ಚಿಕ್ಕಬಳ್ಳಾಪುರ, ಫೆಬ್ರವರಿ 20: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಆಪ್ತ ಬಳಗದಲ್ಲೇ ಗುರುತಿಸಿಕೊಂಡಿದ್ದ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಎನ್ಎಚ್ ಶಿವಶಂಕರ ರೆಡ್ಡಿ (NH Shivashankar Reddy), ಈಗ ಪಕ್ಷದ ನಾಯಕತ್ವ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹೈಕಮಾಂಡ್ (Congress High Command) ವಿರುದ್ದ ಮುನಿಸಿಕೊಂಡಿದ್ದಾರೆ. ಹಳೆಯ ಸಿದ್ದರಾಮಯ್ಯನವರೇ ಬೇರೆ ಹೊಸ ಸಿದ್ದರಾಮಯ್ಯನವರೇ ಬೇರೆ ಎಂದು ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿ, ಹಿಂದಿನ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದ ಮಾಜಿ ಶಾಸಕ ಎನ್ಎಚ್ ಶಿವಶಂಕರ ರೆಡ್ಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೌರಿಬಿದನೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಉದ್ಯಮಿ ಕೆಎಚ್ ಪುಟ್ಟಸ್ವಾಮಿಗೌಡ ವಿರುದ್ದ ಸೋಲನುಭವಿಸಿದ್ದರು. ಸೋಲಿಗೆ ಕಾಂಗ್ರೆ ಮುಖಂಡರೇ ಕಾರಣ ಅಂತ ಆರೋಪ ಮಾಡಿದ್ದರು.
ಚುನಾವಣೆಯಲ್ಲಿ ಸೋತ ನಂತರ ಪಕ್ಷದಲ್ಲಿ ಹಾಗೂ ರಾಜ್ಯ ಸರ್ಕಾರದಲ್ಲಿ ಶಿವಶಂಕರ ರೆಡ್ಡಿಯವರನ್ನು ಯಾರು ಪರಿಗಣಿಸುತ್ತಿಲ್ಲ. ಬದಲಿಗೆ ಪಕ್ಷೇತರ ಶಾಸಕ ಪುಟ್ಟಸ್ವಾಮಿಗೌಡಗೆ ಮಾನ್ಯತೆ ನೀಡುತ್ತಿದ್ದಾರೆ ಎಂದು ಅವರು ರೆಬಲ್ ಆಗಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹೈಕಮಾಂಡ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯ ಸೋಲಿನ ನಂತರ ಇದೀಗ ಶಿವಶಂಕರ ರೆಡ್ಡಿ ಮುಂಬರುವ ಲೋಕಸಭೆ ಚುನಾವಣೆಗೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಟಿಕೆಟ್ ಕೇಳಿದ್ದಾರೆ ಎನ್ನಲಾಗಿದೆ. ಆದರೆ, ಅದಕ್ಕೂ ಪಕ್ಷದ ಹೈಕಮಾಂಡ್ ಸೊಪ್ಪು ಹಾಕಿಲ್ಲ. ಇದರಿಂದ ಹಳೆ ಸಿದ್ದರಾಮಯ್ಯನವರೇ ಬೇರೆ ಹೊಸ ಸಿದ್ದರಾಮಯ್ಯನವರೇ ಬೇರೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ನಾಲ್ಕು ಬಾರಿ ಶಾಸಕರಾಗಿ ಒಂದು ಬಾರಿ ಸಚಿವರಾಗಿದ್ದ ಎನ್ಎಚ್ ಶಿವಶಂಕರ ರೆಡ್ಡಿ, ಈಗ ಪಕ್ಷ ನಿಷ್ಠೆ ಮರೆತು ಪಕ್ಷ ಹಾಗೂ ನಾಯಕರ ವಿರುದ್ಧ ಮಾತನಾಡುವುದರ ಹಿಂದೆ ಬಿಜೆಪಿಯ ಚಾಣಕ್ಯ ನಡೆ ಇದೆ ಎನ್ನಲಾಗಿದೆ. ಬಿಜೆಪಿ ನಾಯಕರು ಶಿವಶಂಕರ ರೆಡ್ಡಿಗೆ ಗಾಳ ಹಾಕಿರುವ ಬಗ್ಗೆ ವದಂತಿ ಹಬ್ಬಿದೆ. ಆದರೆ ಬಿಜೆಪಿ ಸೇರುವ ಬಗ್ಗೆ ಶಿವಶಂಕರ ರೆಡ್ಡಿ ಇನ್ನೂ ಏನೂ ಹೇಳಿಕೆ ನೀಡಿಲ್ಲ.
ಇದನ್ನೂ ಓದಿ: ಬಿಜೆಪಿಯವರು ಹೇಳುತ್ತಿರುವುದು ಸುಳ್ಳು, ಬಿಜೆಪಿ ಸುಳ್ಳಿನ ಪಕ್ಷ: ವಿಧಾನಸಭೆಯಲ್ಲೇ ಸಿಎಂ ಸಿದ್ದರಾಮಯ್ಯ ಗುಡುಗು
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕಾಂಗ್ರೆಸ್, ಬಿಜೆಪಿಗಳಲ್ಲಿ ಆಕಾಂಕ್ಷಿಗಳ ಅಸಮಾಧಾನ ಹೆಚ್ಚಾಗತೊಡಗಿದೆ. ಕೆಲವು ಮಂದಿ ಕಾಂಗ್ರೆಸ್ ನಾಯಕರು ಬಿಜೆಪಿಯತ್ತ ಚಿತ್ತ ನೆಟ್ಟರೆ ಇನ್ನು ಕೆಲವು ಮಂದಿ ಬಿಜೆಪಿ ನಾಯಕರು ಕಾಂಗ್ರೆಸ್ನತ್ತ ಮುಖ ಮಾಡುತ್ತಿದ್ದಾರೆ. ಯಶವಂತಪುರ ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ್ ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ನಾಯಕರ ಜತೆಗೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