ಚಿಕ್ಕಬಳ್ಳಾಪುರ ಟಿಕೆಟ್ ಫೈಟ್: ಬಿಜೆಪಿ ನಾಯಕರಲ್ಲೇ ಶುರುವಾಯ್ತು ಮುಸುಕಿನ ಗುದ್ದಾಟ
ಮಾಜಿ ಸಚಿವ ಡಾ ಕೆ ಸುಧಾಕರ್ ಅವರಿಗೆ ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಫಿಕ್ಸ್ ಎನ್ನಲಾಗಿದೆ. ತಮಗೆ ಟಿಕೆಟ್ ಖಚಿತ ಎಂದು ಸುಧಾಕರ್ ಕ್ಷೇತ್ರದ ಬಿಜೆಪಿ ಕಾರ್ಯಕ್ರಮಗಳಲ್ಲಿ ಪರೋಕ್ಷವಾಗಿ ಹೇಳಿಕೊಳ್ಳುತ್ತಿದ್ದಾರೆ. ಸುಧಾಕರ್ ತಾವೇ ಅಭ್ಯರ್ಥಿ ಎಂದು ಓಡಾಡುತ್ತಿರುವುದು ವಿಶ್ವನಾಥ್ ಅವರ ಕಣ್ಣು ಕೆಂಪಾಗಿಸಿದ್ದು, ಇದೀಗ ಇಬ್ಬರ ಮಧ್ಯೆ ಮುಸುಕಿನ ಗುದ್ದಾಟ ಶುರುವಾಗಿದೆ.
ಬೆಂಗಳೂರು, ಫೆ.5: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇನ್ನೂ ರಾಜ್ಯ ಬಿಜೆಪಿ ಕೋರ್ ಕಮಿಟಿ ಅಭ್ಯರ್ಥಿಗಳ ಹೆಸರುಗಳನ್ನು ಕೇಂದ್ರದಕ್ಕೆ ಶಿಫಾರಸ್ಸು ಮಾಡಿಲ್ಲ. ಆಗಲೇ ಬಿಜೆಪಿಯಲ್ಲಿ ಟಿಕೆಟ್ಗಾಗಿ ಫೈಟ್ ಶುರುವಾಗಿದೆ. ಮಾಜಿ ಸಚಿವ ಡಾ ಕೆ ಸುಧಾಕರ್ (Dr.K.Sudhakar) ಅವರಿಗೆ ಈ ಬಾರಿ ಚಿಕ್ಕಬಳ್ಳಾಪುರ (Chikkaballapura) ಟಿಕೆಟ್ ಫಿಕ್ಸ್ ಎನ್ನಲಾಗಿದೆ. ಈಗಾಗಲೇ ಅವರು ದೆಹಲಿಗೆ ತೆರಳಿ ಕೇಂದ್ರ ನಾಯಕರ ಜೊತೆ ಚರ್ಚಿಸಿ ಟಿಕೆಟ್ ಖಚಿತಪಡಿಸಿಕೊಂಡು ಬಂದಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಚಿಕ್ಕಬಳ್ಳಾಪುದಲ್ಲಿ ಚುನಾವಣಾ ಪ್ರಚಾರ ಶುರು ಮಾಡಿಕೊಂಡಿದ್ದಾರೆ. ಆದ್ರೆ, ಇದಕ್ಕೆ ಬಿಜೆಪಿ ಶಾಸಕ ಎಸ್ಆರ್ ವಿಶ್ವನಾಥ್ (S.R.Vishwanath) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಗೆ ಟಿಕೆಟ್ ಖಚಿತ ಎಂದು ಸುಧಾಕರ್ ಕ್ಷೇತ್ರದ ಬಿಜೆಪಿ ಕಾರ್ಯಕ್ರಮಗಳಲ್ಲಿ ಪರೋಕ್ಷವಾಗಿ ಹೇಳಿಕೊಳ್ಳುತ್ತಿದ್ದಾರೆ. ಹೀಗಾಗಿ ಇದು ಎಸ್ಆರ್ ವಿಶ್ವನಾಥ್ ಕೆಂಗಣ್ಣಿಗೆ ಗುರಿಯಾಗಿದೆ. ಯಾಕಂದರೆ ವಿಶ್ವನಾಥ್ ಅವರು ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಇದರ ಮಧ್ಯೆ ಸುಧಾಕರ್ ತಾವೇ ಅಭ್ಯರ್ಥಿ ಎಂದು ಓಡಾಡುತ್ತಿರುವುದು ವಿಶ್ವನಾಥ್ ಅವರ ಕಣ್ಣು ಕೆಂಪಾಗಿಸಿದ್ದು, ಇದೀಗ ಇಬ್ಬರ ಮಧ್ಯೆ ಮುಸುಕಿನ ಗುದ್ದಾಟ ಶುರುವಾಗಿದೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸುಧಾಕರ್ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಯಲಹಂಕ ಶಾಸಕ ವಿಶ್ವನಾಥ್, ಜೆಡಿಎಸ್ ವರಿಷ್ಠರಾದ ದೇವೇಗೌಡರು, ಕುಮಾರಸ್ವಾಮಿ ಹೇಳಿದ್ದಾರೆ ಎಂದು ದೇವಮೂಲೆಯಿಂದ ಪೂಜೆ ಮಾಡಿ ಪ್ರಚಾರ ಮಾಡುತ್ತಿದ್ದೇನೆಂದು ಸುಧಾಕರ್ ಹೇಳಿದ್ದಾರೆ. ಈವರೆಗೂ ಬಿಜೆಪಿಯಿಂದ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡಿಲ್ಲ. ನಮ್ಮ ಪಾರ್ಲಿಮೆಂಟರಿ ಬೋರ್ಡ್ನಲ್ಲಿ ಅಭ್ಯರ್ಥಿ ಕುರಿತು ನಿರ್ಧಾರ ಮಾಡಲಾಗುತ್ತದೆ. ಕಾಂಗ್ರೆಸ್ನಿಂದ ಬಂದಿದ್ದರಿಂದ ಈ ವಿಚಾರ ಸುಧಾಕರ್ ಅವರಿಗೆ ತಿಳಿದಿಲ್ಲ ಎಂದರು.
ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ವರಿಷ್ಠರು ಸಮ್ಮತಿಸಿದ್ದಾರೆ: ಕೆ. ಸುಧಾಕರ್
ನಮ್ಮ ಕೆಲಸ ಸಿಸ್ಟಮ್ ಅನ್ನು ಡಾ.ಕೆ.ಸುಧಾಕರ್ ತಿಳಿದುಕೊಳ್ಳಬೇಕು. ಸಣ್ಣ ಚುನಾವಣೆಯಾದರೂ ಹೈಕಮಾಂಡ್ ನಿರ್ಧಾರ ಮಾಡಬೇಕು. ನನ್ನ ಮಗ ಅಲೋಕ್ ಕೂಡ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಆದರೆ ಅಭ್ಯರ್ಥಿ ಬಗ್ಗೆ ವರಿಷ್ಠರು ತೀರ್ಮಾನ ಮಾಡುತ್ತಾರೆ. ಮೈತ್ರಿ ಆಗಿರುವುದರಿಂದ ಯಾರಿಗೆ ಟಿಕೆಟ್ ಅನ್ನೋದು ಫೈನಲ್ ಆಗಿಲ್ಲ. ಫೈನಲ್ ಆಗುವವರೆಗೂ ಮಾತಾಡುವುದು ಬೇಡ ಎಂದರು.
ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಕೊಡದಿದ್ದರೆ ಮುಂದಕ್ಕೆ ನೋಡೋಣ: ಸುಧಾಕರ್
ಸುಧಾಕರ್ ಬಿಜೆಪಿಗೆ ಹೊಸಬರು ಎಂಬ ವಿಶ್ವನಾಥ್ ಹೇಳಿಕೆಗೆ ತಿರುಗೇಟು ಕೊಟ್ಟ ಸುಧಾಕರ್, ಬಿಜೆಪಿ ಸೇರ್ಪಡೆಯಾಗಿ ಐದು ವರ್ಷ ಆಗುತ್ತಾ ಬಂದಿದೆ. ಇನ್ನೂ ಹೊಸಬರು ಅಂತಾ ತಿಳಿದುಕೊಂಡರೆ ಹೊಸಬರು ಅಂತಾನೇ ತಿಳಿದುಕೊಳ್ಳಲಿ. ಅವರಷ್ಟೇ ಬದ್ಧತೆಯಿಂದ ಕೆಲಸವನ್ನಂತೂ ಮಾಡುತ್ತಿದ್ದೇವೆ. ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಅಂತೂ ಅಪೇಕ್ಷಿಸಿದ್ದೇನೆ. ಕೊಡದೇ ಇದ್ದರೆ ಆಗ ನೋಡೋಣ, ಈಗ ಯಾಕೆ ಚಿಂತೆ ಎಂದರು.
