ಚಿಕ್ಕಬಳ್ಳಾಪುರ: ಪ್ರವಾಸಿಗರ ಅಚ್ಚು ಮೆಚ್ಚಿನ ಪ್ರವಾಸಿ ತಾಣ ನಂದಿಗಿರಿಧಾಮ(Nandi Hills) ಒಂದೆಡೆ ಕೊರೊನಾ ಸೋಂಕಿನ ಆತಂಕ ಮತ್ತೊಂದೆಡೆ ಬೆಟ್ಟದ ರಸ್ತೆ ಕುಸಿದು ರಸ್ತೆ ಕೊಚ್ಚಿ ಹೋದ ಹಿನ್ನಲೆಯಲ್ಲಿ ನಂದಿಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧ ಮಾಡಲಾಗಿದೆ. ಇದ್ರಿಂದ ನಂದಿಗಿರಿಧಾಮಕ್ಕೆ ಬಂದ ಬಹುತೇಕ ಪ್ರವಾಸಿಗರು ಈಗ ನಂದಿಗಿರಿಧಾಮದ ಬದಲು ಆವಲಬೆಟ್ಟದತ್ತ(Avalabetta) ಮುಖ ಮಾಡಿದ್ದಾರೆ. ಇದ್ರಿಂದ ಆವಲಬೆಟ್ಟ ಇತ್ತೀಚಿಗೆ ಪ್ರವಾಸಿಗಳಿಂದ ತುಂಬಿ ತುಳುಕುತ್ತಿದೆ.
ಆವಲಬೆಟ್ಟದಲ್ಲಿ ವಿಶೇಷತೆ ಏನಿದೆ?
ಚಿಕ್ಕಬಳ್ಳಾಪುರ ತಾಲೂಕಿನ ಆವಲಬೆಟ್ಟ ಸುಂದರ ಪ್ರಕೃತಿ ತಾಣ. ಮೀಸಲು ಅರಣ್ಯವಾಗಿರುವ ಆವಲಬೆಟ್ಟ ಸಾವಿರಾರು ಎಕರೆ ವಿಶಾಲವಾಗಿದ್ದು ದಟ್ಟಕಾರಣ್ಯವಿದೆ, ಸಾವಿರಾರು ಅಡಿಗಳ ಬೆಟ್ಟದ ಮೇಲೆ ನರಸಿಂಹಸ್ವಾಮಿ ದೇವಾಲಯವಿದೆ. ಇನ್ನೊಂದೆಡೆ ಸ್ವಾಭಾವಿಕವಾಗಿ ಕೊಕ್ಕರೆಯಾಕರದಲ್ಲಿ ಕಲ್ಲು ಬಂಡೆಯೊಂದು ಇದೆ, ಆ ಬಂಡೆಯಿಂದಲೆ ಆವಲಬೆಟ್ಟ ಈಗ ಪ್ರವಾಸಿ ತಾಣವಾಗಿದೆ.
ಕೊಕ್ಕರೆಯಾಕಾರದ ಬಂಡೆಯ ವಿಶೇಷತೆ ಏನು?
ಆವಲಬೆಟ್ಟದ ತುತ್ತ ತುದಿಯಲ್ಲಿ ಕೊಕ್ಕರೆಯಾಕಾರದ ಕಲ್ಲು ಬಂಡೆ ಇದೆ. ಬೆಟ್ಟದ ಕೊನೆ ಭಾಗದಲ್ಲಿ ಸ್ವಾಭಾವಿಕವಾಗಿ ಇರುವ ಬಂಡೆಯ ಮೇಲೆ ನಿಂತು ಕೆಳಗೆ ಬಗ್ಗಿ ನೋಡಲು ಸಾಧ್ಯವಿಲ್ಲ, ಕೊಕ್ಕರೆ ಕುತ್ತಿಗೆ ಭಾಗದಂತಿರುವ ಬಂಡೆಯ ಮೇಲೆ ನಿಂತಾಗ ಅಲ್ಲೊಂದು ರೋಮಾಂಚನ ಅನುಭವವಾಗುತ್ತೆ. ತಣ್ಣನೆ ಗಾಳಿಯ ಮಧ್ಯೆ ಎತ್ತರದ ಹಾಗೂ ಭಯ ಪಡಿಸುವ ಸ್ಥಳದಲ್ಲಿ ನಿಂತು ಕೊಳ್ಳುವುದೇ ಒಂದು ರೀತಿಯ ಟ್ರಿಲ್ಲಿಂಗ್. ಆ ಬಂಟೆಯ ಮೇಲೆ ಫೋಟೋ, ಸೇಲ್ಫಿ ತೆಗೆದುಕೊಳ್ಳುವುದನ್ನು ನೋಡಲು ಸುಂದರವಾಗಿರುತ್ತೆ. ಇದೇ ಕಾರಣದಿಂದ ಈ ಬಂಡೆ ಸೆಲ್ಫಿ ಸ್ಟಾರ್ಟ್ ಅಂತಲೇ ಫೇಮಸ್ ಆಗಿದೆ. ಆದ್ರೆ ಈ ಬಂಡೆಯ ಮೇಲೆ ಹೋಗಿ ಫೋಟೋ ತೆಗೆಸಿಕೊಳ್ಳಲು ಗುಂಡಿಗೆ ಗಟ್ಟಿಯಾಗಿರಬೇಕು. ಸ್ವಲ್ಪ ಯಾಮಾರಿದ್ರೆ ಯಮಲೋಕವೆ ಕಾಣುತ್ತೆ. ಇದ್ರಿಂದ ಪ್ರವಾಸಿಗರು ಫೋಟೋ ತೆಗೆದುಕೊಳ್ಳಲೆಂದೇ ಇಲ್ಲಿಗೆ ಬರುತ್ತಾರೆ.
