
ಚಿಕ್ಕಬಳ್ಳಾಪುರ, ಆಗಸ್ಟ್ 11: ರಾತ್ರೋರಾತ್ರಿ ತೋಟಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ದಾಳಿಂಬೆ ಬೆಳೆಯನ್ನು ಕದ್ದಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಚದಲಪುರ ಗ್ರಾಮದಲ್ಲಿ ನಡೆದಿದೆ. ರೈತ ಮಂಜುನಾಥ್ ಎಂಬವರ ಜಮೀನಿನಲ್ಲಿ ಕಳ್ಳರು ಕೈಚಳಕ ತೋರಿದ್ದು, ನೀರಿನ ಕೊರತೆಯ ನಡುವೆಯೂ ಹನಿ ಹನಿ ನೀರುಣಿಸಿ ತೋಟವನ್ನು ಕಾಪಾಡಿಕೊಂಡಿದ್ದ ರೈತನಿಗೆ ಭರಸಿಡಿಲು ಬಡಿದಂತಾಗಿದೆ. ಕಳುವಾಗಿರುವ 2 ರಿಂದ 3 ಟನ್ ದಾಳಿಂಬೆ ಬೆಳೆಯ ಮೌಲ್ಯ ಸುಮಾರು 3 ಲಕ್ಷ ರೂಪಾಯಿ ಎನ್ನಲಾಗಿದೆ.
ಸದ್ಯ ತೋಟದಲ್ಲೇ ದಾಳಿಂಬೆಗೆ ಕೆಜಿಗೆ 130 ರಿಂದ 150 ರೂಪಾಯಿ ಬೆಲೆ ಸಿಗುತ್ತಿತ್ತು. ಉತ್ತಮ ಬೆಲೆ ಹಿನ್ನೆಲೆ ಕಳ್ಳರ ಕಣ್ಣು ರೈತನ ಬೆಳೆಯ ಮೇಲೆ ಬಿದ್ದಿದೆ. ರೈತ ಮಂಜುನಾಥ್ ತಮ್ಮ ಪತ್ನಿಯ ಚಿನ್ನಾಭರಣಗಳನ್ನು ಅಡ ಇಟ್ಟು, ಸಾಲ ಮಾಡಿ ಬೆಳೆ ಬೆಳೆದಿದ್ದರು. ಮುಕ್ಕಾಲು ಎಕರೆಯಲ್ಲಿ ದಾಳಿಂಬೆ ಬೆಳೆಯಲು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿದ್ದರು. ಸಾಲ ಮಾಡಿ ಬರದ ನಡುವೆಯೂ ಬೆಳೆ ಬೆಳೆಸಿ, ಅದನ್ನು ಮಾರಿ ಲಾಭ ಗಳಿಸುವ ಕನಸು ಕಂಡಿದ್ದರು. ಆದರೆ ಕೈಗೆ ಬಂದ ಫಸಲು ಕಳ್ಳರ ಪಾಲಾಗಿರುವುದರಿಂದ ರೈತ ಮಂಜುನಾಥ್ ಕಂಗಾಲಾಗಿದ್ದಾರೆ.
ಇದನ್ನೂ ಓದಿ: ಟೊಮೆಟೊ, ದಾಳಿಂಬೆ ಬೆನ್ನಲ್ಲೇ ದ್ರಾಕ್ಷಿ ಮೇಲೆ ಕಳ್ಳರ ಕಣ್ಣು: ರಾತ್ರೋರಾತ್ರಿ ಕೈಚಳಕ ತೋರಿಸಿದ ಖದೀಮರು!
ಇನ್ನು ಘಟನೆ ಬೆನ್ನಲ್ಲೇ ಆರೋಪಿಗಳ ಬಂಧನಕ್ಕೆ ಸ್ಥಳೀಯ ರೈತರಿಂದ ದೊಡ್ಡ ಮಟ್ಟದ ಆಗ್ರಹ ಕೇಳಿಬಂದಿದೆ. ಶೀಘ್ರವೇ ಕಳ್ಳರನ್ನು ಹಿಡಿಯಬೇಕು. ಇಲ್ಲವಾದಲ್ಲಿ ಅವರು ಇದನ್ನೇ ಕಾಯಕ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ. ಪ್ರಕರಣ ಸಂಬಂಧ ರೈತ ಮಂಜುನಾಥ್ ಅವರು ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.