ಹಣ ಕೊಡಲಿಲ್ಲವೆಂದು ತಂದೆಯನ್ನೇ ಕೊಂದ ಮಗ: ಶವಸಂಸ್ಕಾರ ವೇಳೆ ಸಿಕ್ಕಿಬಿದ್ದ
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ನೆಹರುನಗರದಲ್ಲಿ ತಂದೆಯನ್ನೇ ಮಗ ಕೊಲೆ ಮಾಡಿರುವಂತಹ ಭೀಕರ ಘಟನೆ ಒಂದು ನಡೆದಿದೆ. ಮದ್ಯ ಸೇವಿಸಲು ಹಣ ನೀಡಿದ ಕಾರಣ ರಿಪೀಸ್ ಪಟ್ಟಿಯಿಂದ ಹೊಡೆದು ಕೊಲೆ ಮಾಡಿ, ಬಳಿಕ ಶವಸಂಸ್ಕಾರಕ್ಕೆ ಮುಂದಾಗಿದ್ದ ಮಗನನ್ನು ಸದ್ಯ ಗೌರಿಬಿದನೂರು ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರ, ನವೆಂಬರ್ 03: ಮದ್ಯ ಸೇವಿಸಲು ಹಣ ಕೊಡಲಿಲ್ಲವೆಂದು ತಂದೆಯನ್ನೇ (Father) ಮಗ ಕೊಲೆ (kill) ಮಾಡಿರುವಂತಹ ಘಟನೆ ಜಿಲ್ಲೆಯ ಗೌರಿಬಿದನೂರಿನ ನೆಹರುನಗರದಲ್ಲಿ ದುಷ್ಕೃತ್ಯ ನಡೆದಿದೆ. 55 ವರ್ಷದ ತಂದೆ ಗಂಗಣ್ಣಗೆ ರಿಪೀಸ್ ಪಟ್ಟಿಯಿಂದ ಹೊಡೆದು ಪುತ್ರ ಸಂಜಯ್ ಕುಮಾರ್ ಕೊಲೆ ಮಾಡಿದ್ದಾರೆ. ಸದ್ಯ ಸಂಜಯ್ ಕುಮಾರ್(25)ನನ್ನು ಬಂಧಿಸಿದ ಗೌರಿಬಿದನೂರು ಟೌನ್ ಠಾಣೆ ಪೊಲೀಸರು, ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಆರೋಪಿ ಸಂಜಯ್ ಕುಮಾರ್, ತಂದೆಯನ್ನ ಕೊಂದು ಶವಸಂಸ್ಕಾರಕ್ಕೆ ಮುಂದಾಗಿದ್ದ. ವಿಚಾರ ತಿಳಿದು ಗೌರಿಬಿದನೂರು ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು. ತಪಾಸಣೆ ವೇಳೆ ಪುತ್ರನೇ ಅಪ್ಪನನ್ನು ಕೊಂದಿದ್ದು ಕಂಡುಬಂದ ಹಿನ್ನೆಲೆ ಅರೆಸ್ಟ್ ಮಾಡಿದ್ದಾರೆ.
ಎಣ್ಣೆ ಪಾರ್ಟಿ ವೇಳೆ ಕಲ್ಲಿನಿಂದ ಜಜ್ಜಿ ಸ್ನೇಹಿತನ ಮರ್ಡರ್
ಎಣ್ಣೆ ಪಾರ್ಟಿ ವೇಳೆ ಕಲ್ಲಿನಿಂದ ಜಜ್ಜಿ ಸ್ನೇಹಿತನ ಕೊಲೆ ಮಾಡಿರುವಂತಹ ಘಟನೆ ವಿಜಯನಗರ ಬಡಾವಣೆಯ ಚರ್ಚ್ ಬಳಿ ನಡೆದಿದೆ. ರಿತೇಶ್(32) ಹತ್ಯೆಗೈದಿರುವ ದುಷ್ಕರ್ಮಿಗಳು. ಹಳೇ ವೈಷಮ್ಯ ಹಿನ್ನೆಲೆ ಸ್ನೇಹಿತರೇ ಕೊಲೆಗೈಯ್ದಿರುವ ಶಂಕೆ ವ್ಯಕ್ತವಾಗಿದೆ. ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಮ್ಮನ ಸಾವಿನಿಂದ ಮನನೊಂದು ಅಕ್ಕ ನೇಣಿಗೆ ಶರಣು
ತಮ್ಮನ ಸಾವಿನಿಂದ ಮನನೊಂದು ಅಕ್ಕ ನೇಣಿಗೆ ಶರಣಾಗಿರುವಂತಹ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಮಾರುತಿ ನಗರದಲ್ಲಿ ನಡೆದಿದೆ. ಜ್ಯೋತಿ ಸುಂಕದ(21) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಅಕ್ಕ.
ಇದನ್ನೂ ಓದಿ: ಡಾ.ಕೃತಿಕಾರೆಡ್ಡಿ ಕೊಲೆ ಕೇಸ್: ಆರೋಪಿ ಮಹೇಂದ್ರರೆಡ್ಡಿ ಕಳ್ಳಾಟ ಒಂದೊಂದೇ ಬಯಲು
ಕಳೆದ 6-7 ತಿಂಗಳ ಹಿಂದೆ ಸಹೋದರ ಮಹೇಶ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಸೋದರನ ಸಾವಿನಿಂದ ಮನನೊಂದು ಜ್ಯೋತಿಯೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಣೇಬೆನ್ನೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು ಡಿಕ್ಕಿಯಾಗಿ ಬೈಕ್ ಸವಾರ ಸಾವು
ಕಾರು ಹಾಗೂ ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ತುಮಕೂರು ತಾಲ್ಲೂಕಿನ ಕೋರಾ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಶಿರಾ ತಾಲೂಕಿನ ಗಿಣ್ಣಪ್ಪನಹಟ್ಟಿ ಗ್ರಾಮದ ತಿಮ್ಮರಾಜು (45) ಮೃತ ದುರ್ದೈವಿ.
ಇದನ್ನೂ ಓದಿ: ಬೆಂಗಳೂರು: ನಾಯಿಮರಿಯನ್ನು ಎತ್ತಿ ನೆಲಕ್ಕೆ ಬಡಿದು ಕೊಲೆ, ಮನೆ ಕೆಲಸದಾಕೆಯಿಂದಲೇ ರಾಕ್ಷಸೀ ಕೃತ್ಯ
ಕೋರಾದಿಂದ ಗಿಣ್ಣಪ್ಪನಹಟ್ಟಿ ಕಡೆಗೆ ಬೈಕ್ನಲ್ಲಿ ತೆರಳುವಾಗ ಹಿಂಬದಿಯಿಂದ ಬಂದು ಕಾರು ಡಿಕ್ಕಿ ಹೊಡೆದಿದೆ. ಕಾರು ಗುದ್ದಿದ ರಭಸಕ್ಕೆ ತಿಮ್ಮರಾಜು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಕೋರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಘಟನೆ ಸಂಬಂಧ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




