ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳನ್ನು ಸರ್ವರಿಗೂ ತಲುಪಿಸುವುದೇ ಗುರಿ: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
ಚಿಕ್ಕಬಳ್ಳಾಪುರ ತಾಲ್ಲೂಕಿನ ದೊಡ್ಡ ಮರಳಿ ಗ್ರಾಮದಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್, ಅಂಚೆ ಇಲಾಖೆ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಸಚಿವ ರಾಜೀವ್ ಚಂದ್ರಶೇಖರ್, ಪ್ರತಿಯೊಬ್ಬರಿಗೂ ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳ ಅನುಕೂಲಗಳನ್ನು ತಲುಪಿಸುವುದೇ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಉದ್ದೇಶ ಎಂದಿದ್ದಾರೆ.
ಚಿಕ್ಕಬಳ್ಳಾಪುರ, ನವೆಂಬರ್ 30: ದೇಶದ ಎಲ್ಲ ಬಡವರಿಗೆ, ಮಹಿಳೆಯರಿಗೆ, ರೈತರಿಗೆ, ಕಾರ್ಮಿಕರಿಗೆ ಮತ್ತು ಯುವ ಸಮುದಾಯದವರಿಗೆ ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳ ಅನುಕೂಲಗಳನ್ನು ತಲುಪಿಸುವುದೇ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಉದ್ದೇಶ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ಹೇಳಿದ್ದಾರೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ದೊಡ್ಡ ಮರಳಿ ಗ್ರಾಮದಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್, ಅಂಚೆ ಇಲಾಖೆ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ಪ್ರಯಾಸ್ ಮತ್ತು ಸಬ್ ಕಾ ವಿಶ್ವಾಸ್ ಎಂಬ ದೃಢ ಸಂಕಲ್ಪದೊಂದಿಗೆ ಕಳೆದ ಹತ್ತು ವರ್ಷಗಳಿಂದ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿ ರೈತರ, ಯುವ ಸಮುದಾಯದವರ, ಮಹಿಳೆಯರ ಏಳಿಗೆಗಾಗಿ ಶ್ರಮಿಸಿದೆ. ಈವರೆಗೆ ಈ ಸೌಲಭ್ಯಗಳನ್ನು ಪಡೆದು ಸಮಾಜದ ಮುಖ್ಯ ವಾಹಿನಿಗೆ ಬಂದಿರುವವರ ಬಗ್ಗೆ ತಿಳಿಸಿಕೊಟ್ಟು ಇನ್ನು ಹೆಚ್ಚಿನ ಜನರಿಗೆ ಈ ಕಾರ್ಯಕ್ರಮಗಳನ್ನು ತಲುಪಿಸಲು ಈ ಯಾತ್ರೆಯನ್ನು ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಭಾನುವಾರ ವಿಶಾಲ ಖಾಲಿ ರಸ್ತೆಯಲ್ಲಿ ರೇಸ್ ಬೈಕ್ ಗಳ ಹಾವಳಿಗೆ ಸುಸ್ತಾದ ಜನ, ಇಬ್ಬರು ಆಸ್ಪತ್ರೆ ಪಾಲು
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ಎಲ್ಲಾ ಪ್ರಜೆಗಳಿಗೂ ಅನುಕೂಲವಾಗುವ ಮತ್ತು ಎಲ್ಲರನ್ನೂ ಒಳಗೊಳ್ಳುವ ಹಲವು ಮಹತ್ವದ ಯೋಜನೆಗಳನ್ನು ಜಾರಿ ಮಾಡಿದೆ ಎಂದರು.
ಆಯುಷ್ಮಾನ್ ಭಾರತ್, ಕಿಸಾನ್ ಸಮ್ಮಾನ್ ಯೋಜನೆ, ಕೋವಿಡ್ ಲಸಿಕೆ ಉಚಿತ ವಿತರಣೆ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಸೇರಿದಂತೆ ಹತ್ತು ಹಲವು ಮಹತ್ವದ ಯೋಜನೆಗಳನ್ನು ಕಳೆದ 10 ವರ್ಷಗಳ ಅವಧಿಯಲ್ಲಿ ಮೋದಿ ಅವರು ಮಾಡಿದ್ದಾರೆ. ಕೇಂದ್ರ ಸರ್ಕಾರ ಜಾರಿ ಮಾಡಿರುವ ಯೋಜನೆಗಳು ದೇಶದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರನ್ನೂ ಒಳಗೊಳ್ಳುವ ಯೋಜನೆಗಳಾಗಿವೆ.
ಸರ್ಕಾರದ ಯೋಜನೆಗಳು ಬಡವರು, ಮಧ್ಯಮವರ್ಗದವರು, ಮಹಿಳೆಯರು, ಯುವಜನರು,ರೈತರು ಮತ್ತು ಕಾರ್ಮಿಕರು ಹೀಗೆ ಎಲ್ಲರನ್ನೂ ತಲುಪುವ ಯೋಜನೆಗಳಾಗಿ ಅವರಲ್ಲಿ ಆರ್ಥಿಕ ಬಲ ತುಂಬಲಿವೆ. ಮೋದಿ ಗ್ಯಾರಂಟಿ ಹೆಸರಿನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಆರಂಭವಾಗಿದ್ದು, ಕೇಂದ್ರದ ಯೋಜನೆಗಳ ಕುರಿತು ಈ ಯಾತ್ರೆ ಅರಿವು ಮೂಡಿಸಲಿದೆ. ಈ ಯಾತ್ರೆಯ ಮುಖ್ಯ ಉದ್ಧೇಶ ಕೇಂದ್ರದ ಯೋಜನೆಗಳು ಎಲ್ಲರಿಗೂ ತಲುಪುವುದು ಮತ್ತು ಈವರೆಗೆ ತಲುಪದೇ ಇರುವವರಿಗೆ ತಲುಪಿಸುವುದೇ ಆಗಿದೆ ಎಂದು ಹೇಳಿದ್ದಾರೆ.