ಅನಿರೀಕ್ಷಿತ ಸೋಲಿನಿಂದ ನಾಲ್ಕೂವರೆ ವರ್ಷ ಯಾವುದೇ ಸ್ಥಾನಮಾನ ಇಲ್ಲದೇ ಪಕ್ಷ ಕಟ್ಟೋದು ಕಷ್ಟ ಎಂಬ ಒಂದೇ ಕಾರಣಕ್ಕೆ ಟಿಕೆಟ್ ಕೇಳಿದ್ದೇನೆ. ಪಕ್ಷ ಮತ್ತು ಸಂಘಟನೆ ಏನೂ ತೀರ್ಮಾನ ಮಾಡುತ್ತದೋ ಅದಕ್ಕೆ ಬದ್ಧ. ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಾಧ್ಯಕ್ಷರು, ಮಾಜಿ ಮುಖ್ಯಮಂತ್ರಿಗಳು, ವಿಪಕ್ಷ ನಾಯಕರು, ನಮ್ಮ ಸಮುದಾಯದ ನಾಯಕರನ್ನು ಭೇಟಿ ಮಾಡಿದ್ದೇನೆ. ಮೈತ್ರಿ ಪಕ್ಷದ ಮಾಜಿ ಪ್ರಧಾನಿ, ಮಾಜಿ ಸಿಎಂ, ಜೆಡಿಎಸ್ ಯುವ ಘಟಕದ ಅಧ್ಯಕ್ಷರನ್ನು ಭೇಟಿ ಮಾಡಿದ್ದೇನೆ. ನನ್ನ ಪ್ರಯತ್ನ ಏನು ಮಾಡಬೇಕೋ ನಾನು ಮಾಡಿದ್ದೇನೆ. ಟಿಕೆಟ್ ಘೋಷಣೆ ಹೈಕಮಾಂಡ್ ನಿರ್ಧಾರ ಎಂಬ ವಿಜಯೇಂದ್ರ ಮಾತನ್ನು ನಾನು ಒಪ್ಪುತ್ತೇನೆ ಎಂದರು.
ಕಾಂಗ್ರೆಸ್ಗೆ ಪರ್ಯಾಯ ಶಕ್ತಿ ಕಟ್ಟಬೇಕೆಂದು ಬಿಜೆಪಿಗೆ ಬಂದಿದ್ದೇನೆ: ಸುಧಾಕರ್
ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಕಾಂಗ್ರೆಸ್ಗೆ ಪರ್ಯಾಯ ಶಕ್ತಿ ಕಟ್ಟಬೇಕೆಂದು ಬಿಜೆಪಿಗೆ ಬಂದಿದ್ದೇನೆ ಎಂದು ಸುಧಾಕರ್ ಹೇಳಿದ್ದಾರೆ. ಬಿ.ಎಸ್.ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡಬೇಕೆಂದು ಬಂದಿದ್ದೇವೆ. ಸಚಿವರಾಗಿ ಯಡಿಯೂರಪ್ಪ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದೇವೆ ಎಂದರು.
ನಾನು, ಎಂಟಿಬಿ ನಾಗರಾಜ್ ಮೂರು ಜಿಲ್ಲೆಗಳಲ್ಲಿ ಸಂಘಟನೆ ಮಾಡಿದ್ದೇವೆ. ಮೂರು ಜಿಲ್ಲೆಗಳಲ್ಲಿ ಶೇ. 10-11 ರಷ್ಟಿದ್ದ ವೋಟ್ ಶೇರ್ ಶೇ.22-23ಕ್ಕೆ ಏರಿಕೆಯಾಗಿದೆ. ಎರಡೂ ಪಕ್ಷಗಳಲ್ಲಿದ್ದ ಮುಖಂಡರನ್ನು ಬಿಜೆಪಿಗೆ ಕರೆತಂದಿದ್ದೇವೆ ಎಂದು ಸುಧಾಕರ್ ಹೇಳಿದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