ಚಿಕ್ಕಬಳ್ಳಾಪುರ, ಜೂನ್ 07: ಗೌರಿಬಿದನೂರು (Gauribidanur) ತಾಲೂಕಿನ ವಾಟದಹೊಸಹಳ್ಳಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕರ್ನಾಟಕ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL)ನ ಇಬ್ಬರು ಸಿಬ್ಬಂದಿ ಮತ್ತು ಬೆಸ್ಕಾಂನ (BESCOM) ಓರ್ವ ಲೈನ್ ಮ್ಯಾನ್ ಮೃತಪಟ್ಟಿದ್ದಾರೆ. ಕೆಪಿಟಿಸಿಎಲ್ ಸಿಬ್ಬಂದಿ ವೇಣಗೋಪಾಲ್ (34) ಹಾಗೂ ಶ್ರೀಧರ್ (35) ಮತ್ತು ಬೆಸ್ಕಾಂನ ಲೈನ್ ಮ್ಯಾನ್ ಮಂಜಪ್ಪ (35) ಮೃತರು. ಓರ್ವ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಾಲ್ವರು ಬ್ರಿಜಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ವಾಟದಹೊಸಹಳ್ಳಿ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಾಲುವೆಯಲ್ಲಿ ಉರುಳಿ ಬಿದ್ದಿದೆ. ಕಳೆದ ರಾತ್ರಿಯೇ ಅಪಘಾತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಪೊಲೀಸರ ಭೇಟಿ ಪರಿಶೀಲನೆ ನಡೆಸಿ, ಮಾಹಿತಿ ಕಲೆ ಹಾಕುತ್ತಿದ್ದಾರೆ.
ವಿಜಯನಗರ: ಖಾಸಗಿ ಬಸ್ ಮತ್ತು ಲಾರಿ ಮಧ್ಯೆ ಅಪಘಾತ ಸಂಭವಿಸಿದ್ದು, ಓರ್ವ ಮೃತಪಟ್ಟಿದ್ದಾನೆ. ಹಲವರಿಗೆ ಗಾಯಗಳಾಗಿವೆ. ಹೊಸಪೇಟೆ ತಾಲೂಕಿನ ಜಂಬಯ್ಯನ ಕೆರೆ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಘಟನೆ ನಡೆದಿದೆ. ಖಾಸಗಿ ಬಸ್ ಬೆಂಗಳೂರಿನಿಂದ ಹೊಸಪೇಟೆ ಕಡೆಗೆ ಬರುತ್ತಿತ್ತು. ಲಾರಿ ಹೊಸಪೇಟೆ ಕಡೆಯಿಂದ ಕೂಡ್ಲಿಗಿ ಕಡೆ ಹೊರಟಿತ್ತು. ಈ ವೇಳೆ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮರಿಯಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿದ್ಯುತ್ ತಂತಿ ತುಳಿದು ಬಾಲಕಿ ಮೃತಪಟ್ಟಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾತ್ರಿಕಾಯನಹಟ್ಟಿಯಲ್ಲಿ ನಡೆದಿದೆ. ಎರಡನೇ ತರಗತಿ ಓದುತ್ತಿದ್ದ 8 ವರ್ಷದ ಬಾಲಕಿ ತುಳಸಿ ಮೃತ ದುರ್ದೈವಿ. ಕಾನಾಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Published On - 8:32 am, Fri, 7 June 24