ಬೈಕ್ ಹಿಂದೆ ಗರ್ಲ್ಫ್ರೆಂಡ್ ಕೂರಿಸಿ ಬೆಂಗಳೂರು-ಹೈದರಾಬಾದ್ ಹೆದ್ದಾರಿಯಲ್ಲಿ ರೇಸ್
ಬೆಂಗಳೂರು-ಹೈದರಾಬಾದ್ ಮಹಾ ನಗರಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವಕರು ಐಷಾರಾಮಿ ಬೈಕ್ಗಳಲ್ಲಿ ರೇಸ್ ಮಾಡುತ್ತಿದ್ದಾರೆ. ಅತಿವೇಗದ ಚಾಲಾಯಿಸುತ್ತಿರುವುದರಿಂದ ಇತರೆ ವಾಹನಸವಾರರಿಗೆ ಜೀವಭಯ ಕಾಡುತ್ತಿದೆ.
ಚಿಕ್ಕಬಳ್ಳಾಪುರ: ಬಿಸಿರಕ್ತದ ಯುವಕರು ತಮ್ಮತಮ್ಮ ಗೆಳತಿಯರನ್ನು ಬೈಕ್ ಹಿಂಬದಿ ಕೂರಿಸಿಕೊಂಡು ಬೆಂಗಳೂರು-ಹೈದರಾಬಾದ್ ಮಹಾ ನಗರಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ರೇಸ್ (Bike Race) ಮಾಡಿ ವೀಕೆಂಡ್ ಮಸ್ತಿ ಮಾಡುತ್ತಿದ್ದಾರೆ. ಯುವಕರ ಈ ದುಸ್ಸಾಹಸಕ್ಕೆ ಇತರೆ ವಾಹನ ಸವಾರರು ಹೆದ್ದಾರಿಯಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಿದ್ದಾರೆ. ತಮಗೆಲ್ಲಾದರೂ ಬಂದು ಡಿಕ್ಕಿ ಹೊಡೆದರೆ ಏನಪ್ಪಾ ಗತಿ ಅಂತ ಒಂದಷ್ಟು ಮಂದಿ ಜೀವಭಯದಿಂದಲೇ ವಾಹನ ಚಲಾಯಿಸುತ್ತಿದ್ದಾರೆ. ಯುವಕರ ಇಂತಹ ದುಸ್ಸಾಹಸದಿಂದ ಬೇಸತ್ತಿರುವ ಸಾರ್ವಜನಿಕರು, ಹೆದ್ದಾರಿಯಲ್ಲಿ ಬೈಕ್ ರೇಸ್ಗಳಿಗೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
“ಹೆದ್ದಾರಿಯಲ್ಲಿ ಬೈಕ್ಗಳನ್ನು ವೇಗವಾಗಿ ಚಲಾಯಿಸಲಾಗುತ್ತಿದೆ. ವಾರಂತ್ಯ ಬಂದರೆ ಸಾಕು ಹೆದ್ದಾರಿಯಲ್ಲಿ ದ್ವಿಚಕ್ರ ವಾಹನಗಳನ್ನು ಅತಿವೇಗವಾಗಿ ಚಲಾಯಿಸಲಾಗುತ್ತದೆ. ನಾನ ನೀನ ಎಂದು ಪೈಪೋಟಿಯಲ್ಲಿ ಬೈಕ್ಗಳನ್ನು ಚಲಾಯಿಸಲಾಗುತ್ತಿದೆ. ಇದರಿಂದಾಗಿ ಇತರೆ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ” -ಮಂಜುನಾಥ್, ಸ್ಥಳಿಯ ವಾಹನ ಸವಾರ
ಇದನ್ನೂ ಓದಿ: Nandi Hills: ಪ್ರವಾಸಿಗರಿಗೆ ಗುಡ್ ನ್ಯೂಸ್, ಚಿಕ್ಕಬಳ್ಳಾಪುರದ ನಂದಿ ಬೆಟ್ಟ ಪ್ರವೇಶದ ಸಮಯ ಬದಲಾವಣೆ
ಇತ್ತಿಚಿಗೆ ಇದೇ ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ರ ಚಿಕ್ಕಬಳ್ಳಾಪುರದ ಬಳಿ ಬಿಎಂಡಬ್ಲ್ಯೂ ಐಷರಾಮಿ ಬೈಕ್ ಸವಾರನೊಬ್ಬ ಅತಿವೇಗವಾಗಿ ಸಂಚರಿಸಲು ಹೋಗಿ ಸ್ಥಳಿಯ ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ರಸ್ತೆಯಲ್ಲಿ ಪ್ರಾಣ ಕಳೆದುಕೊಂಡಿದ್ದ. ಇದರನ್ನು ನೋಡಿದ ಮೇಲೆ ಸಾರ್ವಜನಿಕರಿಗೆ ಜೀವಭಯ ಕಾಡಲು ಆರಂಭಿಸಿದೆ. ಬೈಕ್ ರೇಸ್ಗಳ ಕಾಟದಿಂದ ಸ್ಥಳಿಯ ವಾಹನ ಸವಾರರಂತೂ ಹೆದ್ದಾರಿಯಲ್ಲಿ ಸಂಚರಿಲು ಹಿಂದೇಟು ಹಾಕುತ್ತಿದ್ದಾರೆ.