ಸೆಲ್ಫಿ ಸ್ಟಾರ್ಟ್ ಬಂಡೆಯ ಮೇಲೆ ಪ್ರವೇಶ ನಿಷೇಧ
ಇತ್ತೀಚಿಗೆ ಆವಲಬೆಟ್ಟಕ್ಕೆ ಬರುವ ಪ್ರವಾಸಿಗರು ಹೆಚ್ಚಾಗಿ ಕಿಷ್ಕಿಂದ ದಂತಿರುವ ಬಂಡೆಯ ಮೇಲೆ ಕೆಲವರು ಹೋಗಿ ಕೈ ಕಾಲು ಮುರಿದುಕೊಂಡ ಕಾರಣ ಚಿಕ್ಕಬಳ್ಳಾಪುರ ಅರಣ್ಯ ಇಲಾಖೆ ಪ್ರವಾಸಿಗರಿಗೆ ಪ್ರವೇಶ ನಿಷೇಧ ಮಾಡಿದೆ. ಬಂಡೆಯ ಸುತ್ತಲು ತಂತಿ ಬೇಲಿ ನಿರ್ಮಿಸಿದೆ. ಆದ್ರು ಪ್ರವಾಸಿಗರು ತಂತಿ ಬೆಲಿ ಕಿತ್ತು ಹಾಕಿ ಮನಸ್ಸೊ ಇಚ್ಚೆ ಬಂಡೆಯ ಮೇಲೆ ಫೋಟೋ ಶೂಟ್ ಮಾಡ್ತಿದ್ದಾರೆ. ಆದ್ರೆ ಬಂಡೆಯ ಕೆಳಗೆ ಯಾವುದೆ ಸುರಕ್ಷತೆ ಇಲ್ಲದಿದ್ರೂ ಪ್ರವಾಸಿಗರು ಅರಣ್ಯ ಇಲಾಖೆಯ ನಿಯಮ ಮೀರಿ ಅಕ್ರಮವಾಗಿ ಬಂಡೆಯ ಮೇಲೆ ಹೋಗಿ ಕ್ಯಾಮೆರಾಗೆ ಪೋಸ್ ಕೊಡ್ತಿದ್ದಾರೆ.
ಆವಲಬೆಟ್ಟದ ವಿಹಂಗಮ ನೋಟ ಬಲು ಚಂದ
ಬಂಡೆಯ ತುತ್ತ ತುದಿಯಲ್ಲಿ ನಿಂತರೆ ಕಣ್ಣ ಮುಂದೆ ಹಸಿರು ಕಾಡು, ಬೆಟ್ಟದ ಸಾಲಿನ ವಿಹಂಗಮ ದೃಶ್ಯ ಮನಮೋಹಕವಾಗಿ ಕಾಣುತ್ತದೆ. ಮತ್ತೊಂದೆಡೆ ತುಂತುರು ಹನಿ, ಮಂಜು ಮುಸುಕಿದ ವಾತಾವರಣ, ತಂಪಾದ ತಂಗಾಳಿ, ಬೆಳ್ಳಿ ಮೋಡಗಳ ಸುಂದರ ದೃಶ್ಯ ಕಾವ್ಯ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಆದ್ರೆ ಪ್ರಕೃತಿ ಎಷ್ಟು ಸುಂದರವೊ ಅಷ್ಟೇ ಅಪಾಯಕಾರಿ ಕೂಡ. ಹೀಗಾಗಿ ಆವಲಬೆಟ್ಟಕ್ಕೆ ಹೋದರೆ ಎಚ್ಚರಿಕೆಯಿಂದಿರೆ. ಇಲ್ಲದಿದ್ದರೆ ಅನಾಹುತ ಕಟ್ಟಿಟ್ಟ ಬುತ್ತಿ.
ವರದಿ: ಭೀಮಪ್ಪ ಪಾಟೀಲ ಟಿವಿ9
ಇದನ್ನೂ ಓದಿ: Nandi Hills: ನಂದಿ ಗಿರಿಧಾಮಕ್ಕೆ ತಾತ್ಕಾಲಿಕ ರಸ್ತೆ ನಿರ್ಮಾಣ; ಪ್ರವಾಸಿಗರಿಗೆ ಮುಂದುವರೆದ ನಿರ್ಬಂಧ
Published On - 1:51 pm, Tue, 7 September 21