ಸರ್ಕಾರಿ ಕಾಲೇಜಿನಲ್ಲಿ ಪದವಿಗೆ ದಾಖಲಾಗುವಂತೆ ವಿದ್ಯಾರ್ಥಿಗಳ ಮನೆ-ಮನೆಗೆ ತೆರಳಿ ಉಪನ್ಯಾಸಕರ ಮನವಿ
ಸರ್ಕಾರಿ ಶಾಲೆ, ಕಾಲೇಜು ಅಂದರೆ ವಿದ್ಯಾರ್ಥಿಗಳು ಮತ್ತು ಪೋಷಕರು ಮೂಗು ಮುರಿಯುತ್ತಾರೆ. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಅದೆಷ್ಟೋ ಶಾಲೆಗಳು ದಾಖಲಾತಿ ಇಲ್ಲದೆ ಮುಚ್ಚುತ್ತಿವೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣದಲ್ಲಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ದಾಖಲಾತಿ ಇಲ್ಲ. ಹೀಗಾಗಿ ಉಪನ್ಯಾಸಕರು ಏನು ಮಾಡಿದರು? ಈ ಸುದ್ದಿ ಓದಿ
ಚಿಕ್ಕಬಳ್ಳಾಪುರ, ಮೇ 29: ಪಿಯುಸಿ (PUC) ಉತ್ತೀರ್ಣರಾದ ವಿದ್ಯಾರ್ಥಿಗಳು ಸರ್ಕಾರಿ ಪದವಿ ಕಾಲೇಜುಗಳಲ್ಲಿ (Government Degree College) ಪ್ರವೇಶ ಪಡೆಯುವುದರ ಬದಲು ಲಕ್ಷಾಂತರ ರೂಪಾಯಿ ಡೊನೇಷನ್ ನೀಡಿ, ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಮುಗಿಬಿದ್ದಿದ್ದಾರೆ. ಇದರಿಂದ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯಲ್ಲಿನ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕರುಗಳು ಪಿಯುಸಿ ಪಾಸಾದ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ, ನಮ್ಮ ಸರ್ಕಾರಿ ಕಾಲೇಜಿನಲ್ಲಿ ದಾಖಲಾಗುವಂತೆ ಅಂಗಲಾಚುತ್ತಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣದಲ್ಲಿ ಸುಸಜ್ಜಿತವಾದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಇದೆ. ಕಾಲೇಜಿನಲ್ಲಿ ಪ್ರತಿಭಾವಂತ ನುರಿತ ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಅನುಭವಿ ಉಪನ್ಯಾಸಕರುಗಳು ಇದ್ದಾರೆ. ಆದರೂ ಸ್ವತಃ ಗುಡಿಬಂಡೆ ಪಟ್ಟಣದ ವಿದ್ಯಾರ್ಥಿಗಳು ಇಲ್ಲಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ಬರುತ್ತಿಲ್ಲ. ಪ್ರವೇಶ ಪಡೆಯುತ್ತಿಲ್ಲ. ಲಕ್ಷಾಂತರ ರೂಪಾಯಿ ಶುಲ್ಕ ನೀಡಿ, ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಮುಂದಾಗಿದ್ದಾರೆ. ಇದರಿಂದ ಎಚ್ಚರಗೊಂಡ ಉಪನ್ಯಾಸಕರುಗಳು ಪಿಯುಸಿ ಪಾಸಾದ ವಿದ್ಯಾರ್ಥಿಗಳ ಮನೆ-ಮನೆಗೆ ಭೇಟಿ ನೀಡಿ ತಮ್ಮ ಸರ್ಕಾರಿ ಕಾಲೇಜಿನಲ್ಲಿ ಪ್ರವೇಶ ಪಡೆಯುವಂತೆ ದುಂಬಾಲು ಬಿದ್ದಿದ್ದಾರೆ.
ಇದನ್ನೂ ಓದಿ: ಸೋರುತ್ತಿವೆ ಧಾರವಾಡ ಜಿಲ್ಲೆಯ 469 ಸರ್ಕಾರಿ ಶಾಲೆಗಳ ತರಗತಿಗಳು
ಇನ್ನು ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿದರೆ, ಪ್ರವೇಶ ಪಡೆದರೆ ಶುಲ್ಕವೂ ಕಡಿಮೆ, ಒತ್ತಡವೂ ಕಡಿಮೆ, ಸರ್ಕಾರಿ ಸವಲತ್ತುಗಳು ಹೆಚ್ಚಾಗಿವೆ. ಪ್ರವೇಶ ಶುಲ್ಕವಿಲ್ಲದಿದ್ದರೂ ನಾವೇ ದಾನಿಗಳ ಮೂಲಕ ಪಡೆದುಕೊಂಡು ಪ್ರವೇಶ ಕಲ್ಪಿಸುತ್ತೇವೆ. ಖಾಸಗಿ ಕಾಲೇಜು ಬದಲು ಸರ್ಕಾರಿ ಕಾಲೇಜು ಉಳಿಸುವಂತೆ ಉಪನ್ಯಾಸಕರು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಲ್ಲಿ ಮನವಿ ಮಾಡಿದ್ದಾರೆ.
ಸರ್ಕಾರಿ ಕಾಲೇಜುಗಳಲ್ಲಿ ಪ್ರತಿಭಾವಂತ ಉಪನ್ಯಾಸಕರುಗಳಿದ್ದರೂ, ಉಪನ್ಯಾಸಕರುಗಳ ಉದಾಸೀನತೆಯೋ, ಮೂಲಭೂತ ಸೌಕರ್ಯಗಳ ಕೊರೆತೆಯಿಂದಲೋ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಸರ್ಕಾರಿ ಕಾಲೇಜುಗಳೆಂದರೆ ಮೂಗು ಮುರಿಯುತ್ತಿದ್ದಾರೆ. ಕೊನೆಗೂ ಎಚ್ಚೆತ್ತಿರುವ ಗುಡಿಬಂಡೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕರುಗಳು ವಿದ್ಯಾರ್ಥಿಗಳ ಮನೆ-ಮನೆಗೆ ಹೋಗಿ ಪ್ರವೇಶ ಆಂದೋಲನ ಮಾಡಿರುವುದು ಶ್ಲಾಘನೀಯ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