“ಹೆದ್ದಾರಿಯಲ್ಲಿ ಐಷಾರಾಮಿ ಬೈಕ್ಗಳ ಸಂಚಾರ ಹೆಚ್ಚಾಗಿದೆ. ಶನಿವಾರ ಮತ್ತು ಭಾನುವಾರದಂದು ಹೂವು ಇತ್ಯಾದಿಗಳನ್ನು ತೆಗೆದುಕೊಂಡು ಹೆದ್ದಾರಿಯಲ್ಲಿ ಹೋಗುವಾಗ ಭೀತಿಗೊಳ್ಳುತ್ತಿದ್ದಾರೆ. ಇತ್ತೀಚೆಗೆಷ್ಟೆ ಓರ್ವ ಐಷಾರಾಮಿ ಬೈಕ್ ಸವಾರ ವೇಗವಾಗಿ ಬಂದು ವೃದ್ಧರೊಬ್ಬರಿಗೆ ಡಿಕ್ಕಿ ಹೊಡೆದಿದ್ದ. ಘಟನೆಯಲ್ಲಿ ವೃದ್ಧ ಸಾವನ್ನಪ್ಪಿದ್ದಾರೆ. ಹೀಗಾಗಿ ಇಂತಹ ದುಸ್ಸಾಹಸಗಳಿಗೆ ಕಡಿವಾಣ ಹಾಕಬೇಕು” -ವಿನಯ್, ಸ್ಥಳಿಯ ನಿವಾಸಿ
ಒಟ್ಟಾರೆ, ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ ನೈಸ್ ಆಗಿದೆ ಅಂತ ನಿಗದಿತ ಸಮಯದಲ್ಲಿ ಬೆಂಗಳೂರಿನಿಂದ ಹೈದರಾಬಾದ್ಗೆ ಮುಟ್ಟಿ ವಾಪಸ್ ಬೆಂಗಳೂರಿಗೆ ಬರಲು ಬೈಕ್ಗಳ ಮೇಲೆ ಜೂಜಾಟವೇ ನಡೆಯುತ್ತಿದೆ. ರೇಸರ್ಗಳಿಗೆ ಬೈಕ್ ಜೂಜಾಟ, ಗರ್ಲ್ಪ್ರೇಂಡ್ಗಳ ಜೊತೆ ಮೋಜು ಮಸ್ತಿಯಾದರೆ ಸ್ಥಳಿಯ ವಾಹನ ಸವಾರರು ಪ್ರಾಣ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ಇನ್ನಾದರೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಇಂತಹ ಬೈಕ್ ರೇಸ್ಗಳಿಗೆ ಕಡಿವಾಣ ಹಾಕುತ್ತಾರೆಯೇ ಎಂಬುದನ್ನು ನೋಡಬೇಕಿದೆ.
ವರದಿ: ಭೀಮಪ್ಪ ಪಾಟೀಲ, ಟಿವಿ9 ಚಿಕ್ಕಬಳ್ಳಾಪುರ
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:30 pm, Mon, 21 November 22