ಚಿಕ್ಕಬಳ್ಳಾಪುರ, ಮಾ.11: ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ಕಣಕ್ಕಿಳಿಯುವ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಗೆ ಹೈಕಮಾಂಡ್ ಸಿದ್ಧತೆಗಳನ್ನು ನಡೆಸುತ್ತಿದೆ. ಈ ನಡುವೆ ಚಿಕ್ಕಬಳ್ಳಾಪುರ (Chikkaballapur) ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಕೆ ಸುಧಾಕರ್ (K Sudhakar), ಚುನಾವಣೆಯಲ್ಲಿ ತನ್ನನ್ನು ಗೆಲ್ಲಿಸಿ ವೇದನೆ ಕಡಿಮೆ ಮಾಡುವಂತೆ ಟಿಕೆಟ್ ಘೋಷಣೆಗೂ ಮುನ್ನ ಕ್ಷೇತ್ರದ ಜನರಿಗೆ ಮನವಿ ಮಾಡಿದ್ದಾರೆ. ಅಲ್ಲದೆ, ಮಾರ್ಚ್ 15 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಚಿಕ್ಕಬಳ್ಳಾಪುರದಲ್ಲಿ ಕಾರ್ಯಕರ್ತರ ಸಭೆ ನಡೆಸಿದ ನಂತರ ಮಾತನಾಡಿದ ಸುಧಾಕರ್, ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸುವುದರ ಮೂಲಕ ನನ್ನ ವೇದನೆ ಕಡಿಮೆ ಮಾಡಿ. ಇನ್ನೇನು ಎರಡು ಮೂರು ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಘೋಷಣೆ ಆಗುತ್ತದೆ. ಚಿಕ್ಕಬಳ್ಳಾಫುರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೇನೆ. ಈ ಸಲ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿಕೊಡಿ ಎಂಬ ಬೆಂಬಲಿಗರಿಗೆ ಮನವಿ ಮಾಡಿದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಅಖಾಡಕ್ಕಿಳಿದ ಎಸ್ಆರ್ ವಿಶ್ವನಾಥ್, ಕಾರು ರ್ಯಾಲಿ ಮೂಲಕ ಕ್ಷೇತ್ರದ ಜನತೆಗೆ ಮಗನ ಪರಿಚಯ
ಒಂದು ಅಗಳು ಅನ್ನದಾನ ಮಾಡದ ವ್ಯಕ್ತಿಯನ್ನು ಚಿಕ್ಕಬಳ್ಳಾಫುರದ ಜನ ಶಾಸಕರನ್ನಾಗಿ ಮಾಡಿದ್ದಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಪರೋಕ್ಷವಾಗಿ ಟೀಕಿಸಿದ ಸುಧಾಕರ್, ಹಗಲು ರಾತ್ರಿ ನಾನು ಕ್ಷೇತ್ರಕ್ಕಾಗಿ ದುಡಿದೆ. ಆದರೂ ನನ್ನನ್ನು ಸೋಲಿಸಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ರಾಜ್ಯದಲ್ಲಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರರ ಮೋದಿ ಅವರು ಮಾರ್ಚ್ 15 ರಂದು ಚಾಲನೆ ನೀಡಲಿದ್ದಾರೆ. ಅಂದು ಬೆಳಗ್ಗೆ 10 ಗಂಟೆಗೆ ಪ್ರಧಾನಿ ಚಿಕ್ಕಬಳ್ಳಾಪುರಕ್ಕೆ ಆಗಮಿಸಿ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:47 pm, Mon, 11 March 24