ಫಲಾನುಭವಿ ಹೇಳಿದ್ದಿಷ್ಟು
ಸುಕನ್ಯಾ ಸಮೃದ್ಧಿ ಯೋಜನೆಯ ಫಲಾನುಭವಿ ದೊಡ್ಡಮರಳಿ ಗ್ರಾಮದ ಪವಿತ್ರ ಮಾತನಾಡಿ, ನನಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಅವರ ಭವಿಷ್ಯಕ್ಕೆ ಒಂದೇ ಬಾರಿ ಹಣ ಹೂಡಿಕೆ ಮಾಡಲು ಸಾಧ್ಯವಿಲ್ಲ. ಸುಕನ್ಯಾ ಸಮೃದ್ಧಿ ಯೋಜನೆಯಡಿ ಕಂತುಗಳ ಪ್ರಕಾರ ಪಾವತಿ ಮಾಡಲು ಅವಕಾಶವಿರುವ ಕಾರಣ ಅನುಕೂಲವಾಗಿದೆ.ಈ ಯೋಜನೆ ಹೆಣ್ಣುಮಕ್ಕಳಿರುವವರಿಗೆ ಸಹಾಯವಾಗಿದೆ.
ಇದನ್ನೂ ಓದಿ: ಯಾಲಕ್ಕಿ ಬಾಳೆಹಣ್ಣಿಗೆ ಚಿನ್ನದ ಬೆಲೆ; ಟೊಮೆಟೊ, ದಾಳಿಂಬೆ ನಂತರ ಬಾಳೆತೋಟಕ್ಕೆ ಕಳ್ಳರ ಕಾಟ
ಅಟಲ್ ಪಿಂಚಣಿ ಯೋಜನೆಯ ಪ್ರಯೋಜನವನ್ನೂ ಪಡೆಯಲಾಗಿದೆ. ಪ್ರಧಾನ ಮಂತ್ರಿಗಳ ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರತಿ ವರ್ಷ 6 ಸಾವಿರ ರೂಪಾಯಿ ಖಾತೆಗೆ ಪಡೆಯಲಾಗುತ್ತಿದೆ. ಕೇಂದ್ರದ ಹಲವು ಯೋಜನೆಗಳ ಪ್ರಯೋಜನ ಪಡೆದಿದ್ದು, ವಿಕಸಿತ ಭಾರತ ಸಂಕಲ್ಪ ಯಾತ್ರೆಯಿಂದ ಮತ್ತಷ್ಟು ಯೋಜನೆಗಳ ಮಾಹಿತಿ ದೊರೆತಿದೆ. ಕೇಂದ್ರದ ಯೋಜನೆಗಳು ಬಡವರು, ಮಹಿಳೆಯರು ಮತ್ತು ಮಧ್ಯಮ ವರ್ಗದ ಜನರಿಗೆ ಹೆಚ್ಚು ಅನುಕೂಲವಾಗಿದೆ ಎಂದರು.
ಮತ್ತೊಬ್ಬ ಫಲಾನುಭವಿ ಮಂಜುಳಾ ಅಭಿಪ್ರಾಯ ಹಂಚಿಕೊಂಡು, ಗರೀಬ್ ಕಲ್ಯಾಣ್ ಅನ್ನ ಭಾಗ್ಯ, ಪಿಎಂ ಕಿಸಾನ್ ಸೇರಿದಂತೆ ಹಲವು ಯೋಜನೆಗಳನ್ನು ಬಳಸಿಕೊಳ್ಳಲಾಗಿದೆ. ಮಧ್ಯವರ್ತಿಗಳಿಗೆ ಹೋಗುತ್ತದೆ ಎಂಬ ಭಯವಿಲ್ಲದೆ ನೇರವಾಗಿ ಫಲಾನುಭವಿಗಳಿಗೆ ತಲುಪುವ ಯೋಜನೆಗಳಾಗಿವೆ. ಪ್ರಧಾನಮಂತ್ರಿಗಳು ಒಳ್ಳೆಯ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಪಿಎಂ ಕಿಸಾನ್ ನಡಿ ಬಂದ ಹಣವನ್ನು ಬೆಳೆಗಳನ್ನು ಬೆಳೆಯಲು ಪೂರಕವಾಗಿ ಉಪಯೋಗಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಗವಿಗಾನಹಳ್ಳಿ ಗ್ರಾಮದ ಗರೀಬ್ ಕಲ್ಯಾಣ್ ಅನ್ನ ಯೋಜನೆ ಫಲಾನುಭವಿ ಜಯಲಕ್ಷ್ಮಿ ಮಾತನಾಡಿ, ಗರೀಬ್ ಕಲ್ಯಾಣ ಅನ್ನ ಯೋಜನೆಯಿಂದ ಬಡವರು, ನಿರ್ಗತಿಕರಿಗೆ ಅನುಕೂಲವಾಗಿದೆ. ಹಳ್ಳಿಗಳಲ್ಲಿ ವೃದ್ಧರು, ವಿಕಲಚೇತನರಿಗೆ ಈ ಯೋಜನೆ ಸಹಕಾರಿಯಾಗಿದೆ. ಪ್ರಧಾನಿಯವರು ಈ ಯೋಜನೆಯನ್ನು ಮತ್ತೆ ಐದು ವರ್ಷಗಳ ಕಾಲ ಮುಂದುವರೆಸಿರುವುದು ಸ್ವಾಗತಾರ್ಹ ಮತ್ತು ಸಂತಸ ತಂದಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:36 pm, Thu, 30 November 23