ಬಿಜೆಪಿಯವರು ಹೇಳುತ್ತಿರುವುದು ಸುಳ್ಳು, ಬಿಜೆಪಿ ಸುಳ್ಳಿನ ಪಕ್ಷ: ವಿಧಾನಸಭೆಯಲ್ಲೇ ಸಿಎಂ ಸಿದ್ದರಾಮಯ್ಯ ಗುಡುಗು
Karnataka Budget Session: ಪ್ರತಿಪಕ್ಷ ಬಿಜೆಪಿ ವಿರುದ್ಧ ವಿಧಾನಸಭೆಯಲ್ಲೇ ಗುಡುಗಿನ ಸಿಎಂ ಸಿದ್ದರಾಮಯ್ಯ, ವಿಪಕ್ಷದವರು ಹೇಳುವುದೆಲ್ಲ ಸುಳ್ಳು. ಅದು ಸುಳ್ಳಿನ ಫ್ಯಾಕ್ಟರಿ ಎಂದೆಲ್ಲಾ ಹರಿಹಾಯ್ದರು. ವಿಪಕ್ಷ ನಾಯಕ ಆರ್ ಅಶೋಕ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕೆಗಳಿಗೆ ತಮ್ಮ ಎಂದಿನ ಶೈಲಿಯಲ್ಲೇ ಖಡಕ್ ಆಗಿ ಚಾಟಿ ಬೀಸಿದರು.
ಬೆಂಗಳೂರು, ಫೆಬ್ರವರಿ 20: ಬಿಜೆಪಿಯವರು (BJP) ಹೇಳುತ್ತಿರುವುದು ಸುಳ್ಳು ಎಂಬುದು ಜನರಿಗೂ ಅರ್ಥವಾಗಿದೆ. ಬಿಜೆಪಿ ಸುಳ್ಳಿನ ಪಕ್ಷ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಗುಡುಗಿದರು. ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ (Budget Session) ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸಿ ಮಂಗಳವಾರ ಮಾತನಾಡಿದ ಅವರು, ನಾವು ರಾಜ್ಯಪಾಲರಿಂದ ಸುಳ್ಳು ಹೇಳಿಸಿದ್ದೇವೆ ಎಂಬುದಾಗಿ ಬಿಜೆಪಿಯವರು ಆರೋಪ ಮಾಡಿದ್ದಾರೆ. ರಾಜ್ಯಪಾಲರ ಭಾಷಣ ನೀರಸ ಭಾಷಣ ಎಂದು ಆರೋಪಿಸಿದ್ದಾರೆ. ರಾಜ್ಯಪಾಲರು ಒಳ್ಳೆಯವರು. ಅವರ ಬಾಯಿಂದ ನೀವು ಏನೇನೋ ಹೇಳಿಸಿದ್ದೀರಿ ಎಂದು ಮಾಜಿ ಸಿಎಂ ಬೊಮ್ಮಾಯಿ ಆರೋಪಿಸಿದ್ದಾರೆ. ಆದರೆ, ರಾಜ್ಯಪಾಲರು ಸತ್ಯವನ್ನೇ ಹೇಳಿದ್ದಾರೆ, ಅವರು ಸುಳ್ಳು ಹೇಳಿಲ್ಲ ಎಂದು ಪ್ರತಿಪಾದಿಸಿದರು.
ಬಿಜೆಪಿಯವರು ಹೇಳುತ್ತಿರುವುದು ಸುಳ್ಳು ಅಂತ ಜನರಿಗೆ ಅರ್ಥವಾಗಿದೆ. ಬಿಜೆಪಿ ಸುಳ್ಳಿನ ಪಕ್ಷ ಎಂದು ಸಿದ್ದರಾಮಯ್ಯ ಟೀಕಿಸಿದರು. ಇದೇ ವೇಳೆ, ಮಧ್ಯ ಪ್ರವೇಶಿಸಿದ ಬೊಮ್ಮಾಯಿ, ನಮ್ಮದು ಸುಳ್ಳಿನ ಪಕ್ಷವಾದ್ರೆ, ಕಾಂಗ್ರೆಸ್ ಏನು ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು ನಿಮ್ಮನ್ನು ಕೆಣಕಲು ಹೋಗಲ್ಲ. ನಾವೇನು ಅಂತ ಜನ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಎಂದರು.
ಕೇಂದ್ರ ಸರ್ಕಾರಕ್ಕೆ 17 ಪತ್ರಗಳನ್ನು ಬರೆದಿದ್ದೆವು. ಅದರಲ್ಲಿ ಒಂದು ಪತ್ರಕ್ಕೆ ಮಾತ್ರ ಅಮಿತ್ ಶಾ, ‘ನಿಮ್ಮ ಪತ್ರ ತಲುಪಿದೆ’ ಎಂದು ಉತ್ತರಿಸಿದ್ದರು. ಬೇರೆ ಯಾವ ಪತ್ರಗಳಿಗೂ ಉತ್ತರ ನೀಡಿಲ್ಲ ಎಂದು ಸಿಎಂ ಹೇಳಿದರು.
