ಪ್ರತ್ಯೇಕ ರಾಷ್ಟ್ರ: ಡಿಕೆ ಸುರೇಶ್ ಹೇಳಿಕೆ ಪ್ರಸ್ತಾಪಿಸಿ ಹಿಗ್ಗಾಮುಗ್ಗಾ ಜಾಡಿಸಿದ ಮೋದಿ!
ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರ ಪ್ರತ್ಯೇಕ ರಾಷ್ಟ್ರ ಹೇಳಿಕೆಯನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿ ಲೋಕಸಭೆಯ ಕೊನೆಯ ಭಾಷಣದಲ್ಲಿ ಪ್ರಸ್ತಾಪಿಸಿ ಟಾಂಗ್ ಕೊಟ್ಟಿದ್ದಾರೆ. ದೇಶವನ್ನು ಇನ್ನೆಷ್ಟು ತುಂಡು ಮಾಡಬೇಕು ಅಂದುಕೊಂಡಿದ್ದೀರಿ. ಇಷ್ಟು ಒಡೆದಿರುವುದು ಸಾಕಾಗಿಲ್ಲವೇ, ಇನ್ನೆಷ್ಟು ಭಾಗಬೇಕು ಎಂದು ಕಿಡಿಕಾರಿದ್ದಾರೆ.
ನವದೆಹಲಿ, (ಫೆಬ್ರವರಿ 05): ಪ್ರತ್ಯೇಕ ರಾಷ್ಟ್ರದ ಬೇಡಿಕೆ ಕುರಿತು ಡಿಕೆ ಹೇಳಿಕೆಯನ್ನೇ ಅಸ್ತ್ರ ಮಾಡಿಕೊಂಡು ಬಿಜೆಪಿ ಕರ್ನಾಟಕದಲ್ಲಿ ಪ್ರತಿಭಟನೆ ಮಾಡಿದ್ದು, ಅದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ಹರಿಹಾಯುತ್ತಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸಹ ಇಂದು (ಸೋಮವಾರ) ಈ ಬಾರಿ ಲೋಕಸಭೆಯ ಕೊನೆಯ ಭಾಷಣದಲ್ಲಿ ಸಂಸದ ಡಿಕೆ ಸುರೇಶ್(DK Suresh) ಪ್ರತ್ಯೇಕ ರಾಷ್ಟ್ರ ಹೇಳಿಕೆಯನ್ನು ಪ್ರಸ್ತಾಪಿಸಿ, ಬಹಿರಂಗವಾಗಿ ದೇಶ ಒಡೆಯುವ ಬಗ್ಗೆ ಮಾತನಾಡುತ್ತಿದ್ದಾರೆ. ಒಗ್ಗೂಡಿಸುವುದು ಇರಲಿ. ಒಡೆಯುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆಯಲ್ಲಿ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಮೋದಿ, ಇನ್ನೂ ಭಾರತ ದೇಶವನ್ನು ಎಷ್ಟು ತುಂಡು ಗಳನ್ನಾಗಿ ಮಾಡುತ್ತಿರಾ? ಇಷ್ಟು ಒಡೆದಿರುವುದು ಸಾಕಾಗಿಲ್ವಾ. ದೇಶವನ್ನು ಇನ್ನೆಷ್ಟು ತುಂಡು ಮಾಡಬೇಕು ಅಂದುಕೊಂಡಿದ್ದೀರಿ. ಕಾಂಗ್ರೆಸ್ನವರು ಎಂದೂ ಕೂಡ ದೇಶವನ್ನು ಜೋಡಿಸಿಲ್ಲ. ಜವಾಹರಲಾಲ್ ನೆಹರು ತಪ್ಪಿನಿಂದ ಕಾಶ್ಮೀರ ಸಮಸ್ಯೆ ಸೃಷ್ಟಿಯಾಯಿತು. ನೆಹರು ಹೊರಟು ಹೋದ್ರು, ಆದ್ರೆ ದೇಶ ನೋವು ಅನುಭವಿಸುತ್ತಿದೆ. ಇಂದು ನಾವು ಜಮ್ಮು-ಕಾಶ್ಮೀರ ಅಭಿವೃದ್ಧಿ ಮಾಡಿದ್ದೇವೆ ಎಂದು ಟಾಂಗ್ ಕೊಟ್ಟರು.
ಇದನ್ನೂ ಓದಿ: PM Modi on President’s speech: ನೆಹರು ಯಾವತ್ತೂ ಜನರ ಸಾಮರ್ಥ್ಯವನ್ನು ನಂಬಲಿಲ್ಲ: ಮೋದಿ
ಇನ್ನು ಸಂಸದ ಡಿ.ಕೆ.ಸುರೇಶ್ ಇತ್ತೀಚೆಗೆ ಬಜೆಟ್ ಕುರಿತು ಟೀಕಿಸುತ್ತಾ ಆಡಿದ ಪ್ರತ್ಯೇಕ ರಾಷ್ಟ್ರದ ಮಾತು ಕಾಂಗ್ರೆಸ್ ಬಿಜೆಪಿ ಮಧ್ಯೆ ಮತ್ತೊಂದು ಜಟಾಪಟಿಗೆ ಕಾರಣವಾಗಿದೆ. ಪ್ರತ್ಯೇಕ ರಾಷ್ಟ್ರದ ಬೇಡಿಕೆ ಕುರಿತು ಡಿಕೆ ಸುರೇಶ್ ಹೇಳಿಕೆಯನ್ನೇ ಅಸ್ತ್ರ ಮಾಡಿಕೊಂಡು ಕರ್ನಾಟಕ ಬಿಜೆಪಿ ನಾಯಕರು ಹೋದಲ್ಲಿ ಬಂದಲ್ಲಿ ಖಂಡಿಸುತ್ತಿದ್ದಾರೆ. ಅಲ್ಲದೇ ಡಿಕೆ ಸುರೇಶ್ ಅವರ ನಿವಾಸಕ್ಕೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದರು.
ರಾಜ್ಯಕ್ಕೆ ತೆರಿಗೆ ಪಾಲಿನಲ್ಲಿ ಅನ್ಯಾಯವಾಗುತ್ತಿದೆ. ದಕ್ಷಿಣದ ರಾಜ್ಯಗಳಿಗೆ ತಾರತಮ್ಯ ಆಗುತ್ತಿದೆ ಎಂದು ಡಿಕೆ ಸುರೇಶ್ ಹೇಳಿದ್ದರು. ಅದನ್ನೇ ಇಟ್ಟುಕೊಂಡು ಇದೀಗ ರಾಜ್ಯ ಕಾಂಗ್ರೆಸ್ ನಾಯಕರು ಇದೇ ಫೆಬ್ರವರಿ 97ರಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:25 pm, Mon, 5 February 24