Chikkaballapur: ಕಚೇರಿ ಮುಂದೆ ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ್ದ ಬೈಕ್ ಟೈರ್ ಗಾಳಿ ಬಿಟ್ಟು ಬಿಸಿ ಮುಟ್ಟಿಸಿದ ತಹಶೀಲ್ದಾರ್
ಕಚೇರಿಯ ಆಸುಪಾಸಿನಲ್ಲಿ ವಾಹನ ನಿಲ್ಲಿಸುವುದನ್ನು ತಡೆಯಲು ಚಿಕ್ಕಬಳ್ಳಾಪುರ ತಹಸೀಲ್ದಾರ್ ಅವರು ವಾಹನಗಳ ಚಕ್ರದ ಗಾಳಿಯನ್ನು ಬಿಡುತ್ತಿದ್ದಾರೆ.
ಚಿಕ್ಕಬಳ್ಳಾಪುರ, ಜುಲೈ 24: ಕಚೇರಿ ಬಳಿ ಅದ್ದಾದಿಡ್ಡಿ ವಾಹನ ನಿಲ್ಲಿಸುತ್ತಿದ್ದರಿಂದ ಕಚೇರಿಗೆ ಬರುವವರಿಗೆ ಕಿರಿ ಕಿರಿ ಆಗುತ್ತಿದ್ದ ಹಿನ್ನೆಲೆ ವಾಹನ ಸವಾರರ ವರ್ತನೆಗೆ ಬೇಸತ್ತು ಚಿಕ್ಕಬಳ್ಳಾಪುರ ತಹಸೀಲ್ದಾರ್(Chikkaballapur Tahsildar) ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಸವಾರರಿಗೆ ತಕ್ಕ ಪಾಠ ಕಲಿಸಿದ್ದಾರೆ. ಕಚೇರಿ ಬಳಿ ವಾಹನ ನಿಲ್ಲಿಸದಿರಲು ಎಷ್ಟೇ ಹೇಳಿದರೂ, ಮಾತು ಕೇಳದೆ ಕೆಲ ಸಾರ್ವಜನಿಕರು ಕಚೇರಿ ಮುಂದೆ ಹಾಗೂ ಕಚೇರಿಯ ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸುತ್ತಿದ್ದರು. ಇದರಿಂದ ಬೇಸತ್ತ ಚಿಕ್ಕಬಳ್ಳಾಪುರ ತಹಸೀಲ್ದಾರ್ ಗಣಪತಿ ಶಾಸ್ತ್ರಿ ಅವರು ವಾಹನಗಳ ಚಕ್ರಗಳ ಗಾಳಿಯನ್ನೇ ತೆಗೆಯುವ ಮೂಲಕ ಪಾಠ ಕಲಿಸಿದ್ದಾರೆ(Deflates Tyres of Vehicles).
ಕಳೆದ ಒಂದು ವಾರದಿಂದ ತಹಶೀಲ್ದಾರ್ ಗಣಪತಿಯವರು ಕಚೇರಿ ಬಳಿ ನಿಲ್ಲಿಸುವ ವಾಹನಗಳ ಚಕ್ರದ ಗಾಳಿಯನ್ನು ತೆಗೆಯುತ್ತಿದ್ದು ತಹಶೀಲ್ದಾರ್ ನಡೆಗೆ ಪರ ವಿರೋಧ ಟೀಕೆಗಳು ವ್ಯಕ್ತವಾಗುತ್ತಿವೆ.
ಇನ್ನು ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾದ ಪ್ರತಿನಿಧಿಯೊಂದಿಗೆ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರು ಮಾತನಾಡಿದ್ದು, ತಮ್ಮ ಕಚೇರಿಯ ಆಸುಪಾಸಿನಲ್ಲಿ ವಾಹನ ನಿಲ್ಲಿಸುವುದನ್ನು ತಡೆಯಲು ನಾನು ಅನೇಕ ರೀತಿಯ ಪ್ರಯತ್ನಗಳನ್ನು ಮಾಡಿದೆ. ನೋ ಪಾರ್ಕಿಂಗ್ ಬೋರ್ಡ್ ಹಾಕಿಸಿದೆ. ಹಳದಿ ಲೈನ್ ಗಳನ್ನು ಸಹ ಹಾಕಿದ್ದಾಯ್ತು. ಕಚೇರಿಗೆ ಗೇಟ್ ಅಳವಡಿಸಿ ಭದ್ರತಾ ಸಿಬ್ಬಂದಿಯನ್ನೂ ನಿಯೋಜಿಸಿದ್ದಾಯಿತು. ಆದರೆ ಏನೂ ಪ್ರಯೋಜನವಾಗಲಿಲ್ಲ. ಇದೆಲ್ಲವೂ ವ್ಯರ್ಥವಾಯಿತು.
ಇದನ್ನೂ ಓದಿ: 6 ಕೋಟಿ ರೂ. ಖರ್ಚಾದರೂ ಮುಗಿಯದ ಅಕ್ಕ ಮಹಾದೇವಿ ಮಹಿಳಾ ವಿವಿ ಮ್ಯೂಸಿಯಂ: ಉದ್ಘಾಟನೆ ಯಾವಾಗ ಎಂದ ವಿದ್ಯಾರ್ಥಿನಿಯರು
ಈ ರೀತಿ ಕಚೇರಿಯ ಮುಂಭಾಗದಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಅನೇಕ ತೊಂದರೆಗಳು ಉಂಟಾಗುತ್ತವೆ. ಅದರಲ್ಲೂ ಕಚೇರಿಗೆ ಬರುವ ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಬಹಳ ತೊಂದರೆಯಾಗುತ್ತಿದೆ. ಹೀಗಾಗಿ ಕಳೆದೊಂದು ವಾರದಿಂದ ಕಚೇರಿ ಮುಂದೆ ನಿಲ್ಲಿಸುವ ವಾಹನಗಳ ಚಕ್ರದ ಗಾಳಿಯನ್ನು ತೆಗೆಯುತ್ತಿದ್ದೇನೆ ಎಂದು ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರು ತಿಳಿಸಿದ್ದಾರೆ.
ಇನ್ನು ಗಣಪತಿಯವರು ಪ್ರತಿದಿನ ಸುಮಾರು 10ರಿಂದ 15 ವಾಹನಗಳ ಚಕ್ರದ ಗಾಳಿಯನ್ನು ತೆಗೆಯುತ್ತಿದ್ದಾರೆ. ಈಗಾಗಲೇ ಕಚೇರಿ ಬಳಿ ನಿಲ್ಲಿಸಿ ಟೈರ್ ಪಂಕ್ಚರ್ ಮಾಡಿಸಿಕೊಂಡ ವಾಹನ ಸವಾರ ಮತ್ತೆ ಕಚೇರಿ ಬಳಿ ವಾಹನ ನಿಲ್ಲಿಸುತ್ತಿಲ್ಲ. ಟೈರ್ ಪಂಚರ್ ಐಡಿಯಾ ವಾಹನ ಸವಾರರಿಗೆ ಪಾಠ ಕಲಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:30 am, Mon, 24 July 23