ಚಿಕ್ಕಬಳ್ಳಾಪುರ: ಮಸೀದಿ ಕೊಠಡಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ, ಮೌಲ್ವಿ ತಂದೆಯಿಂದಲೇ ಕೃತ್ಯ
ಬೆಳಗಾವಿಯಲ್ಲಿ ಎರಡೆರಡು ಸಾಮೂಹಿಕ ಅತ್ಯಾಚಾರ ಪ್ರಕರಣಗಳು ವರದಿಯಾದ ಬೆನ್ನಲ್ಲೇ ಇತ್ತ ಚಿಕ್ಕಬಳ್ಳಾಪುರದಲ್ಲೂ ಬಾಲಕಿ ಮೇಲೆ ಅತ್ಯಾಚಾರ ಎಸಗಲಾಗಿದೆ. ಮಸೀದಿಯೊಂದರ ಮೌಲ್ವಿಯ ತಂದೆಯೇ ಮತ್ತೊಂದು ಮಸೀದಿಯ ಕೊಠಡಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಚಾಕೊಲೇಟ್ ಕೊಡಿಸುವುದಾಗಿ ಪುಸಲಾಯಿಸಿ ಕರೆದೊಯ್ದು ಕೃತ್ಯ ಎಸಗಿದಾತ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.

ಚಿಕ್ಕಬಳ್ಳಾಪುರ, ಜೂನ್ 3: ಆರು ವರ್ಷ ವಯಸ್ಸಿನ ಬಾಲಕಿ ಮೇಲೆ 55 ವರ್ಷದ ವ್ಯಕ್ತಿ ಅತ್ಯಾಚಾರ ಎಸಗಿರುವ ಆರೋಪ ಚಿಕ್ಕಬಳ್ಳಾಪುರದಲ್ಲಿ ಕೇಳಿಬಂದಿದೆ. ಚಿಕ್ಕಬಳ್ಳಾಪುರ (Chikkaballapur) ನಗರದ ಶಮ್ಸ್ ಮಸೀದಿ ಕೊಠಡಿಯಲ್ಲಿ ಅತ್ಯಾಚಾರ ಎಸಗಲಾಗಿದೆ ಎಂದು ಸಂತ್ರಸ್ತೆ ಬಾಲಕಿಯ ತಾಯಿ ಆರೋಪಿಸಿದ್ದು, ಅವರು ನೀಡಿದ ದೂರಿನ ಆಧಾರದಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಮಹಪ್ಯೂಸ್ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಯು ಬೇರೊಂದು ಮಸೀದಿಯಲ್ಲಿ ಮೌಲ್ವಿಯಾಗಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಯ ತಂದೆಯಾಗಿದ್ದಾನೆ.
ಮಸೀದಿ ಕೊಠಡಿ ದುರುಪಯೋಗಪಡಿಸಿಕೊಂಡು ಕೃತ್ಯ
ಆರೋಪಿಯ ಮಗ ಬೇರೊಂದು ಮಸೀದಿಯಲ್ಲಿ ಮೌಲ್ವಿಯಾಗಿ ಕೆಲಸ ಮಾಡುತ್ತಿದ್ದುದರಿಂದ ಮೌಲ್ವಿಯ ಆಶ್ರಯಕ್ಕೆ ಮಸಿದಿಯ ಕೊಠಡಿಯನ್ನು ಜಮಾತ್ ನೀಡಿತ್ತು. ಅದೇ ಕೊಠಡಿಯನ್ನು ಆರೋಪಿ ದುರುಪಯೋಗಪಡಿಸಿಕೊಂಡಿದ್ದಾನೆ. ಚಾಕೊಲೇಟ್ ಕೊಡಿಸುವ ಆಮಿಷವೊಡ್ಡಿ ಬಾಲಕಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಆರೋಪಿ ಮಹಪ್ಯೂಸ್ ಮೂಲತಃ ಉತ್ತರ ಪ್ರದೇಶ ಮೂಲದವನಾಗಿದ್ದಾನೆ. 20 ವರ್ಷಗಳ ಹಿಂದೆ ಚಿಕ್ಕಬಳ್ಳಾಪುರಕ್ಕೆ ಬಂದು ವಾಸ್ತವ್ಯ ಹೂಡಿದ್ದ. ಬೀದಿ ಬದಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದಾನೆ.
ಮೌಲ್ವಿಯನ್ನು ತರಾಟೆಗೆ ತೆಗದುಕೊಂಡ ಸ್ಥಳೀಯರು
ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಮಸೀದಿಯ ಮೌಲ್ವಿ ಸುಹೇಬ್ನನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಮೌಲ್ವಿಯ ಆಶ್ರಯಕ್ಕೆಂದು ಪಡೆದ ಕೊಠಡಿಯನ್ನು ತಂದೆಗೆ ಯಾಕೆ ನೀಡಿದ್ದು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಮತ್ತೊಂದೆಡೆ, ಸಂತ್ರಸ್ತೆ ಬಾಲಕಿಯ ತಾಯಿ ಆರೋಪಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಬೆಳಗಾವಿ: 17 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ, ಸ್ವಾಮೀಜಿ ಅರೆಸ್ಟ್
ಇತ್ತೀಚೆಗೆ ರಾಜ್ಯದಲ್ಲಿ ಅತ್ಯಾಚಾರದಂಥ ಕೃತ್ಯಗಳು ಹೆಚ್ಚಾಗುತ್ತಿರುವುದು ಬೆಳಕಿಗೆ ಬರುತ್ತಿದೆ. ಬೆಳಗಾವಿಯ ಹೊರವಲಯದ ರೆಸಾರ್ಟೊಂದರಲ್ಲಿ ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್ ಎಸಗಿದ ಘಟನೆ ಬಗ್ಗೆ ಕೆಲವು ದಿನಗಳ ಹಿಂದೆ ವರದಿಯಾಗಿತ್ತು. ಅದರ ಬೆನ್ನಲ್ಲೇ, ಅಪ್ರಾಪ್ತೆ ಮೇಲೆ ಆರು ಜನ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಬೆಳಗಾವಿ ನಗರದ ಹೊರ ವಲಯದ ಕಾಕತಿ ಠಾಣಾ ವ್ಯಾಪ್ತಿಯ ಗುಡ್ಡದಲ್ಲಿ ನಡೆದಿತ್ತು. ಇದೀಗ ಚಿಕ್ಕಬಳ್ಳಾಪುರದ ಮಸೀದಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:11 am, Tue, 3 June 25








