ಚಿಕ್ಕಬಳ್ಳಾಪುರ, ಮಾರ್ಚ್ 14: ಅದೊಂದು ಪ್ರಾಧಿಕಾರ ಜಿಲ್ಲೆ, ರಾಜ್ಯವಲ್ಲದೇ ಭ್ರಷ್ಟಾಚಾರಕ್ಕೆ (corruption) ದೇಶದಲ್ಲೇ ಕುಖ್ಯಾತಿಯಾಗಿತ್ತು. ಅಲ್ಲಿಯ ಶಾಸಕರು ಅದೊಂದು ಪ್ರಾಧಿಕಾರವನ್ನು ಹಿಡಿತದಲ್ಲಿ ಇಟ್ಟುಕೊಂಡಿದ್ದರು. ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಚಿನ್ನದ ಮೊಟ್ಟೆಯಂತಿದ್ದ ಆ ಪ್ರಾಧಿಕಾರಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರ ಕೆಲವು ವರ್ಷಗಳ ನಂತರ ಅಧ್ಯಕ್ಷರನ್ನು ನೇಮಕ ಮಾಡಿದ್ದು, ಈಗಲಾದರೂ ಆ ಸಂಸ್ಥೆ ಕುಖ್ಯಾತಿಯಿಂದ ಹೊರಬರುತ್ತಾ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ.
ಭೂಪರಿವರ್ತನೆಗೆ ಎನ್‍ಒಸಿ ಸೇರಿದಂತೆ ಲೇಔಟ್ ಅನುಮೋದನೆಗೆಂದೇ ಇರುವ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರ ಭ್ರಷ್ಟಾಚಾರ, ಅನ್ಯಾಯ, ಅಕ್ರಮ, ಅವ್ಯವಹಾರಗಳಿಗೆ ದೇಶದಲ್ಲೇ ಕುಖ್ಯಾತಿಯಾಗಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಡಾ.ಕೆ.ಸುಧಾಕರ್ ಸೋತಿದ್ದೆ ತಡ, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರ ಸ್ವಾತಂತ್ರ್ಯ ಸಿಕ್ಕ ಸಂಸ್ಥೆಯಂತಾಗಿತ್ತು.
ಇದನ್ನೂ ಓದಿ: ಕಣಜೇನಹಳ್ಳಿಯಲ್ಲಿ ಅಮಾವ್ಯಾಸೆಯ ದಿನ ಕಾಳಿಕಾಂಭದೇವಿ ಗುಡಿಯಲ್ಲಿ ದೃಷ್ಟಿದೋಷ ತೆಗೆಸಿಕೊಂಡರೆ ಎನಾಗುತ್ತೆ ಗೊತ್ತಾ?
ಕಳೆದ 6-7 ವರ್ಷಗಳಿಂದ ಡಾ. ಕೆ.ಸುಧಾಕರ್ ಅಣತಿಯಂತೆ ನಡೆದುಕೊಳ್ಳುತ್ತಿದ್ದ ಸಂಸ್ಥೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಅಳೆದು ತೂಗಿ ಲೆಕ್ಕಚಾರದ ಮೇಲೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿರವರನ್ನು ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಿದೆ.
ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಭ್ರಷ್ಟಾಚಾರದಿಂದ ಚಿಕ್ಕಬಳ್ಳಾಪುರ ನಗರದ ಸುತ್ತಮುತ್ತ ಬಡಾವಣೆಗಳ ನಿರ್ಮಾಣ ಕುಂಠಿತಗೊಂಡಿದೆ. ನಿರ್ಮಾಣವಾಗಿರುವ ಬಡಾವಣೆಗಳಲ್ಲಿ 30 X 40 ಅಡಿಗಳ ನಿವೇಶನವೊಂದಕ್ಕೆ 30-40 ಲಕ್ಷದಷ್ಟು ಬೆಲೆ ದುಬಾರಿಯಾಗಿದೆ. ಇನ್ನು ಈಗ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಕೆ.ಎನ್.ಕೇಶವರೆಡ್ಡಿ ಕುಖ್ಯಾತಿ ಹೋಗಲಾಡಿಸುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ – ಕಲ್ಯಾಣ ಮಂಟಪದಲ್ಲಿ ಮದುವೆ ಮುಯ್ಯಿ ಹಣವಿದ್ದ ಬ್ಯಾಗ್ ಕದ್ದ ಚೋರರು, ಸಿಸಿಟಿವಿ ಆಫ್ ಮಾಡಿ ಕಳ್ಳತನ
ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ 1 ಎಕರೆ ಜಮೀನನ್ನು ಲೇಔಟ್ ಮಾಡಲು 14 ಲಕ್ಷ ರೂಪಾಯಿ ಲಂಚ ಪಡೆಯುತ್ತಿರುವ ಆರೋಪ ಕೇಳಿ ಬಂದಿದೆ. ಲಂಚಾವತಾರ ಮುಂದುವರೆಯುತ್ತಾ, ಇಲ್ಲವೇ ನಿವೇಶನಗಳ ಬೆಲೆ ಇಳಿಕೆಯಾಗಿ ಮಧ್ಯಮ ವರ್ಗದವರಿಗೂ ನಿವೇಶನಗಳು ಸಿಗುತ್ತಾ ಕಾದು ನೋಡಬೇಕು. ಕೆಲವು ಅಧಿಕಾರಿಗಳು ಹಾಗೂ ಕೆಲವು ಜನಪ್ರತಿನಿಧಿಗಳಿಗೆ ಚಿನ್ನದ ಮೊಟ್ಟೆಯಂತಾಗಿರುವ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತಾ ಕಾದುನೋಡಬೇಕು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:49 pm, Thu, 14 March 24