ಜನ ತೀರ್ಪು ಕೊಟ್ಟಾಗಿದೆ. ಬಿಜೆಪಿಯವರನ್ನು ಆ ಕಡೆ (ವಿರೋಧ ಪಕ್ಷ ಸ್ಥಾನದಲ್ಲಿ) ಕೂರಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದಾಗ, ಕಳೆದ ಸಲ ಜನ ನಿಮ್ಮನ್ನು ವಿಪಕ್ಷ ಸ್ಥಾನದಲ್ಲಿ ಕೂರಿಸಿರಲಿಲ್ವಾ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನಿಸಿದರು. ಕೂಡಲೇ ಸಿದ್ದರಾಮಯ್ಯ, ಅದನ್ನು ನಾನು ಒಪ್ಕೊಂಡಿದ್ದೇನೆ. 2018 ರಲ್ಲಿ ಜನರ ತೀರ್ಪು ತಲೆಬಾಗಿ ಒಪ್ಕೊಂಡಿದ್ದೇವೆ, ಈಗ ನೀವೂ ಒಪ್ಪಿಕೊಳ್ಳಿ ಎಂದರು.
28 ಸ್ಥಾನ ಗೆಲ್ಲುತ್ತೇವೆ, ಮೋದಿ ಮತ್ತೆ ಪ್ರಧಾನಿ ಆಗುತ್ತಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಧ್ಯ ಪ್ರವೇಶಿಸಿ ಹೇಳಿದರು. ಇದಕ್ಕೆ ತಿರುಗೇಟು ನೀಡಿದ ಸಿಎಂ, ನಿಮಗೆ (ಬಿಜೆಪಿ) ಲೋಕಸಭೆಗೆ ಅಭ್ಯರ್ಥಿಗಳೇ ಇಲ್ಲ. ಕಳೆದ ಸಲ ಬೊಮ್ಮಾಯಿ ಮತ್ತೆ ಸಿಎಂ ಆಗುತ್ತಾರೆ ಎಂದು ಹೇಳಿದ್ರಿ, ರ್ಯಾಲಿ, ಸಮಾವೇಶ ಎಲ್ಲ ಮಾಡಿದ್ರಿ, ಆಮೇಲೆ ಏನಾಯ್ತು ಎಂದು ಪ್ರಶ್ನಿಸಿದರು.
ಅನುದಾನ ತಾರತಮ್ಯ: ಸಿದ್ದರಾಮಯ್ಯ ಆರೋಪ
ವಿಧಾನಸಭೆಯಲ್ಲಿ ಅನುದಾನ ತಾರತಮ್ಯ ಬಗ್ಗೆ ಪ್ರಸ್ತಾಪ ಮಾಡಿದ ಸಿಎಂ, ನಾವು 4.30 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ತೆರಿಗೆ ಕೊಟ್ಟಿದ್ದೇವೆ. 37,257 ಕೋಟಿ ಮಾತ್ರ ನಮಗೆ ತೆರಿಗೆ ಪಾಲು ಬರುತ್ತಿದೆ. 13,500 ಕೋಟಿ ರೂಪಾಯಿ ಕೇಂದ್ರದ ಯೋಜನೆಗಳಿಗೆ ಬರುತ್ತಿದೆ. ಒಟ್ಟು 50,257 ಕೋಟಿ ರೂ. ಮಾತ್ರ ನಮಗೆ ಸಿಗುತ್ತಿದೆ ಎಂದು ಹೇಳಿದರು. ಇದೇ ವೇಳೆ ಅಂಕಿ ಅಂಶ ಬಹಿರಂಗ ಪಡಿಸಿ ಎಂದು ಬಿಜೆಪಿ ಶಾಸಕರು ಆಗ್ರಹಿಸಿದರು. ಇದಕ್ಕುತ್ತರಿಸಿದ ಸಿದ್ದರಾಮಯ್ಯ, ನಾನು ತಪ್ಪು ಹೇಳಿಲ್ಲ, ತಪ್ಪು ಹೇಳಿದ್ರೆ ತೆಗೆಸಿ ಎಂದು ಪ್ರತಿ ಸವಾಲು ಹಾಕಿದರು.
ಇದನ್ನೂ ಓದಿ: ಫಲಾನುಭವಿಗಳಿಗೆ ತಲುಪದ ಮಾಸಾಶನ: ಪಿಂಚಣಿ ನೀಡಲೂ ಹಣವಿಲ್ಲದ ಶೋಚನೀಯ ಪರಿಸ್ಥಿತಿಯಲ್ಲಿದೆ ಸರ್ಕಾರ; ಆರ್ ಅಶೋಕ್
ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ದೇಶವಿಭಜನೆ ಹೇಳಿಕೆ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಮೋದಿ ಗುಜರಾತ್ ಸಿಎಂ ಆಗಿದ್ದಾಗ ಏನು ಹೇಳಿದ್ದರು ಎಂದು ಪ್ರಶ್ನಿಸಿದರು. ಇದೇ ವೇಳೆ, ವಿಧಾನಸಭೆಯಲ್ಲಿ ಆಡಳಿತ-ವಿಪಕ್ಷ ಸದಸ್ಯರ ಗದ್ದಲ ಜೋರಾಯಿತು. ಮೋದಿ ಅವರ ಅಂದಿನ ಹೇಳಿಕೆಯನ್ನು ಸಿದ್ದರಾಮಯ್ಯ ಓದಿ ಹೇಳಿದರು. ನಮ್ಮ ಸಂಸದರಿಗೆ ಧೈರ್ಯ ಇಲ್ವಾ? ಮೋದಿ ಬಳಿ ಹೋಗಿ ಕೇಳುವುದಕ್ಕೆ ಧೈರ್ಯ ಇಲ್ವಾ ಎಂದು ಪ್ರಶ್ನಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:45 am, Tue, 20 February 24