Nandi Hills: ಧಾರಾಕಾರ ಮಳೆಗೆ ಗಢ ಗಢ ನಡುಗಿದ ನಂದಿಗಿರಿಧಾಮ, ರಸ್ತೆ ಬಳಿ ಭೂ ಕುಸಿತ!

ಚಿಕ್ಕಬಳ್ಳಾಪುರ ತಾಲೂಕಿನ ಜಗದ್ವಿಖ್ಯಾತ ನಂದಿ ಗಿರಿಧಾಮದ ರಸ್ತೆಯಲ್ಲಿ ಭೂ ಕುಸಿತ ಆಗಿದೆ. ಗಿರಿಧಾಮದ 26ನೆ ತಿರುವು ನೀರಗುಂಡಿ ಬಳಿ ಘಟನೆ ನಡೆದಿದೆ.

Nandi Hills: ಧಾರಾಕಾರ ಮಳೆಗೆ ಗಢ ಗಢ ನಡುಗಿದ ನಂದಿಗಿರಿಧಾಮ, ರಸ್ತೆ ಬಳಿ ಭೂ ಕುಸಿತ!
ನಂದಿಗಿರಿಧಾಮದ ಮೇಲೆ ರಸ್ತೆ ಬಳಿ ಭೂ ಕುಸಿತ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Sep 09, 2022 | 4:45 PM

ಚಿಕ್ಕಬಳ್ಳಾಪುರ:  ಇತ್ತೀಚೆಗೆ ಸುರಿದ ಧಾರಾಕರ ಮಳೆ ಕೇವಲ ನಗರವಾಸಿಗಳು ಅಷ್ಟೇ ಅಲ್ಲದೆ ಬೆಟ್ಟ ಗುಡ್ಡಗಳಿಗೂ ಕಾಟ ಕೊಟ್ಟಿದೆ. ಅದರಲ್ಲೂ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ ಪ್ರೇಮಿಗಳ ನೆಲೆಬೀಡು, ವೃದ್ದರ ವಿಶ್ರಾಂತಿ ತಾಣ, ಪ್ರಕೃತಿ ಸೊಬಗಿಗೆ ವಿಶ್ವವಿಖ್ಯಾತವಾಗಿರುವ ನಂದಿಗಿರಿಧಾಮಕ್ಕೆ ಮಳೆಯ ರುದ್ರನರ್ತನದ ದರ್ಶನವಾಗಿದೆ. ಧಾರಾಕರ ಮಳೆಯಿಂದ ಕಳೆದ ನಾಲ್ಕೈದು ದಿನಗಳ ಹಿಂದೆ ನಂದಿಗಿರಿಧಾಮದಲ್ಲಿ ಬೆಟ್ಟ ಕುಸಿತವಾಗಿ ಆತಂಕ ಎದುರಾಗಿತ್ತು. ಗಿರಿಧಾಮದ ಸುಲ್ತಾನ ಪೇಟೆ ಭಾಗದ ಕಡೆ ಶ್ರೀ ವೀರಭದ್ರ ದೇವಸ್ಥಾನದ ಬಳಿ ಬೆಟ್ಟ ಕುಸಿದು ದೇವಸ್ಥಾನದ ಬಳಿ ಇದ್ದ ಶೌಚಾಲಯ ಸಹ ಕೊಚ್ಚಿ ಹೋಗಿತ್ತು. ಇದ್ರಿಂದ ದೇವಸ್ಥಾನ ಹಾಗೂ ದೇವರ ಭಕ್ತರಿಗೂ, ಗಿರಿಧಾಮಕ್ಕೆ ಬರುವ ಪ್ರವಾಸಿಗರಿಗೂ ಆತಂಕ ವ್ಯಕ್ತವಾಗಿತ್ತು. ಮತ್ತೊಂದೆಡೆ ಚಿಕ್ಕಬಳ್ಳಾಪುರ ದೊಡ್ಡಬಳ್ಳಾಪುರ ಸಂಪರ್ಕ ಕಲ್ಪಿಸುವ ಕಣಿವೆ ಬಸವಣ್ಣ ದೇವಸ್ಥಾನದ ಹಿಂದೆಯೂ ಬೆಟ್ಟ ಕುಸಿದು ಆತಂಕ ಸೃಷ್ಟಿಯಾಗಿತ್ತು. ಬೆಟ್ಟದಲ್ಲಿ ಇತ್ತಿಚಿಗೆ ನಡೆದ ಬೆಟ್ಟ ಕುಸಿತ ಪ್ರಕರಣಗಳ ಸುದ್ದಿ ಮರೆಮಾಚುವ ಮುನ್ನ ಇಂದು ಮತ್ತೆ ಗಿರಿಧಾಮದಲ್ಲಿ ಬೆಟ್ಟ ಕುಸಿತವಾಗಿ… ಆತಂಕ ಸೃಷ್ಟಿಯಾಗಿದೆ.

