದರ ಬದಲು ಏಕೆ ಹಣ ಪಡೆಯೋದು ಎಂದರೆ ನ್ಯಾಯಬೆಲೆ ಅಂಗಡಿ ಮಾಲಿಕ ವೆಂಕಟೇಶ, ಸರ್ ನಮಗೆ ಸರ್ಕಾರ ಸರಿಯಾಗಿ ಕಮಿಷನ್ ಕೊಡುತ್ತಿಲ್ಲ ಪ್ರತಿದಿನದ ಖರ್ಚು ವೆಚ್ಚಕ್ಕೆ ಹಣ ತೆಗೆದುಕೊಳ್ಳುತ್ತೇವೆ ತಪ್ಪೇನಿದೆ ಎಂದು ತಮ್ಮ ತಪ್ಪನ್ನೆ ಸಮರ್ಥಿಸಿಕೊಂಡಿದ್ದಾರೆ.
ನ್ಯಾಯ ಬೆಲೆ ಅಂಗಡಿಗಳ ಮಾಲಿಕರ ಕಳ್ಳಾಟ, ಟಿವಿ9 ನಲ್ಲಿ ಪ್ರಸಾರವಾಗುತ್ತಿದ್ದಂತೆ ಎಚ್ಚೇತ್ತ ಚಿಕ್ಕಬಳ್ಳಾಪುರ ಜಿಲ್ಲಾ ಆಹಾರ ನಾಗರಿಕ ಸರಬರಾಜು ಇಲಾಖೆ ಉಪನಿರ್ದೆಶಕಿ ಸವಿತಾ, ಮತ್ತವರ ಅಧಿಕಾರಿಗಳ ತಂಡ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ, ಪಡಿತರ ವಿತರಣೆಯಲ್ಲಿ ತೂಕ ಪರಿಶೀಲನೆ ನಡೆಸಿ, ಹಣ ವಸೂಲಿ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಒಟ್ಟಾರೆ ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಸರ್ಕಾರ ಪಡಿತರ ಹೆಚ್ಚುವರಿ ವಿತರಣೆಗೆ ಆದೇಶ ಮಾಡಿದರೂ ಸ್ಥಳಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಕಡು ಬಡವರಿಂದ ಖರ್ಚು ವೆಚ್ಚಕ್ಕೆ ಅಂತ ಹಣ ವಸೂಲಿ ಮಾಡುತ್ತಿರುವುದು ಹಾಗೂ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯವಹಿಸಿರುದು ವಿಪರ್ಯಾಸವೆ ಸರಿ.
ಇದನ್ನೂ ಓದಿ:
ನ್ಯಾಯ ಬೆಲೆ ಅಂಗಡಿ ವಿತರಕರಿಗೆ ಸಿಗ್ತಿಲ್ಲ ಕಮಿಷನ್.. ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ
Ration Card Fraud | ಸರ್ಕಾರ ಮತ್ತು ಫನಾನುಭವಿಗಳಿಗೆ ವಂಚಿಸಿದ್ದ ನ್ಯಾಯಬೆಲೆ ಅಂಗಡಿಯ ಲೈಸೆನ್ಸ್ ರದ್ದು