
ಚಿಕ್ಕಬಳ್ಳಾಪುರ, ಜೂನ್ 15: ಹಗಲು ರಾತ್ರಿ ಕಷ್ಟಪಟ್ಟು ಬೆಳೆದ ಮಾವಿನ ಹಣ್ಣಿಗೆ (Mango) ಈ ಸಲ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇಲ್ಲ. ಮಾವಿನ ಹಣ್ಣಿಗೆ ಬೆಂಬಲ ಬೆಲೆ ನೀಡುವಂತೆ ಕೋಲಾರ (Kolar) ಜಿಲ್ಲೆಯ ಮಾವು ಬೆಳೆಗಾರರು, ಶ್ರೀನಿವಾಸಪುರ ತಾಲೂಕನ್ನು ಬಂದ್ ಮಾಡಿ, ಬೆಳೆದ ಮಾವಿನ ಹಣ್ಣುಗಳನ್ನು ರಸ್ತೆಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ನಡುವೆ ಇಮಾಮ್ ಪಸಂದ್ ಮಾವಿನ ತಳಿಗೆ ಮಾರುಕಟ್ಟೆಯಲ್ಲಿ ಭಾರಿ ಡಿಮ್ಯಾಂಡ್ ಬಂದಿದೆ. ಕೆಜಿ ಇಮಾಮ್ ಪಸಂದ್ ಮಾವಿನ ಹಣ್ಣು (Imam Pasand Mango) 250 ರೂಪಾಯಿಗೆ ಮಾರಾಟವಾಗುತ್ತಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಕಂಬದಹಳ್ಳಿ ಗ್ರಾಮದ ಪ್ರಗತಿಪರ ರೈತ ಸುರೇಂದ್ರಗೌಡ ಎಂಬುವರು ತಮ್ಮ ಎರಡು ಎಕರೆ ಜಮೀನಿನಲ್ಲಿ ಇಮಾಮ್ ಪಸಂದ್ ಮಾವು ಬೆಳೆದಿದ್ದು ನೇರವಾಗಿ ಅವರೇ ಮಾರಾಟ ಮಾಡುವುದರ ಮೂಲಕ ಕೈತುಂಬ ಹಣ ಸಂಪಾದನೆ ಮಾಡುತ್ತಿದ್ದಾರೆ.
ಇನ್ನು, ಆಂಧ್ರ ಪ್ರದೇಶ, ತಮಿಳುನಾಡಿನಲ್ಲಿ ಮಾತ್ರ ಹೇರಳವಾಗಿ ಬೆಳೆಯುವ ಮಾವಿನ ಹಣ್ಣನ್ನು ಚಿಕ್ಕಬಳ್ಳಾಪುರ ರೈತ ಸುರೇಂದ್ರ ಗೌಡ ಬೆಳೆದಿದ್ದು, ಒಂದೊಂದು ಕಾಯಿ ಒಂದು ಕೆಜಿ ತೂಗುತ್ತಿದೆ. ಇಳುವರಿ ಕಡಿಮೆಯಾಗಿದ್ದರೂ, ಗಾತ್ರ ಮಾತ್ರ ದೊಡ್ಡದಾಗಿದೆ.
ಇಮಾಮ್ ಪಸಂದ್ ಮಾವಿನ ಸವಿರುಚಿ ನೋಡಿರುವ ಬೆಂಗಳೂರಿನ ಅಪಾರ್ಟ್ಮೆಂಟ್ ನಿವಾಸಿಗಳು, ಪ್ರತಿಷ್ಠಿತ ಕಂಪನಿಗಳ ಉದ್ಯೋಗಿಗಳು ಈ ಹಣ್ಣುಗಳನ್ನು ನೇರವಾಗಿ ರೈತರಿಗೆ ಆರ್ಡರ್ ಕೊಟ್ಟು ತರಿಸಿಕೊಳ್ಳುತ್ತಿದ್ದಾರೆ. ರೈತ ಸುರೇಂದ್ರ ಗೌಡ ಅವರು ಯಾವುದೇ ಕೆಮಿಕಲ್ ಬಳಸದೆ ನೈಸರ್ಗಿಕ ವಿಧಾನದ ಮೂಲಕ ಹಣ್ಣುಗಳನ್ನು ಬೆಳೆದು ಮಾರಾಟ ಮಾಡುತ್ತಿದ್ದಾರೆ.
ಇದನ್ನೂ ಓದಿ: ತೋತಾಪುರಿ ನಿಷೇಧ: ಕರ್ನಾಟಕ ಮಾವು ಬೆಳಗಾರರ ಹೊಟ್ಟೆ ಮೇಲೆ ಹೊಡೆದ ಆಂಧ್ರಪ್ರದೇಶ
ಓರ್ವ ಮುಸ್ಲಿಂ ರಾಜನ ಮೂಲಕ ಆಂಧ್ರಕ್ಕೆ ಎಂಟ್ರಿ ಪಡೆದಿದ್ದ ಇಮಾಮ್ ಪಸಂದ್ ಅನ್ನೊ ಮಾವಿನ ತಳಿ, ಈಗ ರಾಜ್ಯಕ್ಕೂ ಕಾಲಿಟ್ಟಿದ್ದು ಅದರ ಸವಿರುಚಿಗೆ ಗ್ರಾಹಕರು ಮಾರು ಹೋಗಿದ್ದಾರೆ.
ತೋತಾಪುರಿ ಮಾವಿಗೆ ಬೆಂಬಲ ಬೆಲೆ ನೀಡುವ ವಿಚಾರವನ್ನು ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದರು. ಗೌರಿಬಿದನೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ತೋತಾಪುರಿ ಮಾವಿಗೆ ಬೆಂಬಲ ಬೆಲೆ ನೀಡುವಂತೆ ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮನವಿ ಮಾಡಿದ್ದಾರೆ. ಈ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.