ಇಂದು ಮತ್ತೆ ಕುಸಿದ ನಂದಿಗಿರಿಧಾಮ:

ಇಂದು ಬೆಳಗ್ಗೆಯೇ ಗಿರಿಧಾಮದ 26 ನೇ ತಿರುವು, ಮಿರ್ಜಾ ವೃತ್ತದ ಬಳಿ ಇರುವ ನಿರಗುಂಡಿ ಹತ್ತಿರ ಬೆಟ್ಟ ಕುಸಿದಿದೆ. ಬೆಟ್ಟದ ಕ್ರಾಸ್ ನಿಂದ ಗಿರಿಧಾಮದ ತುದಿಗೆ ಸಂಪರ್ಕ ಕಲ್ಪಿಸುವ ದಾರಿಯಲ್ಲಿ ಬೆಟ್ಟ ಕುಸಿದಿದೆ. ಬೃಹತ್ ಗಾತ್ರದ ಬಂಡೆ ಹಾಗೂ ಅದರ ಜೊತೆ ಮಣ್ಣಿನ ರಾಶಿ ಇದ್ದಕ್ಕಿದ್ದ ಹಾಗೆ ರಸ್ತೆಗೆ ಬಿದ್ದಿದೆ. ಇದ್ರಿಂದ ಕೆಲಕಾಲ ಗಿರಿಧಾಮದ ರಸ್ತೆ ಬಂದ್ ಆಗಿ ಪ್ರವಾಸಿಗರು ಆತಂಕಕ್ಕೆ ಸಿಲುಕಿದ್ರು. ನಂತರ ಗಿರಿಧಾಮದಲ್ಲಿರುವ ಪೊಲೀಸ್ ಸಿಬ್ಬಂದಿ ಲೋಕೋಪಯೋಗಿ ಇಲಾಖೆ ಗಮನಕ್ಕೆ ತಂದಿದ್ದೆ ತಂಡ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸಂತೋಷ ಕುಮಾರ್ ಹಾಗೂ ಮತ್ತವರ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಜೆ.ಸಿ.ಬಿ ಯಿಂದ ಕಲ್ಲು, ಬಂಡೆಗಳು ಹಾಗೂ ಮಣ್ಣನ್ನು ರಸ್ತೆಯಿಂದ ತೆಗೆದು ರಸ್ತೆ ಸರಿಪಡಿಸಿದ್ರು.

ಗಣಿಗಾರಿಕೆಯಿಂದ ನಂದಿಗಿರಿಧಾಮಕ್ಕೆ ಆತಂಕ:

Landslide on nandi hills road in chikkaballapur

ನಂದಿಗಿರಿಧಾಮದ ಮೇಲೆ ರಸ್ತೆ ಬಳಿ ಭೂ ಕುಸಿತ

ನಂದಿಗಿರಿಧಾಮದ ಸುತ್ತಮುತ್ತಲೂ … ಎತ್ತ ನೋಡಿದ್ರೂ ಪಂಚಗಿರಿಗಳ ಸಾಲು ಇದೆ. ಇದೆ ಪಂಚಗಿರಿಗಳ ಸಾಲಿನಲ್ಲಿ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತಗಳು ಕಲ್ಲು ಕ್ವರಿ ಕ್ರಷರ್ ಗಣಿಗಾರಿಕೆಗೆ ಅನುಮತಿ ನೀಡಿವೆ. ಇದ್ರಿಂದ ನಂದಿಗಿರಿಧಾಮದ ಸುತ್ತ ಎತ್ತ ನೋಡಿದ್ರೂ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಪ್ರತಿದಿನ ಸಂಜೆಯಾದ್ರೆ ಸಾಕು ಕಲ್ಲು ಗಣಿಯ ಬ್ಲಾಸ್ಟಿಂಗ್ ನಡೆಯುತ್ತಿದೆ. ಇದ್ರಿಂದ ಗಿರಿಧಾಮದ ಮೇಲೆ ಇರುವ ಅತಿಥಿ ಗೃಹಗಳು ಗಡ ಗಡ ನಡುಗುತ್ತಿವೆ, ಇದ್ರಿಂದ ಗಿರಿಧಾಮಕ್ಕೆ ಕಲ್ಲು ಗಣಿಯ ಆತಂಕ ಎದುರಾಗಿದೆ.

ಈ ಹಿಂದೆ ದೊಡ್ಡ ಪ್ರಮಾಣದಲ್ಲಿ ಬೆಟ್ಟ ಕುಸಿದಿತ್ತು:

ಕಳೆದ ವರ್ಷ ಅಗಷ್ಟು 25ರಂದು ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮ ಹಾಗೂ ಬ್ರಹ್ಮಗಿರಿಯ ಮದ್ಯೆದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಟ್ಟ ಕುಸಿದು ದೊಡ್ಡ ಅವಾಂತರವೆ ಸೃಷ್ಟಿಯಾಗಿತ್ತು. ಆಗ ದೊಡ್ಡ ದೊಡ್ಡ ಕಲ್ಲು ಬಂಡೆಗಳು ರಸ್ತೆಗೆ ಉರುಳಿ ಬಿದ್ದು ರಸ್ತೆ ಹಾಗೂ ಪಿ.ಡ್ಲೂ.ಡಿ ರಸ್ತೆಯೆ ಕೊಚ್ಚಿ ಹೋಗಿತ್ತು, ಇದ್ರಿಂದ ಆರೇಳು ತಿಂಗಳು ನಂದಿಗಿರಿಧಾಮ ಬಂದ್ ಸಹ ಆಗಿತ್ತು. ಆಗ ದೊಡ್ಡ ದೊಡ್ಡ ಇಂಜಿನಿಯರ್ ಗಳು ಸ್ಥಳಕ್ಕೆ ಭೇಟಿ ನೀಡಿ ಸುತ್ತಮುತ್ತಲ ಗಣಿಗಾರಿಕೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ರು. ಇದ್ರಿಂದ ಸರ್ಕರ 80 ಲಕ್ಷ ರೂಪಾಯಿ ವೆಚ್ಚದಲ್ಲಿ ಆಗ ರಸ್ತೆಯನ್ನು ಸರಿಪಡಿಸಿ ನೂತನ ಮಾದರಿಯಲ್ಲಿ ಮೋರಿ ಸಹ ನಿರ್ಮಾಣ ಮಾಡಿದೆ.

ಮತ್ತೆ ಮತ್ತೆ ಗಿರಿಧಾಮಕ್ಕೆ ಆತಂಕ:

ಕಳೆದ ವರ್ಷದ ಬೆಟ್ಟ ಕುಸಿತ ಪ್ರಕರಣದ ನಂತರ ಮೊನ್ನೆ ಮೊನ್ನೆ ವೀರಭದ್ರಸ್ವಾಮಿ ದೇವಾಲಯದ ಬಳಿ ಬೆಟ್ಟ ಕುಸಿದು ಇನ್ನಿಲ್ಲದ ಆತಂಕ ಸೃಷ್ಟಿ ಮಾಡಿತ್ತು. ಕಣಿವೆ ಬಸವಣ್ಣ ದೇವಸ್ಥಾನದ ಬಳಿ ಬೆಟ್ಟ ಕುಸಿದು ಆತಂಕ ಎದುರಾಗಿತ್ತು. ಅದನ್ನು ಸರಿಪಡಿಸುವಷ್ಟರಲ್ಲಿ ಇಂದು ಮತ್ತೆ ಮಿರ್ಜಾ ವೃತ್ತದ 26ನೇ ತಿರುವಿನಲ್ಲಿ ಬೆಟ್ಟ ಕುಸಿದು ಪ್ರವಾಸಿಗರಲ್ಲಿ ಆತಂಕ ಎದುರಾಗಿದೆ. ಗಿರಿಧಾಮದಲ್ಲಿ ಬೆಟ್ಟ ಕುಸಿತವಾಗುವುದಕ್ಕೂ ಸುತ್ತಮುತ್ತಲ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುವುದಕ್ಕೂ ತಾಳೆ ಹಾಕಲಾಗ್ತಿದೆ. ಇದ್ರಿಂದ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ. – ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ 

Published On - 2:12 pm, Fri, 9 September 22